Breaking: ‘ಕಲಾ ತಪಸ್ವಿ’ ರಾಜೇಶ್​ ನಿಧನ; ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಹಿರಿಯ ನಟ

| Updated By: shivaprasad.hs

Updated on: Feb 19, 2022 | 11:00 AM

Actor Rajesh Death: ಹಿರಿಯ ನಟ ರಾಜೇಶ್​ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

Breaking: ‘ಕಲಾ ತಪಸ್ವಿ’ ರಾಜೇಶ್​ ನಿಧನ; ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಹಿರಿಯ ನಟ
ಕಲಾ ತಪಸ್ವಿ ರಾಜೇಶ್​
Follow us on

ಚಂದನವನದ ಖ್ಯಾತ ನಟ ‘ಕಲಾ ತಪಸ್ವಿ’ ರಾಜೇಶ್​ (Kalatapasvi Rajesh) ಅವರು ಇಂದು ಮುಂಜಾನೆ (ಶನಿವಾರ, ಫೆ.19)​ ಕೊನೆಯುಸಿರು ಎಳೆದಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಫೆ.9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ರಾಜೇಶ್ (Actor Rajesh)​ ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ರಾಜೇಶ್​​ ಅವರಿಗೆ ವೆಂಟಿಲೇಟರ್​ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಕಡೆಗೂ ರಾಜೇಶ್​ ಬದುಕುಳಿಯಲಿಲ್ಲ ಎಂಬುದು ನೋವಿನ ಸಂಗತಿ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಆಪ್ತರು ಕಂಬಿನಿ ಮಿಡಿಯುತ್ತಿದ್ದಾರೆ. ರಾಜೇಶ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

1932ರ ಏ.15ರಂದು ಬೆಂಗಳೂರಿನಲ್ಲಿ ಜನಿಸಿದ್ದ ರಾಜೇಶ್, ಅಭಿನಯದ ಬಗ್ಗೆ ರಾಜೇಶ್​ ಅವರು ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಶಾಲಾ-ಕಾಲೇಜು ದಿನಗಳಲ್ಲಿ ಮನೆಯವರಿಗೆ ಗೊತ್ತಿಲ್ಲದಂತೆಯೇ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ರಾಜೇಶ್​ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿ ಚೌಡಪ್ಪ. ಬಳಿಕ ಅವರು ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ್​ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ‘ಕಲಾ ತಪಸ್ವಿ’ ರಾಜೇಶ್​ ಎಂದೇ ಅವರು ಫೇಮಸ್​ ಆದರು. 1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು.

ರಾಜೇಶ್​ ಅವರ ಪುತ್ರಿ ಆಶಾ ರಾಣಿ ಕೂಡ ಚಿತ್ರರಂಗದಲ್ಲಿ ಯಶಸ್ಸು ಕಂಡವರು. ಆಶಾ ರಾಣಿ ಅವರನ್ನು ನಟ ಅರ್ಜುನ್​ ಸರ್ಜಾ 1988ರಲ್ಲಿ ಮದುವೆ ಆದರು. ಹೀಗೆ ರಾಜೇಶ್​ ಅವರ ಕುಟುಂಬದ ಹಲವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಇಂದು ರಾಜೇಶ್​ ನಿಧನದಿಂದ ಶೋಕದ ವಾತಾವರಣ ನಿರ್ಮಾಣ ಆಗಿದೆ.

ಸೊಸೆ ತಂದ ಸೌಭಾಗ್ಯ, ದೇವರ ದುಡ್ಡ, ಕಲಿಯುಗ, ದೇವರ ಗುಡಿ, ವೀರ ಸಂಕಲ್ಪ, ಗಂಗೆ ಗೌರಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್​ ಬಣ್ಣ ಹಚ್ಚಿದ್ದರು. ಫೆ.25ರಂದು ಬಿಡುಗಡೆ ಆಗಲಿರುವ ‘ಓಲ್ಡ್​ ಮಾಂಕ್​’ ಸಿನಿಮಾದಲ್ಲಿ ಅವರೊಂದು ಅತಿಥಿ ಪಾತ್ರ ಮಾಡಿದ್ದರು. ಆದರೆ ಆ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ.

ಇದನ್ನೂ ಓದಿ:

Shamita Shetty: ಬಿಗ್​ ಬಾಸ್​ ಎಫೆಕ್ಟ್​; ಥೆರೆಪಿಗೆ ಒಳಗಾಗುತ್ತಿದ್ದಾರೆ ಶಮಿತಾ ಶೆಟ್ಟಿ

Published On - 7:14 am, Sat, 19 February 22