‘ನನ್ನ ಮತ್ತೊಬ್ಬ ತಾಯಿ’: ಬಿ. ಸರೋಜಾದೇವಿ ನೆನೆದು ಭಾವುಕರಾದ ಕಮಲ್ ಹಾಸನ್

ಬಹುಭಾಷಾ ನಟಿ ಬಿ. ಸರೋಜಾದೇವಿ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ತಮಿಳು ಚಿತ್ರರಂಗದ ಸ್ಟಾರ್ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಸಂತಾಪ ಸೂಚಿಸಿದ್ದಾರೆ. ಸರೋಜಾದೇವಿ ಅವರ ಜೊತೆಗಿನ ಒಡನಾಟವನ್ನು ಕಮಲ್ ಹಾಸನ್ ಸ್ಮರಿಸಿಕೊಂಡಿದ್ದಾರೆ.

‘ನನ್ನ ಮತ್ತೊಬ್ಬ ತಾಯಿ’: ಬಿ. ಸರೋಜಾದೇವಿ ನೆನೆದು ಭಾವುಕರಾದ ಕಮಲ್ ಹಾಸನ್
B Saroja Devi, Kamal Haasan

Updated on: Jul 14, 2025 | 7:27 PM

ನಟಿ ಬಿ. ಸರೋಜಾದೇವಿ (B Saroja Devi) ಅವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿ ಫೇಮಸ್ ಆಗಿದ್ದರು. ಇಂದು (ಜುಲೈ 14) ಅವರು ನಿಧನರಾಗಿದ್ದು, ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ತಮಿಳು ಚಿತ್ರರಂಗದ ಕಮಲ್ ಹಾಸನ್, ರಜನಿಕಾಂತ್ (Rajinikanth) ಕೂಡ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕಮಲ್ ಹಾಸನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬಿ. ಸರೋಜಾದೇವಿ ಬಗ್ಗೆ ಬರೆದುಕೊಂಡಿದ್ದಾರೆ. ‘ಸರೋಜಾ ದೇವಿ ಅಮ್ಮ ನನ್ನನ್ನು ಎಲ್ಲಿ ನೋಡಿದರೂ, ಯಾವುದೇ ವಯಸ್ಸಿನಲ್ಲಿಯೂ, ನನ್ನ ಕೆನ್ನೆಯನ್ನು ಬೆರಳಿನಿಂದ ಚಿವುಟಿ ಪ್ರೀತಿಯ ಮಗನೇ ಅಂತ ಕರೆಯುತ್ತಿದ್ದ ಮತ್ತೊಬ್ಬ ತಾಯಿ’ ಎಂದು ಕಮಲ್ ಹಾಸನ್ (Kamal Haasan) ನೆನಪಿಸಿಕೊಂಡಿದ್ದಾರೆ.

‘ಭಾಷೆ ಅಥವಾ ಪ್ರಾದೇಶಿಕ ಗಡಿಗಳಿಲ್ಲದೇ ಬದುಕಿದ ಕಲಾವಿದೆ ಬಿ. ಸರೋಜಾದೇವಿ ಅವರು ನಿಧನರಾಗಿದ್ದಾರೆ. ನನ್ನ ಎರಡನೇ ಸಿನಿಮಾ ಪಾರ್ಥಲ್ ಪಸಿ ತಿರುಮ್ ಚಿತ್ರೀಕರಣದ ಕ್ಷಣಗಳಿಂದ ಪ್ರಾರಂಭಿಸಿ, ನನ್ನ ಮನಸ್ಸಿನಲ್ಲಿ ಹಲವಾರು ಅಮರ ನೆನಪುಗಳು ತುಂಬಿ ತುಳುಕುತ್ತಿವೆ. ನನ್ನ ಕಣ್ಣುಗಳು ತೇವ ಆಗುತ್ತಿವೆ. ನನ್ನನ್ನು ನೋಡಲು ಯಾವಾಗಲೂ ಬಯಸುತ್ತಿದ್ದ ನನ್ನ ತಾಯಿಗೆ ನಾನು ನಮಸ್ಕರಿಸುತ್ತೇನೆ’ ಎಂದು ಕಮಲ್ ಹಾಸನ್ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
‘ಅತ್ಯಂತ ದುಃಖವಾಗಿದೆ’: ಬಿ. ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ದರ್ಶನ್
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಪುನೀತ್ ನನ್ನ ಮಗ ಆಗಿರಬೇಕಿತ್ತು ಎಂದುಕೊಂಡಿದ್ದ ಸರೋಜಾ ದೇವಿ
ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ

ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸರೋಜಾದೇವಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ‘ಲಕ್ಷಾಂತರ ಅಭಿಮಾನಿಗಳ ಹೃದಯಗಳನ್ನು ಸೂರೆಗೊಂಡ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಜನಿಕಾಂತ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಚಿತ್ರರಂಗಕ್ಕೆ ಸರೋಜಾದೇವಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.

ಮಂಗಳವಾರ (ಜುಲೈ 15) ಚನ್ನಪಟ್ಟಣದಲ್ಲಿರುವ ತೋಟದಲ್ಲಿ ಬಿ. ಸರೋಜಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಸರೋಜಾದೇವಿ ಅವರು ನಟಿಸಿದ್ದರು. ಬೆಂಗಳೂರಿನಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತು ಆಪ್ತರು ಬಂದು ಅಂತಿಮ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ನಟಿ ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ

ನಟ ದರ್ಶನ್ ಅವರು ಸರೋಜಾದೇವಿ ಆತ್ಮಕ್ಕೆ ಶಾಂತಿಕೋರಿದ್ದಾರೆ. ‘ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ. ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ದರ್ಶನ್ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.