ಗಮನಾರ್ಹ ಸಿನಿಮಾಗಳ ಮೂಲಕ ನಟ ರಿಷಿ (Kannada Actor Rishi) ಖ್ಯಾತಿ ಗಳಿಸಿದ್ದಾರೆ. ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರು ನಿರ್ಮಾಣ ಮಾಡಿದ್ದ ‘ಕವಲುದಾರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ರಿಷಿ ಅಭಿನಯಿಸಿದ್ದಾರೆ. ಆ ಮೂಲಕ ಅವರು ಕನ್ನಡಿಗರ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ, ‘ಶೈತಾನ್’ ವೆಬ್ ಸರಣಿ ಮೂಲಕ ತೆಲುಗು ಪ್ರೇಕ್ಷಕರನ್ನೂ ಅವರು ರಂಜಿಸಿದ್ದಾರೆ. ಈಗ ‘ರುದ್ರ ಗರುಡ ಪುರಾಣ’ (Rudra Garuda Purana) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಿಷಿ ಜನ್ಮದಿನದ (Rishi Birthday) (ಜೂನ್ 21) ಪ್ರಯುಕ್ತ ಈ ಸಿನಿಮಾ ತಂಡದಿಂದ ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ.
‘ರುದ್ರ ಗರುಡ ಪುರಾಣ’ ಚಿತ್ರತಂಡದವರು ಈ ಪೋಸ್ಟರ್ ಮೂಲಕ ರಿಷಿ ಅವರಿಗೆ ಜನ್ಮದಿನದ ಶುಭ ಹಾರೈಸಿದ್ದಾರೆ. ಈಗಾಗಲೇ ಈ ಸಿನಿಮಾಗೆ ಚಿತ್ರೀಕರಣ ಮುಕ್ತಾಯ ಆಗಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ. ರಿಷಿ ಅವರು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆಲವೇ ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಅದು ರಿಷಿ ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ.
ಅಶ್ವಿನಿ ಲೋಹಿತ್ ಅವರು ‘ಅಶ್ವಿನಿ ಆರ್ಟ್ಸ್’ ಬ್ಯಾನರ್ ಮೂಲಕ ಈ ‘ರುದ್ರ ಗರುಡ ಪುರಾಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೊದಲು ‘ಡಿಯರ್ ವಿಕ್ರಮ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಕೆ.ಎಸ್. ನಂದೀಶ್ ಅವರು ಈಗ ‘ರುದ್ರ ಗರುಡ ಪುರಾಣ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನು ಕೂಡ ಅವರೇ ಬರೆದಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ಸಂಭಾಷಣಾಕಾರ ಸಂಭಾಷಣೆ ರಘು ನಿಡುವಳ್ಳಿ ಅವರು ಈ ಸಿನಿಮಾಗೆ ಡೈಲಾಗ್ ಬರೆದಿದ್ದಾರೆ. ಕೆ.ಪಿ. ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಸಂದೀಪ್ ಕುಮಾರ್ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಮನು ಶೇಡ್ಗಾರ್ ಅವರು ಸಂಕಲನ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಿಷಿ ನಟನೆಯ ಹೊಸ ಸಿನಿಮಾಗೆ ‘ಸಂಜು ವೆಡ್ಸ್ ಗೀತಾ’ ನಿರ್ಮಾಪಕ ಪ್ರಮೋದ್ ನಾರಾಯಣ್ ಬಂಡವಾಳ
‘ರುದ್ರ ಗರುಡ ಪುರಾಣ’ ಸಿನಿಮಾದಲ್ಲಿ ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ಅಭಿನಯಿಸಿದ್ದಾರೆ. ವಿನೋದ್ ಆಳ್ವಾ, ಶಿವರಾಜ್ ಕೆ.ಆರ್. ಪೇಟೆ, ಅವಿನಾಶ್, ಗಿರಿ, ಕೆ.ಎಸ್. ಶ್ರೀಧರ್, ರಾಮ್ ಪವನ್, ಅಶ್ವಿನಿ ಗೌಡ, ವಂಶಿ, ಆಕರ್ಷ್, ಪ್ರಭಾಕರ್, ಜೋಸೆಫ್, ಗೌತಮ್ ಮೈಸೂರು, ರಂಗನಾಥ್ ಭಾರದ್ವಾಜ್, ಸ್ನೇಕ್ ಶ್ಯಾಮ್, ಕಾಮಿಡಿ ಕಿಲಾಡಿಗಳು ಜಗಪ್ಪ, ರಿದ್ವಿ, ಪ್ರಸನ್ನ ಹಂಡ್ರಂಗಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.