ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಕೆ.ವಿ.ರಾಜು (KV Raju) ನಿಧನರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಬೆಳಗ್ಗೆ 8ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ. ಹುಲಿಯಾ, ಬೆಳ್ಳಿ ಮೋಡ, ಇಂದ್ರಜಿತ್, ಬೆಳ್ಳಿ ಕಾಲುಂಗುರ, ಯುದ್ಧಕಾಂಡ ಸೇರಿ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಚಿತ್ರಕ್ಕೂ ಅವರು ನಿರ್ದೇಶಿಸಿದ್ದರು.
ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ರಾಜಾಜಿನಗರದ ನಿವಾಸದಲ್ಲಿ ಬೆಳಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ. ರಾಜಾಜಿನಗರದ ನಿವಾಸದಲ್ಲಿ ರಾಜು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಕೆವಿ ರಾಜು ಅವರು ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದ ಕೆವಿ ರಾಜು, 1982 ರಲ್ಲಿ ‘ಬಾಡದ ಹೂ’ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 1984 ರ ‘ಒಲವೇ ಬದುಕು’ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಚಿತ್ರರಂಗದ ಹಿಟ್ ನಿರ್ದೇಶಕರಾಗಿ ಅವರು ಜನಮೆಚ್ಚುಗೆ ಪಡೆದರು. ಸಂಗ್ರಾಮ (1987), ಬಂಧ ಮುಕ್ತ (1987), ಯುದ್ಧಕಾಂಡ (1989), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಮೂಲಕ ಅವರು ಬ್ಲಾಕ್ ಬಸ್ಟರ್ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದರು.
1991ರಲ್ಲಿ ‘ಇಂದ್ರಜಿತ್’ ಚಿತ್ರದ ಮೂಲಕ ಬಾಲಿವುಡ್ಗೂ ಕೆವಿ ರಾಜು ಪ್ರವೇಶಿಸಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಪ್ರದಾ ಆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಮತ್ತೆರಡು ಹಿಂದಿ ಚಿತ್ರಗಳಿಗೂ ಅವರು ಆಕ್ಷನ್ ಕಟ್ ಹೇಳಿದ್ದರು. ಕಾಲಾನಂತರದಲ್ಲಿ ರಾಜು ಅವರು ಸಂಭಾಷಣೆ ಹಾಗೂ ಬರಹಗಾರರಾಗಿ ಗುರುತಿಸಿಕೊಂಡರು. 2017ರಲ್ಲಿ ತೆರೆಗೆ ಬಂದ ಕನ್ನಡದ ‘ಟೈಗರ್ ಗಲ್ಲಿ’ ಚಿತ್ರಕ್ಕೆ ಅವರು ಚಿತ್ರಕತೆ ಹಾಗೂ ಸಂಭಾಷಣೆ ರಚಿಸಿದ್ದರು.
ಈಗಾಗಲೇ ಸಾಲುಸಾಲು ಆಘಾತದಿಂದ ಕುಗ್ಗಿರುವ ಕನ್ನಡ ಚಿತ್ರರಂಗ, ಹಿರಿಯ ನಿರ್ದೇಶಕ, ಬರಹಗಾರ ರಾಜು ಅವರ ನಿಧನದಿಂದ ಮತ್ತಷ್ಟು ಬಡವಾಗಿದೆ.
ಇದನ್ನೂ ಓದಿ:
ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್ ‘ಪುಟ್ಟಕ್ಕನ ಮಕ್ಕಳು’
Published On - 9:56 am, Fri, 24 December 21