2025ರಲ್ಲಿ ಕನ್ನಡ ಸಿನಿಮಾಗಳು ಸೋತಿದ್ದೇ ಜಾಸ್ತಿ; ಬುದ್ಧಿ ಕಲಿಯಬೇಕಾಗಿದ್ದು ಯಾರು?

2025ರ ವರ್ಷ ಮುಗಿದಿದೆ. ಈ ವರ್ಷ ಕನ್ನಡ ಚಿತ್ರರಂಗಕ್ಕೆ ಅಷ್ಟೇನೂ ಆಶಾದಾಯಕ ಆಗಿರಲಿಲ್ಲ. ಬೆರಳೆಣಿಕೆಯ ಸಿನಿಮಾಗಳು ಮಾತ್ರ ಗೆದ್ದಿವೆ. ಉಳಿದ ಸಿನಿಮಾಗಳು ಸೋತಿವೆ. ಸ್ಟಾರ್ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್​​ನಲ್ಲಿ ನೆಲಕಚ್ಚಿದ ಉದಾಹರಣೆ ಇದೆ. ಈ ಎಲ್ಲ ಸಂಗತಿಗಳಿಂದ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗಿದೆ.

2025ರಲ್ಲಿ ಕನ್ನಡ ಸಿನಿಮಾಗಳು ಸೋತಿದ್ದೇ ಜಾಸ್ತಿ; ಬುದ್ಧಿ ಕಲಿಯಬೇಕಾಗಿದ್ದು ಯಾರು?
2025 Kannada Movies

Updated on: Dec 31, 2025 | 4:33 PM

2025ರಲ್ಲಿ ಗೆದ್ದ ಕನ್ನಡ ಸಿನಿಮಾಗಳ (Kannada Movies) ಸಂಖ್ಯೆ ಕಡಿಮೆ. ಸೋಲಿನ ಸಂಖ್ಯೆಯೇ ಬಹುಪಾಲು ಇದೆ. ಆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕನ್ನಡ ಚಿತ್ರರಂಗ (Kannada Film Industry) ಎಲ್ಲಿ ಎಡವುತ್ತಿದೆ? ತಪ್ಪು ತಿದ್ದಿಕೊಳ್ಳಬೇಕಾಗಿದ್ದು ಯಾರು? ಯಾವ ರೀತಿ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಬಗ್ಗೆ ‘ಕರ್ನಾಟಕ ಬಾಕ್ಸ್ ಆಫೀಸ್’ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘2025 ಕನ್ನಡ ಚಿತ್ರರಂಗದ ಪಾಲಿಗೆ ಸವಾಲಿನ ವರ್ಷವಾಗಿತ್ತು ಎಂಬುದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇವೆ’ ಎನ್ನುವ ಮೂಲಕ ಈ ಬರಹ ಆರಂಭಿಸಲಾಗಿದೆ.

‘250ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆದರೂ, ಚಿತ್ರೋದ್ಯಮವು ಬಹಳ ಸೀಮಿತ ಯಶಸ್ಸನ್ನು ಕಂಡಿತು. ಕೇವಲ 4 ಅಥವಾ 5 ಸಿನಿಮಾಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಪರಿಣಾಮ ಬೀರಲು ವಿಫಲವಾದವು. ಇದು ಕಂಟೆಂಟ್ ಮತ್ತು ಪ್ರೇಕ್ಷಕರ ನಿರೀಕ್ಷೆಗಳ ನಡುವೆ ಹೆಚ್ಚುತ್ತಿರುವ ಅಂತರವನ್ನು ಸ್ಪಷ್ಟವಾಗಿ ತಿಳಿಸುತ್ತಿದೆ. ಒಳ್ಳೆಯ ಸ್ಕ್ರಿಪ್ಟ್‌ಗಳು, ಉತ್ತಮ ಯೋಜನೆ ಮತ್ತು ಹೆಚ್ಚು ಪ್ರಾಮಾಣಿಕ ಸಿನಿಮಾಗಳ ನಿರ್ಮಾಣ ಮಾಡುವುದು ತುರ್ತು ಅಗತ್ಯವಾಗಿದೆ.’

‘ದೊಡ್ಡ ಸ್ಟಾರ್ ಕಲಾವಿದರು, ಹೆಸರಾಂತ ನಿರ್ದೇಶಕರು, ಪ್ರಮುಖ ನಿರ್ಮಾಣ ಸಂಸ್ಥೆಗಳು ಮತ್ತು ಭರವಸೆಯ ಯುವ ಪ್ರತಿಭೆಗಳು ಕೂಡ ತಮ್ಮ ಅಹಂಕಾರವನ್ನು ಬದಿಗಿಟ್ಟು ಅರ್ಥಪೂರ್ಣ ಸಹಯೋಗದತ್ತ ಗಮನ ಹರಿಸಬೇಕು. ಆಗ ಮಾತ್ರ ನಾವು ನಿಜವಾಗಿಯೂ ಬಲವಾದ ಬಾಕ್ಸ್ ಆಫೀಸ್ ಸಂಖ್ಯೆಗಳನ್ನು ವೀಕ್ಷಿಸಬಹುದು. ಇನ್ನೂ ಹೆಚ್ಚು ಕಳವಳಕಾರಿ ಸಂಗತಿಯೆಂದರೆ, ಹಲವಾರು ದೊಡ್ಡ ಸಿನಿಮಾಗಳಿಗೆ ಒಟಿಟಿ ಮತ್ತು ಕಿರುತೆರೆ ಪ್ರಸಾರ ಹಕ್ಕುಗಳ ಮಾರಾಟ ಕೂಡ ಕಷ್ಟಕರವಾಗಿದೆ.’

‘ಟ್ರೆಂಡ್ ಫಾಲೋ ಮಾಡುವುದು ಬಿಟ್ಟು ಮೂಲಭೂತ ವಿಷಯಗಳಾದ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಪ್ರತಿಭೆ ಮೇಲಿನ ನಂಬಿಕೆಗೆ ಮರಳುವ ಸಮಯ ಇದು. ಪ್ರೇಕ್ಷಕರು ಯಾವಾಗಲೂ ಉತ್ತಮ ಸಿನಿಮಾ ನೋಡಲು ಸಿದ್ಧರಿರುತ್ತಾರೆ. ಸಿನಿಮಾವನ್ನು ಪಾಪರಾಜಿ ಸಂಸ್ಕೃತಿ, ಕೃತಕ ಖ್ಯಾತಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಸ್​​ಗಳಿಂದ ಗೊಂದಲಗೊಳಿಸಬೇಡಿ. ಲೈಕ್‌ಗಳು, ವೀಕ್ಷಣೆಗಳು ಮತ್ತು ಕಾಮೆಂಟ್‌ಗಳನ್ನು ಖರೀದಿಸುವ ರೀತಿಯಲ್ಲಿ ನೀವು ಪ್ರೇಕ್ಷಕರನ್ನು ಖರೀದಿಸಲು ಸಾಧ್ಯವಿಲ್ಲ.’

ಇದನ್ನೂ ಓದಿ: ‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

‘ನಿಜವಾದ ತಾರಾಪಟ್ಟವು ಸ್ಥಿರವಾದ ಪ್ರಯತ್ನ ಮತ್ತು ಗುಣಮಟ್ಟದ ಕಥೆ ಹೇಳುವಿಕೆಯ ಮೂಲಕ ನಿರ್ಮಿಸಲ್ಪಡುತ್ತದೆ. ಹೆಚ್ಚು ಕೆಲಸ ಮಾಡಿ, ಕಡಿಮೆ ಮಾತನಾಡಿ. ಒಂದು ಕಲಾ ಪ್ರಕಾರವಾಗಿ ಸಿನಿಮಾ ಗೌರವಕ್ಕೆ ಅರ್ಹವಾಗಿದೆ. ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ, ಪ್ರಾಮಾಣಿಕ ಕಥೆಗಳನ್ನು ಹೇಳಿ ಮತ್ತು ಕೆಲಸವೇ ಮಾತನಾಡಲು ಬಿಡಿ. ಏಕೆಂದರೆ ಇತಿಹಾಸವು ನಮಗೆ ತೋರಿಸಿರುವ ಪ್ರಕಾರ, ಕಲ್ಪಿತ ಸ್ಟಾರ್​ಡಮ್ ಮತ್ತು ಬಾಹ್ಯ ಪ್ರಚಾರವು ದೊಡ್ಡ ನಿರ್ದೇಶಕರು ಮತ್ತು ನಿರ್ಮಾಪಕರನ್ನು ಸಹ ಕೆಡವಬಲ್ಲದು’ ಎಂದು ‘ಕರ್ನಾಟಕ ಬಾಕ್ಸ್ ಆಫೀಸ್’ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:42 pm, Wed, 31 December 25