ಮಹಿಳೆಗೆ 92 ಲಕ್ಷ ರೂ. ವಂಚಿಸಿದ ಆರೋಪ; ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಕೇಸ್

ಶಿವರಾಜ್​ಕುಮಾರ್, ಗಣೇಶ್ ಜೊತೆ ಸಿನಿಮಾ ಮಾಡುವುದಾಗಿ ನಿರ್ಮಾಪಕ ಸೂರಪ್ಪ ಬಾಬು ಅವರು ಹೇಳಿಕೊಂಡಿದ್ದರು. ಈ ಸಿನಿಮಾದ ನಿರ್ಮಾಣಕ್ಕಾಗಿ ಮಹಿಳೆಯೊಬ್ಬರಿಂದ ಬರೋಬ್ಬರಿ 92 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಆದರೆ ಅವರು ಆ ಸಿನಿಮಾ ಮಾಡುತ್ತಿಲ್ಲ ಎಂಬುದು ನಂತರ ತಿಳಿದುಬಂತು. ಆಗ ಮಹಿಳೆ ಸಾಲ ವಾಪಸ್ ಕೇಳಿದರು.

ಮಹಿಳೆಗೆ 92 ಲಕ್ಷ ರೂ. ವಂಚಿಸಿದ ಆರೋಪ; ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಕೇಸ್
Soorappa Babu

Updated on: Jun 01, 2025 | 7:51 AM

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು (Soorappa Babu) ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ, ಮಹಿಳೆಯೊಬ್ಬರಿಂದ ಹಣ ಪಡೆದು, ಹಿಂದಿರುಗಿಸದ ಕಾರಣ ಸೂರಪ್ಪ ಬಾಬು ವಿರುದ್ಧ ದೂರು ನೀಡಲಾಗಿದೆ. ದೂರಿಗೆ ಸಂಬಂಧಪಟ್ಟಂತೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲು ಮಾಡಲಾಗಿದೆ. ಶಿವರಾಜ್​ಕುಮಾರ್, ಗಣೇಶ್ ಜೊತೆ ಸಿನಿಮಾ ಮಾಡುವುದಾಗಿ ನಂಬಿಸಿ, ಮಹಿಳೆಯಿಂದ ಸೂರಪ್ಪ ಬಾಬು ಹಣ ಪಡೆದಿದ್ದರು ಎನ್ನಲಾಗಿದೆ. ಆದರೆ ನಂತರ ಸಾಲ ವಾಪಸ್ ಕೇಳಿದಾಗ ಮಹಿಳೆಗೆ ಬೆದರಿಕೆ ಹಾಕಿದರು ಎಂಬ ಆರೋಪ ಎದುರಾಗಿದೆ.

ಪುನೀತ್ ರಾಜ್​ಕುಮಾರ್​ ನಟನೆಯ ‘ಪೃಥ್ವಿ’, ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಸೂರಪ್ಪ ಬಾಬು ಅವರು ಗುರುತಿಸಿಕೊಂಡಿದ್ದಾರೆ. ಈಗ ಅವರ ಮೇಲೆ ವಂಚನೆ ಆರೋಪ ಕೇಳಿಬಂದಿದೆ. ಸಿನಿಮಾ ನಿರ್ಮಾಣಕ್ಕಾಗಿ ಪರಿಚಿತ ಮಹಿಳೆಯಿಂದ ಹಣ ಪಡೆದು ವಂಚಿಸಿರುವ ಆರೋಪ ಅವರ ಮೇಲಿದೆ.

2023ರಲ್ಲಿ ಮಹಿಳೆಗೆ ನಿರ್ಮಾಪಕ ಸೂರಪ್ಪ ಬಾಬು ಪರಿಚಯವಾಗಿತ್ತು. ಶಿವರಾಜ್ ಕುಮಾರ್, ಗಣೇಶ್ ಜೊತೆ ತಾವು ಸಿನಿಮಾ ಮಾಡುತ್ತಿರುವುದಾಗಿ ಸೂರಪ್ಪ ಬಾಬು ನಂಬಿಸಿದ್ದರು. ಈ ಸಿನಿಮಾದ ನಿರ್ಮಾಣಕ್ಕಾಗಿ ಸಾಲ ಬೇಕು ಎಂದು ಮಹಿಳೆ ಬಳಿ ಅವರು ಕೇಳಿದ್ದರು. ಸಿನಿಮಾ ನಿರ್ಮಾಣಕ್ಕಾಗಿ ಆ ಮಹಿಳೆಯು ಹಂತ ಹಂತವಾಗಿ 92 ಲಕ್ಷ ರೂಪಾಯಿಗಳನ್ನು ನೀಡಿದರು.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಮಹಿಳೆಯಿಂದ ಹಣ ಪಡೆದು ಕೆಲವು ದಿನಗಳು ಕಳೆದ ನಂತರ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಶಿವರಾಜ್​ಕುಮಾರ್, ಗಣೇಶ್ ಜೊತೆ ಸೂರಪ್ಪ ಬಾಬು ಸಿನಿಮಾ ಮಾಡುತ್ತಿಲ್ಲ ಎಂಬುದು ಮಹಿಳೆಗೆ ಗೊತ್ತಾಯಿತು. ಬಳಿಕ ತಮ್ಮ ಹಣ ವಾಪಸ್ ನೀಡುವಂತೆ ಮಹಿಳೆ ಪಟ್ಟುಹಿಡಿದರು. ಅಲ್ಲಿಂದ ಕಿರಿಕ್ ಆರಂಭ ಆಯಿತು.

ಇದನ್ನೂ ಓದಿ: ‘ಬಾ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ’; ಸೂರಪ್ಪ ಬಾಬು ವಿರುದ್ಧ ಏಕವಚನದಲ್ಲಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್

ಬರೋಬ್ಬರಿ 92 ಲಕ್ಷ ರೂಪಾಯಿ ಸಾಲ ನೀಡಿದ್ದ ಮಹಿಳೆಯು ಹಣ ವಾಪಸ್ ಕೇಳಿದಾಗ ಸೂರಪ್ಪ ಬಾಬು ಅವರು ಕೇವಲ 25 ಲಕ್ಷ ರೂಪಾಯಿ ಹಿಂದಿರುಗಿಸಿದರು. ಆದರೆ ಇನ್ನುಳಿದ ಹಣವನ್ನು ವಾಪಸ್ ಕೇಳಿದಾಗ ಮಹಿಳೆಗೆ ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ. ಆದ್ದರಿಂದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರು ಆಧರಿಸಿ ಅಮೃತಹಳ್ಳಿ ಠಾಣೆ ಪೊಲೀಸರು ಎಫ್​ಐಆರ್​ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.