
ಈಗ ಎಲ್ಲೆಲ್ಲೂ ಅಯ್ಯಪ್ಪನ ಜಪವೇ ಕೇಳಿಬರುತ್ತಿದೆ. ಅಯ್ಯಪ್ಪ ಭಕ್ತರು ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಬರುತ್ತಿದ್ದಾರೆ. ಇಂಥ ಭಕ್ತಿಯ ವಾತಾವರಣ ಎಲ್ಲೆಲ್ಲೂ ತುಂಬಿರುವ ಈ ಸಂದರ್ಭದಲ್ಲೇ ಅಯ್ಯಪ್ಪ ಸ್ವಾಮಿ ಕುರಿತು ಕನ್ನಡದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾಗೆ ‘ಮಣಿಕಂಠ’ (Manikanta) ಎಂದು ಹೆಸರು ಇಡಲಾಗಿದೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ಸಮಾರಂಭ ಮಾಡಲಾಗಿದೆ. ಮಹಾಲಕ್ಷೀಪುರದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ದೇವಸ್ಥಾನದಲ್ಲಿ ‘ಮಣಿಕಂಠ’ ಸಿನಿಮಾಗೆ ಮುಹೂರ್ತ ನಡೆಯಿತು. ಈ ಸಿನಿಮಾ ತಂಡಕ್ಕೆ ಶುಭ ಹಾರೈಸಲು ಕಾಶಿಯಿಂದ ನಾಗಸಾಧುಗಳು (Naga Sadhus) ಆಗಮಿಸಿದ್ದರು ಎಂಬುದು ವಿಶೇಷ.
ನಾಗಸಾಧುಗಳ ಸಮ್ಮುಖದಲ್ಲಿ ‘ಮಣಿಕಂಠ’ ಸಿನಿಮಾಗೆ ಮುಹೂರ್ತ ಮಾಡಲಾಯಿತು. ‘ಅಶ್ವಿನಿ ಪ್ರೊಡಕ್ಷನ್ಸ್’ ಮೂಲಕ ಅಶ್ವಿನಿ ಸಂತೋಷ್ ಸಿಂಹ ಅವರು ಈ ಸಿನಿಮಾನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ, ಅವರೇ ಮುಖ್ಯ ಪಾತ್ರ ಕೂಡ ಮಾಡುತ್ತಿದ್ದಾರೆ. ಈವರೆಗೂ ಬೇರೆ ಸಿನಿಮಾಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡಿದ್ದ ಅವರು ಈಗ ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ.
ಸಂತೋಷ್ ಸಿಂಹ ಅವರೇ ಕಥೆ ಬರೆದು, ನಿರ್ದೇಶನ ಕೂಡ ಮಾಡಿದ್ದಾರೆ. ಅವರ ಇಬ್ಬರು ಮಕ್ಕಳು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಗುರು ಜೀವನ್ ಸಿಂಹ, ತನುಶ್ರೀ ಸಿಂಹ, ಬಿ.ಎಸ್. ಮಂಜುಳಾ, ಶರತ್ ಎಸ್.ಎಂ, ವೈಷ್ಣವಿ ಎಸ್.ಡಿ, ಮಮತಾ, ಶಿವಣ್ಣ ಮುಂತಾದ ಕಲಾವಿದರು ಕೂಡ ‘ಮಣಿಕಂಠ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸ್ವರೂಪ್ ಆರ್. ಅವರು ‘ಮಣಿಕಂಠ’ ಸಿನಿಮಾಗೆ ಸಂಗೀತ ಸಂಯೋಜಿಸುತಿದ್ದಾರೆ. 5 ಹಾಡುಗಳಿಗೆ ಚೇತನ್ ಕುಮಾರ್ ಸಾಹಿತ್ಯ ಬರೆಯಲಿದ್ದಾರೆ. ವರ್ಷಿತ್ ಎಸ್.ಎನ್. ಅವರು ಛಾಯಾಗ್ರಹಣ ಮತ್ತು ಸಂಕಲನ ಮಾಡುತ್ತಿದ್ದಾರೆ. ಗಣೇಶ್ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ. ಬೆಂಗಳೂರು, ಶಬರಿಮಲೆ, ಪಂಪ, ದೊಡ್ಡಪಾದ ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ನಡೆಯಲಿದೆ.
ಇದನ್ನೂ ಓದಿ: ಅಯ್ಯಪ್ಪ ಮಾಲೆ ಧರಿಸಿ, 18 ಮೆಟ್ಟಿಲು ಹತ್ತಿದ ಮೋಹನ್ಲಾಲ್: ವಿಡಿಯೋ
ಮುಹೂರ್ತದ ಬಳಿಕ ಸಂತೋಷ್ ಸಿಂಹ ಅವರು ಈ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಪ್ರತಿಯೊಬ್ಬರ ಜೀವನದಲ್ಲಿ ಮಣಿಕಂಠ ಆವರಿಸಿಕೊಂಡಿದ್ದಾನೆ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. 25 ವರ್ಷ ದೊಡ್ಡಪಾದಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿಯ ದರ್ಶನ ಮಾಡಿದ್ದೇನೆ. ನನ್ನ ಬದುಕಲ್ಲಿ ನಡೆದ ಸತ್ಯ ಘಟನೆಗಳನ್ನು ಹಾಗೂ ಸ್ವಾಮಿಯ ಪವಾಡಗಳನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.