ಚಂದನವನದಲ್ಲಿ (Sandalwood) ಹಲವು ವರ್ಷಗಳ ಅನುಭವ ಹೊಂದಿದ್ದ ನಟ, ನಿರ್ದೇಶಕ ಸಿ.ವಿ. ಶಿವಶಂಕರ್ ಅವರು ನಿಧನರಾಗಿದ್ದಾರೆ. ಇಂದು (ಜೂನ್ 27) ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಬದುಕು ಉಳಿಯಲಿಲ್ಲ ಎಂಬುದು ನೋವಿನ ಸಂಗತಿ. ಸಿ.ವಿ. ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ‘ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಅವರಿಗೆ ಇರಲಿಲ್ಲ. ಮಧ್ಯಾಹ್ನ ಊಟ ಮುಗಿಸಿದರು. ಪೂಜೆ ಮಾಡಿದ ಬಳಿಕ ಹಾರ್ಟ್ ಅಟ್ಯಾಕ್ ಆಯಿತು’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸಿ.ವಿ. ಶಿವಶಂಕರ್ (C V Shivashankar) ಅವರ ನಿಧನಕ್ಕೆ ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ. ಅಂತ್ಯಕ್ರಿಯೆ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಆರಂಭದಲ್ಲಿ ಸಿ.ವಿ. ಶಿವಶಂಕರ್ ಅವರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಬಾಲನಟನಾಗಿಯೇ ರಂಗಭೂಮಿ ಪ್ರವೇಶಿಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಸ್ಕೂಲ್ ಮಾಸ್ಟರ್’, ‘ಕೃಷ್ಣ ಗಾರುಡಿ’, ‘ರತ್ಮಮಂಜರಿ’, ‘ರತ್ನಗಿರಿ ರಹಸ್ಯ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಹಲವು ನಿರ್ದೇಶಕರ ಜೊತೆ ಸಹಾಯಕರಾಗಿ ಅನುಭವ ಪಡೆದ ಬಳಿಕ ‘ಮನೆ ಕಟ್ಟಿ ನೋಡು’ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು.
ಇದನ್ನೂ ಓದಿ: Kazan Khan: ಖ್ಯಾತ ಖಳನಟ ಕಝಾನ್ ಖಾನ್ ಇನ್ನಿಲ್ಲ; ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಕಲಾವಿದ
‘ಪದವೀಧರ’, ‘ನಮ್ಮ ಊರು’, ‘ಮಹಡಿಯ ಮನೆ’, ‘ಹೊಯ್ಸಳ, ‘ಮಹಾ ತಪಸ್ವಿ’, ‘ಕನ್ನಡ ಕುವರ’, ‘ವೀರ ಮಹಾದೇವ’ ಮತ್ತಿತರ ಸಿನಿಮಾಗಳಿಗೆ ಸಿ.ವಿ. ಶಿವಶಂಕರ್ ಅವರು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಗೀತರಚನಕಾರನಾಗಿಯೂ ಅವರು ಗುರುತಿಸಿಕೊಂಡಿದ್ದರು. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ..’ ಹಾಡನ್ನು ಬರೆಯುವ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:13 pm, Tue, 27 June 23