Mangli: ಕಣ್ಣೇ ಅದಿರಿಂದಿ ಗಾಯಕಿ ಮಂಗ್ಲಿಗೆ ಶಿವರಾಜ್​ಕುಮಾರ್​ ಸಿನಿಮಾದಲ್ಲಿ ನಟಿಸುವ ಅವಕಾಶ

ಶಿವರಾಜ್​ಕುಮಾರ್​ ಅವರ 124ನೇ ಸಿನಿಮಾದಲ್ಲಿ ಗಾಯಕಿ ಮಂಗ್ಲಿ ನಟಿಸಲಿದ್ದಾರೆ. ಅವರಿಗೆ ಹೊಂದಿಕೆ ಆಗುವಂತಹ ಪಾತ್ರ ಈ ಸಿನಿಮಾದಲ್ಲಿ ಏನಿರಬಹುದು ಎಂಬ ಕೌತುಕದ ಪ್ರಶ್ನೆ ಈಗ ಅಭಿಮಾನಿಗಳ ಮನದಲ್ಲಿ ಮೂಡಿದೆ.

Mangli: ಕಣ್ಣೇ ಅದಿರಿಂದಿ ಗಾಯಕಿ ಮಂಗ್ಲಿಗೆ ಶಿವರಾಜ್​ಕುಮಾರ್​ ಸಿನಿಮಾದಲ್ಲಿ ನಟಿಸುವ ಅವಕಾಶ
ಮಂಗ್ಲಿ - ಶಿವರಾಜ್​ಕುಮಾರ್​
Edited By:

Updated on: Apr 25, 2021 | 5:19 PM

ಒಂದೇ ಒಂದು ಹಾಡಿನಿಂದ ಕನ್ನಡಿಗರ ಮನ ಗೆದ್ದವರು ಗಾಯಕಿ ಮಂಗ್ಲಿ. ರಾಬರ್ಟ್​ ಸಿನಿಮಾದ ತೆಲುಗು ವರ್ಷನ್​ಗಾಗಿ ಅವರು ಹಾಡಿದ ‘ಕಣ್ಣೇ ಅದಿರಿಂದಿ’ ಗೀತೆ ಸೂಪರ್​ ಹಿಟ್​ ಆಗಿದೆ. ಅದು ತೆಲುಗು ಸಾಂಗ್​ ಆದರೂ ಕೂಡ ಕನ್ನಡಿಗರು ಅದಕ್ಕೆ ಮನಸೋತರು. ಅಂಥ ಮ್ಯಾಜಿಕ್​ಗೆ ಕಾರಣ ಆಗಿದ್ದು, ಗಾಯಕಿ ಮಂಗ್ಲಿ ಅವರ ಕಂಚಿನ ಕಂಠ. ಈಗ ಮಂಗ್ಲಿಗೆ ಇನ್ನೊಂದು ಬಂಪರ್​ ಆಫರ್​ ಸಿಕ್ಕಿದೆ.

ಇಷ್ಟು ದಿನ ‘ಕಣ್ಣೇ ಅದಿರಿಂದ’ ಹಾಡಿನ ಮೂಲಕ ಕರುನಾಡ ಜನತೆಯನ್ನು ತಮ್ಮತ್ತ ಸೆಳೆದುಕೊಂಡಿದ್ದ ಮಂಗ್ಲಿ ಈಗ ನಟನೆಯ ಮೂಲಕವೂ ಕನ್ನಡಿಗರಿಗೆ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದಾರೆ. ಕನ್ನಡದ ಸಿನಿಮಾಗಳಲ್ಲಿ ನಟಿಸುವಂತೆ ಅವರಿಗೆ ಬೇಡಿಕೆ ಬರುತ್ತಿದೆ. ಆ ಪೈಕಿ ಒಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಅದು ಶಿವರಾಜ್​ಕುಮಾರ್​ ನಟನೆಯ ಚಿತ್ರ ಎಂಬುದು ವಿಶೇಷ. ಸ್ಯಾಂಡಲ್​ವುಡ್​ನಲ್ಲಿ ಮಂಗ್ಲಿಗೆ ಇಂಥ ದೊಡ್ಡ ಅವಕಾಶ ಸಿಗುತ್ತಿರುವುದಕ್ಕೆ ಅವರ ಅಭಿಮಾನಿಗಳು ಖುಷಿ ಆಗಿದ್ದಾರೆ.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಬ್ಯುಸಿ ಆಗಿದ್ದಾರೆ. ಅವರ 124ನೇ ಸಿನಿಮಾಗೆ ತೆಲುಗಿನ ರಾಮ್​ ಧುಲಿಪುಡಿ ನಿರ್ದೇಶನ ಮಾಡಲಿದ್ದಾರೆ. ಬಾಲಶ್ರೀರಾಮ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಶ್ರೀಕಾಂತ್ ಧುಲಿಪುಡಿ, ಸ್ವಾತಿ ವನಪಲ್ಲಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಗಾಯಕಿ ಮಂಗ್ಲಿ ಕೂಡ ನಟಿಸಲಿದ್ದಾರೆ.

ಮಂಗ್ಲಿಗೆ ಹೊಂದಿಕೆ ಆಗುವಂತಹ ಪಾತ್ರ ಈ ಸಿನಿಮಾದಲ್ಲಿ ಏನಿರಬಹುದು ಎಂಬ ಕೌತುಕದ ಪ್ರಶ್ನೆ ಈಗ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಚಿತ್ರತಂಡ ಇನ್ನೂ ಉತ್ತರ ನೀಡಿಲ್ಲ. ಈ ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆ ಇಡಬೇಕಿದೆ. ನಾಜರ್, ಸಂಪತ್ ಹಾಗೂ ಸಾಧುಕೋಕಿಲ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ರವಿಕುಮಾರ್ ಸನಾ‌ ಅವರ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರವಿ‌ ಸಂತೆಹಕ್ಲು ಕಲಾ ನಿರ್ದೇಶನ ಮಾಡಲಿದ್ದಾರೆ. ಜೂನ್ ಮೊದಲ ವಾರದಲ್ಲಿ ಈ ಚಿತ್ರಕ್ಕೆ ಶೂಟಿಂಗ್​ ಆರಂಭಿಸಲಾಗುವುದು. 70 ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಕೈಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ ಎಂದು ಮಂಗ್ಲಿ ಟ್ವಿಟ್ ಮಾಡಿ ಹೇಳಿದ್ದೇನು?

ಡಿ ಬಾಸ್ ಫ್ಯಾನ್ಸ್‌ ಹಾಗು ಯಶ್ ಫ್ಯಾನ್ಸ್‌ಗೆ ಮಂಗ್ಲಿ ಏನ್ ಹೇಳಿದ್ರು ಗೊತ್ತಾ?