
ಭಾರತದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲ ದಿನಗಳಷ್ಟೆ ಬಾಕಿ ಇದೆ. ಪ್ಯಾನ್ ಇಂಡಿಯಾ ಸ್ಟಾರ್ ನಟ ರಿಷಬ್ ಶೆಟ್ಟಿ, ‘ಕಾಂತಾರ: ಚಾಪ್ಟರ್ 1’ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹಾಲಿವುಡ್ ರಿಪೋರ್ಟರ್’, ‘ಪಿಂಕ್ವಿಲ್ಲಾ’ ಇನ್ನೂ ಕೆಲವು ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಮ್ಯಾಗಜೀನ್, ಚಾನೆಲ್ಗಳಿಗೆ ಸಂದರ್ಶನ ಕೊಡುವುದರಲ್ಲಿ ರಿಷಬ್ ನಿರತರಾಗಿದ್ದಾರೆ. ಈ ವರೆಗೆ ಕನ್ನಡದ ಯಾವ ಮಾಧ್ಯಮಗಳ ಕೈಗೂ ರಿಷಬ್ ಶೆಟ್ಟಿ ನೇರವಾಗಿ ಸಿಕ್ಕಿಲ್ಲ. ಆದರೆ ಇದೇ ಮೊದಲ ಬಾರಿಗೆ ಟಿವಿ9 ಗೆ ವಿಶೇಷ ಸಂದರ್ಶನವನ್ನು ರಿಷಬ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಅವರು ನೀಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರಾರಂಭದ ಬಳಿಕ ರಿಷಬ್ ಶೆಟ್ಟಿ ಯಾವುದೇ ಮಾಧ್ಯಮಗಳಿಗೆ ಅದರಲ್ಲೂ ಕನ್ನಡದ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದೇ ಇಲ್ಲ. ಇದೀಗ ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರು ವಿಶೇಷವಾಗಿ ಟಿವಿ9ಗೆ ಸಂದರ್ಶನ ನೀಡಿದ್ದು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿಶೇಷತೆಗಳ ಬಗ್ಗೆ, ಸಿನಿಮಾ ಚಿತ್ರೀಕರಣದ ಅನುಭವಗಳ ಬಗ್ಗೆ, ಚಿತ್ರೀಕರಣ ನಡೆಸುವಾಗ ನಡೆದ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರ ಸಂದರ್ಶನ ಟಿವಿ9 ನಲ್ಲಿ ಇಂದು (ಸೆಪ್ಟೆಂಬರ್ 27) ಐದು ಗಂಟೆಗೆ ಪ್ರಸಾರ ಆಗಲಿದೆ. ಟಿವಿ ಚಾನೆಲ್ ಜೊತೆಗೆ ಟಿವಿ9 ಯೂಟ್ಯೂಬ್ನಲ್ಲಿಯೂ ಸಹ ರಿಷಬ್ ಹಾಗೂ ರುಕ್ಮಿಣಿ ವಸಂತ್ ಅವರ ವಿಶೇಷ ಸಂದರ್ಶನ ಪ್ರಸಾರ ಆಗಲಿದೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ರುಕ್ಮಿಣಿ ವಸಂತ್ ಆಯ್ಕೆ ಆಗಿದ್ದು ಹೇಗೆ?
ಸಂದರ್ಶನದ ವೇಳೆ, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕತೆ ಹುಟ್ಟಿದ ಬಗೆ, ಸಿನಿಮಾದ ಚಿತ್ರೀಕರಣ ನಡೆದ ಸ್ಥಳಗಳು, ಚಿತ್ರೀಕರಣದ ವೇಳೆ ನಡೆದ ಅವಘಡಗಳು, ಸಿನಿಮಾದ ಚಿತ್ರೀಕರಣ ಮಾಡುವಾಗ ದೊರೆತ ಪ್ರೇರಣೆ, ದೈವದ ಅನುಗ್ರಹ, ರಿಷಬ್ ಶೆಟ್ಟಿ ಪಟ್ಟ ಶ್ರಮ, ಸಿನಿಮಾದ ಇತರೆ ಪಾತ್ರವರ್ಗ, ಸಿನಿಮಾದ ಬಿಡುಗಡೆ, ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಯೋಜನೆ ಇನ್ನೂ ಹಲವು ವಿಷಯಗಳ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ನಟಿ ರುಕ್ಮಿಣಿ ವಸಂತ್ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದ ಅನುಭವ, ಅವರ ಮುಂದಿನ ಸಿನಿಮಾ ಯೋಜನೆಗಳು ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 02 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ದೇಶದಾದ್ಯಂತ ಬಿಡುಗಡೆ ಆಗಲಿದೆ. ದೇಶದಾದ್ಯಂತ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಸಹ ಸಿನಿಮಾ ಬಿಡುಗಡೆ ಆಗಲಿದೆ. ನ್ಯೂಜಿಲೆಂಡ್, ರಷ್ಯಾ, ಆಸ್ಟ್ರೇಲಿಯಾಗಳಂತಹಾ ದೇಶಗಳ ಜೊತೆಗೆ, ಭಾರತೀಯ ಸಿನಿಮಾಗಳಿಗೆ ಭಾರಿ ಮಾರುಕಟ್ಟೆ ಇರುವ ದುಬೈ, ಅಮೆರಿಕ, ಸಿಂಗಪುರಗಳಲ್ಲಿಯೂ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Sat, 27 September 25