‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ರುಕ್ಮಿಣಿ ವಸಂತ್ ಆಯ್ಕೆ ಆಗಿದ್ದು ಹೇಗೆ?
Rukmini Vasanth: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಅಷ್ಟಕ್ಕೂ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ನಟಿಸಲು ರುಕ್ಮಿಣಿ ವಸಂತ್ಗೆ ಅವಕಾಶ ಸಿಕ್ಕಿದ್ದು ಹೇಗೆ? ಅವರೇ ಹೇಳಿದ್ದಾರೆ ನೋಡಿ...

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳಷ್ಟೆ ಬಾಕಿ ಇದೆ. ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪಾತ್ರ, ಕತೆ, ಚಿತ್ರೀಕರಣ ಇನ್ನಿತರೆ ವಿಷಯಗಳನ್ನು ಸಖತ್ ಗುಟ್ಟಾಗಿ ಚಿತ್ರತಂಡ ಇರಿಸಿತ್ತು. ಸಿನಿಮಾದಲ್ಲಿ ನಾಯಕಿಯಾಗಿ ಯಾರು ನಟಿಸಿದ್ದಾರೆ ಎಂಬುದು ಸಹ ಬಹಳ ಇತ್ತೀಚೆಗೆ ಬಹಿರಂಗಪಡಿಸಿತು ಚಿತ್ರತಂಡ. ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ರುಕ್ಮಿಣಿ ವಸಂತ್, ಕನಕವತಿ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ರುಕ್ಮಿಣಿ ವಸಂತ್, ತಮಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅವಕಾಶ ಸಿಕ್ಕಿದ್ದು ಹೇಗೆಂದು ವಿವರಿಸಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿಗೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದ್ದು, ಅವರ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಿಂದ ಅಂತೆ. ರುಕ್ಮಿಣಿ ವಸಂತ್ ವಿವರಿಸಿರುವಂತೆ, ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಎರಡೂ ಭಾಗಗಳ ಪ್ರೀಮಿಯರ್ ಶೋಗೆ ರಿಷಬ್ ಶೆಟ್ಟಿ ಬಂದಿದ್ದರು. ಎರಡೂ ಸಿನಿಮಾಗಳು ಅವರಿಗೆ ಇಷ್ಟವಾದವು, ಎರಡೂ ಸಿನಿಮಾಗಳಲ್ಲಿನ ನನ್ನ ನಟನೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಪಾತ್ರಗಳ ಆಯ್ಕೆಯೂ ನಡೆಯುತ್ತಿತ್ತಂತೆ.
ಪಾತ್ರಗಳ ಆಯ್ಕೆ ಬಗ್ಗೆ ಚರ್ಚೆ ನಡೆಯುವಾಗ ರಿಷಬ್ ಅವರೇ ರುಕ್ಮಿಣಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ. ಬಳಿಕ ಎಲ್ಲರೂ ರುಕ್ಮಿಣಿ ಅವರನ್ನು ನಾಯಕಿಯಾಗಿ ಹಾಕಿಕೊಳ್ಳಬಹುದು ಎಂದಾಗ ಅವರನ್ನು ಸಂಪರ್ಕಿಸಿ, ಕತೆ ಹೇಳಲಾಯ್ತಂತೆ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಲು ಸಾಕಷ್ಟು ಹೊಸ ವಿಷಯಗಳನ್ನು ಕಲಿಯಬೇಕಾಯ್ತು, ಸಾಕಷ್ಟು ಶ್ರಮ ಪಡಬೇಕಾಯ್ತು ಎಂದು ರುಕ್ಮಿಣಿ ವಸಂತ್ ಹೇಳಿದ್ದಾರೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಜೂ. ಎನ್ಟಿಆರ್ ಅತಿಥಿ
‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ನಟಿಸಲು ಕುದುರೆ ಓಡಿಸುವುದು ಕಲಿತೆ, ಕತ್ತಿ ವರಸೆ ಕಲಿತೆ, ಕರಾವಳಿ ಭಾಗದ ಭಾಷೆ ಕಲಿತೆ, ಕೆಲವು ಆಕ್ಷನ್ ದೃಶ್ಯಗಳನ್ನು ಸಹ ಕಲಿತೆ. ಅಲ್ಲಿನ ಇತಿಹಾಸ, ಅಲ್ಲಿನ ಸಂಸ್ಕೃತಿಯ ಪರಿಚಯ ನನಗೆ ಆಯಿತು’ ಎಂದು ರುಕ್ಮಿಣಿ ವಸಂತ್ ಹೇಳಿಕೊಂಡಿದ್ದಾರೆ. ಇನ್ನು ಚಿತ್ರೀಕರಣದ ಸಮಯದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಹಲವರು ತಮಗೆ ಸಹಾಯ, ಸಹಕಾರ ನೀಡಿದ್ದಾಗಿಯೂ ಸಹ ರುಕ್ಮಿಣಿ ವಸಂತ್ ಹೇಳಿಕೊಂಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾನ ಅಕ್ಟೋಬರ್ 02 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕರ್ನಾಟಕದವರೇ ಆದರೂ ಬಾಲಿವುಡ್ನಲ್ಲಿ ಮಿಂಚುತ್ತಿರುವ ಗುಲ್ಶನ್ ದೇವಯ್ಯ, ತಮಿಳು ನಟ ಜಯರಾಂ, ನಟ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಸಿನಿಮಾಟೊಗ್ರಫಿ ಸಿನಿಮಾಕ್ಕೆ ಇದೆ. ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




