‘ಕಾಂತಾರ: ಚಾಪ್ಟರ್ 1’ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಜೂ. ಎನ್ಟಿಆರ್ ಅತಿಥಿ
ಹೈದರಾಬಾದ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಲಿದೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಇವೆಂಟ್ ಜರುಗಲಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ..

ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಿಡುಗಡೆಯತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಅಕ್ಟೋಬರ್ 2ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಪ್ರಚಾರ ಕಾರ್ಯವನ್ನು ಭರದಿಂದ ಮಾಡಲಾಗುತ್ತಿದೆ. ವಿವಿಧ ನಗರಗಳಿಗೆ ತೆರಳಿ ಚಿತ್ರತಂಡ ಸುದ್ದಿಗೋಷ್ಠಿ ಮಾಡಿದೆ. ಇತ್ತೀಚೆಗೆ ಬಿಡುಗಡೆ ಆದ ಟ್ರೇಲರ್ ಸಖತ್ ಸದ್ದು ಮಾಡಿದೆ. ಈಗ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಇವೆಂಟ್ಗೆ ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ (Jr NTR) ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಜೂನಿಯರ್ ಎನ್ಟಿಆರ್ ಮತ್ತು ರಿಷಬ್ ಶೆಟ್ಟಿ ನಡುವೆ ಉತ್ತಮ ಸ್ನೇಹ ಇದೆ. ರಿಷಬ್ ಶೆಟ್ಟಿ ಅವರು ಕುಂದಾಪುರದವರು. ಜೂನಿಯರ್ ಎನ್ಟಿಆರ್ ಅವರಿಗೆ ಕುಂದಾಪುರ ಎಂದರೆ ವಿಶೇಷ ಪ್ರೀತಿ. ಕನ್ನಡ ಚಿತ್ರರಂಗದ ಬಗ್ಗೆ ಅವರು ಗೌರವ ಹೊಂದಿದ್ದಾರೆ. ಈಗ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಹೈದರಾಬಾದ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಜೆಆರ್ಸಿ ಕನ್ವೆನ್ಷನ್ ಹಾಲ್ನಲ್ಲಿ ಸಾವಿರಾರು ಅಭಿಮಾನಿಗಳ ಎದುರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜೂನಿಯರ್ ಎನ್ಟಿಆರ್ ಬರುತ್ತಾರೆ ಎಂದರೆ ಅವರನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಹಾಗಾಗಿ ಈ ಕಾರ್ಯಕ್ರಮ ಸಖತ್ ಅದ್ದೂರಿಯಾಗುವುದು ಗ್ಯಾರಂಟಿ.
View this post on Instagram
ಈ ಮೊದಲು ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ತೆಲುಗಿನಲ್ಲಿ ಕೂಡ ಸೂಪರ್ ಹಿಟ್ ಆಗಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆಲುಗಿಗೂ ಡಬ್ ಆಗಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಅಲ್ಲದೇ, ರಿಷಬ್ ಶೆಟ್ಟಿ ಅವರು ಈಗಾಗಲೇ ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೂ ಮುನ್ನ ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ
ಈಗಾಗಲೇ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಜನರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಮೊದಲ ದಿನ ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ರುಕ್ಮಿಣಿ ವಸಂತ್, ರಿಷಬ್ ಶೆಟ್ಟಿ, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ವಿಜಯ್ ಕಿರಗಂದೂರು ಅವರು ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




