’ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ

Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದ ಚಿತ್ರೀಕರಣದ ವೇಳೆ ಒಂದರ ಹಿಂದೊಂದರಂತೆ ಅವಘಡಗಳು ಸಂಭವಿಸುತ್ತಲೇ ಇವೆ. ಸಿನಿಮಾನಲ್ಲಿ ನಟಿಸಿದ್ದ ಮೂವರು ಈಗಾಗಲೇ ಪ್ರಾಣ ಬಿಟ್ಟಿದ್ದಾರೆ. ಇದೀಗ ಮತ್ತೊಂದು ದೊಡ್ಡ ಅವಘಡ ನಡೆದಿದೆ.

’ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ
Kantara 1
Updated By: Digi Tech Desk

Updated on: Jun 15, 2025 | 12:04 AM

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಿನಿಮಾ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್​ನಲ್ಲಿ ಸಂಭವಿಸಿದೆ. ಆದರೆ ಯಾವುದೇ ಪ್ರಾಣಾಪಾಯ ನಡೆದಿರುವ ವರದಿ ಆಗಿಲ್ಲ.

‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಬೋಟ್ ಒಂದು ಮುಗಿಚಿದೆಯಂತೆ. ಬೋಟ್​​ನಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಕಲಾವಿದರು, ಹಾಗೂ ತಂತ್ರಜ್ಞರು ಇದ್ದರೆಂದು ವರದಿ ಆಗಿದೆ. ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಬೋಟು ಮುಗಿಚಿದೆ ಆದರೆ ಯಾವುದೇ ಜೀವ ಹಾನಿ ಆಗಿಲ್ಲ. ಕಲಾವಿದರು, ತಂತ್ರಜ್ಞರೆಲ್ಲರೂ ಈಜಿಕೊಂಡು ದಡಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಕತ್ತಲಿನಲ್ಲೇ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿತ್ತು. ದೋಣಿ ಮುಗಿಚಿದರೂ ಕಲಾವಿದರು ಮತ್ತು ತಂತ್ರಜ್ಞರು ಸೇಫ್ ಆಗಿದ್ದಾರಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿವೆ ಎನ್ನಲಾಗುತ್ತಿದೆ. ಆದರೆ ಈ ಘಟನೆ, ಈಗಾಗಲೇ ಹೆದರಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡವನ್ನು ಮತ್ತಷ್ಟು ಹೆದರಿಸಿದೆ.

ಇದನ್ನೂ ಓದಿ:ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರಕ್ಕೆ ಸಾಲು ಸಾಲು ಹಿನ್ನಡೆ; ದೈವದ ಎಚ್ಚರಿಕೆ ನಿಜವಾಯ್ತಾ?

‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೆಟ್​ನಲ್ಲಿ ಸರಣಿ ಅವಘಡಗಳು ನಡೆಯುತ್ತಲೇ ಇವೆ. ಮೊದಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾಣಬಿಟ್ಟರು. ಅದಾದ ಮೇಲೆ ಸಿನಿಮಾನಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಕೆಲ ದಿನಗಳ ಹಿಂದಷ್ಟೆ ವಿಜು ವಿಕೆ ಎಂಬ ಕೇರಳದ ಕಲಾವಿದ ಮೃತಪಟ್ಟರು. ಅವರು ಸಹ ‘ಕಾಂತಾರ’ ಸಿನಿಮಾನಲ್ಲಿ ನಟಿಸುತ್ತಿದ್ದರು. ಇದೆಲ್ಲದರ ಬಳಿಕ ಈಗ ದೋಣಿಯೇ ಮುಗಿಚಿದೆ. ಆದರೆ ಯಾವುದೇ ಜೀವಹಾನಿ ಸಂಭವಿಸಿದ ವರದಿ ಈ ವರೆಗೆ ಆಗಿಲ್ಲ.

‘ಕಾಂತಾರ’ ಸಿನಿಮಾ ಅದ್ಭುತ ಯಶಸ್ಸಿನಿಂದ ಪ್ರೇರಿತಗೊಂಡು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ಮಿಸಲಾಗುತ್ತಿದೆ. ‘ಕಾಂತಾರ’ ಸಿನಿಮಾನಲ್ಲಿ ನೋಡಿದ ಕತೆಗಿಂತಲೂ ಹಿಂದಿನ ಕತೆಯನ್ನು ‘ಕಾಂತಾರ ಚಾಪ್ಟರ್ 1’ ಒಳಗೊಂಡಿರಲಿದೆ. ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಊರು ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಕೇರಳದ ಕಲಾವಿದರನ್ನು ಹೆಚ್ಚಿಗೆ ಬಳಸಿಕೊಳ್ಳಲಾಗಿದೆ. ಸಿನಿಮಾಕ್ಕೆ ಹಾಲಿವುಡ್​ನ ಪ್ರತಿಷ್ಠಿತ ತಂತ್ರಜ್ಞರಿಂದ ವಿಎಫ್​ಎಕ್ಸ್, ಆಕ್ಷನ್ ದೃಶ್ಯಗಳ ಸಂಯೋಜನೆಯನ್ನು ಮಾಡಿಸಲಾಗುತ್ತಿದೆ. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ತೊಡಗಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Sat, 14 June 25