ಅಮೆರಿಕನಲ್ಲಿ ಶುರು ‘ಕಾಂತಾರ’ ಹವಾ, ಪ್ರೀಮಿಯರ್ ಶೋ ಬುಕಿಂಗ್ ಆರಂಭ
Kantara Chapter 1: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹವಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಜೋರಾಗಿದೆ. ಅಮೆರಿಕದಲ್ಲಿ ಸಿನಿಮಾದ ಪ್ರೀಮಿಯರ್ ಶೋ ದಿನಾಂಕ ನಿಗದಿ ಆಗಿದ್ದು, ಅಡ್ವಾನ್ಸ್ ಬುಕಿಂಗ್ ಸಹ ಆರಂಭವಾಗಿದೆ. ಅಮೆರಿಕದಲ್ಲಿ ಮಾತ್ರವೇ ಅಲ್ಲದೆ ವಿಶ್ವದ ಹಲವು ದೇಶಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

ಹೊಂಬಾಳೆ (Hombale) ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೆ, ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಮುಂದಾಗಿದೆ. ಕನ್ನಡ ಸಿನಿಮಾಗಳು ಹಿಂದೆಂದೂ ಬಿಡುಗಡೆ ಆಗದ ಕೆಲವು ದೇಶಗಳಲ್ಲಿ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ‘ಕಾಂತಾರ’ ಹವಾ ಜೋರಿದ್ದು, ಈಗಾಗಲೇ ಸಿನಿಮಾದ ಪ್ರೀಮಿಯರ್ ಶೋ ದಿನಾಂಕ ನಿಗದಿಯಾಗಿ ಅಡ್ವಾನ್ಸ್ ಬುಕಿಂಗ್ ಸಹ ಆರಂಭವಾಗಿದೆ.
ಭಾರತದ ಸಿನಿಮಾಗಳಿಗೆ ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳಿಗೆ ಉತ್ತರ ಅಮೆರಿಕ ಬಲು ದೊಡ್ಡ ಮಾರುಕಟ್ಟೆ. ನಾರ್ತ್ ಅಮೆರಿಕದಲ್ಲಿ ಸಾವಿರಾರು ಭಾರತೀಯ ಕುಟುಂಬಗಳಿದ್ದು ಇಡೀ ಅಮೆರಿಕಕ್ಕೆ ಹೋಲಿಸಿದರೆ ನಾರ್ತ್ ಅಮೆರಿಕದಲ್ಲಿ ಮಾತ್ರವೇ ದಕ್ಷಿಣ ಭಾರತದ ಸಿನಿಮಾಗಳ ಕಲೆಕ್ಷನ್ ಮೂರು ಪಟ್ಟು ಹೆಚ್ಚಾಗಿರುತ್ತದೆ. ಇದೀಗ ‘ಕಾಂತಾರ’ ಸಹ ನಾರ್ತ್ ಅಮೆರಿಕನಲ್ಲಿ ತನ್ನ ಜಲ್ವಾ ತೋರಿಸಲು ಸಜ್ಜಾಗಿದೆ.
ಉತ್ತರ ಅಮೆರಿಕನಲ್ಲಿ ಪ್ರತ್ಯಂಗಿರ ಯುಎಸ್ ಎಂಬ ಸ್ಥಳೀಯ ಭಾರತೀಯ ಮೂಲದ ಸಂಸ್ಥೆಗೆ ಸಿನಿಮಾದ ವಿತರಣೆ ಹಕ್ಕು ನೀಡಲಾಗಿದ್ದು, ಅಕ್ಟೋಬರ್ 01 ರಂದೇ ಅಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ. ಅಕ್ಟೋಬರ್ 1 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನಗೊಳ್ಳಲಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ.
View this post on Instagram
ಮತ್ತೊಂದು ವಿಶೇಷವೆಂದರೆ ಪ್ರೀಮಿಯರ್ ಶೋಗೆ ಸಿನೆಮಾರ್ಕ್ ಅಪ್ಲಿಕೇಶನ್ ಬಳಸಿ ಅಮೆರಿಕದಲ್ಲಿ ಟಿಕೆಟ್ ಬುಕಿಂಗ್ ಮಾಡಿದರೆ, ಬುಕ್ ಮಾಡಿದ ಕೂಡಲೇ ‘ಕಾಂತಾರ’ ಸಿನಿಮಾದ ಲೋಗೊ ಪ್ರದರ್ಶನ ಆಗಲಿದೆ. ಹೀಗೊಂದು ಭಿನ್ನ ಪ್ರಯತ್ನವನ್ನು ಅಮೆರಿಕನಲ್ಲಿ ಮಾಡಲಾಗಿದೆ. ಭಾರತದಲ್ಲಿಯೂ ಇದನ್ನು ಪ್ರಯೋಗಿಸಲಾಗತ್ತದೆಯೇ ಕಾದು ನೋಡಬೇಕಿದೆ. ಅಮೆರಿಕ ಮಾತ್ರವೇ ಅಲ್ಲದೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನೂ ಕೆಲವು ದೇಶಗಳಲ್ಲಿ ಏಕಕಾಲದಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 22 ರಂದು ಮಧ್ಯಾಹ್ನ ಬಿಡುಗಡೆ ಆಗಲಿದೆ. ಟ್ರೈಲರ್ ಬಿಡುಗಡೆ ಮೂಲಕ ಸಿನಿಮಾದ ಪ್ರಚಾರಕ್ಕೆ ಅದ್ಧೂರಿ ಚಾಲನೆ ದೊರಕಲಿದ್ದು, ರಿಷಬ್ ಶೆಟ್ಟಿ ದೇಶದಾದ್ಯಂತ ಓಡಾಡಿ ಪ್ರಮುಖ ನಗರಗಳಲ್ಲಿ ಸಿನಿಮಾದ ಪ್ರಚಾರವನ್ನು ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




