
ಕರ್ನಾಟಕದಲ್ಲಿ 200 ರೂಪಾಯಿ ಸಿನಿಮಾ ಟಿಕೆಟ್ ದರ (Movie Ticket Price) ನಿಗದಿ ಮಾಡಲಾಗಿದೆ. ಈ ಮೊದಲು ಇದ್ದ ದುಬಾರಿ ಟಿಕೆಟ್ ಬೆಲೆಗೆ ಕಡಿವಾಣ ಹಾಕಲು ಈ ಆದೇಶ ನೀಡಲಾಗಿದೆ. ಇತ್ತೀಚೆಗೆ ಈ ನಿಯಮ ಜಾರಿಗೆ ಬಂದಿದೆ. ಇದರಿಂದಾಗಿ ಪ್ರೇಕ್ಷಕರಿಗೆ ಅನುಕೂಲ ಆಗಲಿದೆ. ಆದರೆ ಕೆಲವರು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಮಲ್ಟಿಪ್ಲೆಕ್ಸ್ ಒಕ್ಕೂಟವು (Multiplex Association) ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಬಿಡುಗಡೆಗೂ ಮುನ್ನ ಈ ಬೆಳವಣಿಗೆ ನಡೆದಿದೆ.
ಸೆಪ್ಟೆಂಬರ್ 16ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಕ್ಟೋಬರ್ 2ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾ ಟಿಕೆಟ್ ದರ ಕಡಿಮೆ ಮಾಡಿರುವುದರಿಂದ ಕಲೆಕ್ಷನ್ ಕಡಿಮೆ ಆಗುವ ಸಾಧ್ಯತೆ ಇದೆ. ಮುಂಬರುವ ಹಲವು ಬಿಗ್ ಬಜೆಟ್ ಸಿನಿಮಾಗಳಿಗೂ ಇದರ ಬಿಸಿ ತಟ್ಟಬಹುದು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಲಾಗಿದೆ.
ಆಂಧ್ರದಲ್ಲಿ ಕೂಡ ಟಿಕೆಟ್ ಬೆಲೆ ಏರಿಕೆಗೆ ಕಡಿವಾಣ ಇದೆ. ಆದರೆ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆದಾಗ ನಿರ್ಮಾಪಕರು ಸರ್ಕಾರದ ಬಳಿ ಅರ್ಜಿ ಹಾಕಿಕೊಂಡು ಬಿಡುಗಡೆ ಆದ ಮೊದಲ ವಾರ ಅಥವಾ 3 ದಿನ ಅಥವಾ 10 ದಿನಗಳ ಅವಧಿಯವರೆಗೆ ಟಿಕೆಟ್ ಬೆಲೆಯನ್ನು ಹೆಚ್ಚು ಮಾಡಲು ಅನುಮತಿ ಪಡೆಯುವ ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿ ಕೂಡ ಈ ರೀತಿ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’: ರಿಷಬ್ ಶೆಟ್ಟಿಯ ಕೊಂಡಾಡಿದ ಪರಭಾಷೆ ಖ್ಯಾತ ಕಲಾ ನಿರ್ದೇಶಕ
ಕರ್ನಾಟಕದಲ್ಲಿ ಹಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 1ರಂದು ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಆಗಲಿದೆ. ಡಿಸೆಂಬರ್ ತಿಂಗಳಲ್ಲಿ ದರ್ಶನ್ ನಟನೆಯ ‘ಡೆವಿಲ್’, ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Mon, 15 September 25