ಕೋರ್ಟ್ ಆದೇಶ ಕೊಟ್ಟರೂ ದರ್ಶನ್ಗೆ ಜೈಲಲ್ಲಿ ಸಿಗುತ್ತಿಲ್ಲ ಸೌಲಭ್ಯ; ಅಳಲು ತೋಡಿಕೊಂಡ ದಾಸ
ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಇದಕ್ಕೆ ಅವಕಾಶ ಕೊಟ್ಟಿತ್ತು. ಆದರೆ, ಈಗ ಕೋರ್ಟ್ ಆದೇಶದ ಮಧ್ಯೆಯೂ ಅವರಿಗೆ ವ್ಯವಸ್ಥೆ ಸಿಗುತ್ತಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ.

ನಟ ದರ್ಶನ್ (Darshan) ಅವರಿಗೆ ಜೈಲಿನಲ್ಲಿ ಹಾಸಿಗೆ, ದಿಂಬು, ಬೆಡ್ಶೀಟ್ ನೀಡುವಂತೆ ಬೆಂಗಳೂರಿನ ಕೆಳ ಹಂತದ ಕೋರ್ಟ್ ಆದೇಶ ಕೊಟ್ಟಿತ್ತು. ಆದರೆ, ಇದಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ದರ್ಶನ್ ಅವರು ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ. ಹಿಂದಿನ ಸ್ಥಿತಿಯೇ ಮುಂದುವರಿದಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಕೆಳ ಹಂತದ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದರು. ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರನ್ನು ಇಡಲಾಯಿತು. ಈ ವೇಳೆ ಅವರು ಸಾಕಷ್ಟು ಸೌಲಭ್ಯ ಪಡೆಯುತ್ತಿದ್ದರು ಎನ್ನಲಾಗಿದೆ. ನಂತರ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಅಲ್ಲಿರುವಾಗ ಜಾಮೀನು ದೊರೆತಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದು ಮಾಡಿತ್ತು. ಈ ವೇಳೆ ಹೆಚ್ಚುವರಿ ಸೌಲಭ್ಯ ನೀಡದಂತೆ ಎಚ್ಚರಿಸಿತ್ತು.
ಕೋರ್ಟ್ ಮೊರೆ ಹೋಗಿದ್ದ ದರ್ಶನ್ ಅವರು, ಹೆಚ್ಚುವರಿ ದಿಂಬು, ಹಾಸಿಗೆ ಹಾಗೂ ಬೆಡ್ಶೀಟ್ಗೆ ಮನವಿ ಮಾಡಿದ್ದರು. ಜೊತೆಗೆ ಕೋರ್ಟ್ ಆವರಣದಲ್ಲಿ ವಾಕಿಂಗ್ಗೂ ಅವಕಾಶ ಕೋರಿದ್ದರು. ಆದರೆ, ಕೋರ್ಟ್ ಆದೇಶವನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಜೈಲಿನಲ್ಲಿರುವಾಗ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ; ಕಳುವಾಗಿದ್ದೇನು?
‘ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆ ವಾಕಿಂಗ್ಗೆ ಅವಕಾಶ ನೀಡಲಾಗಿದೆ. ದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ನೀಡಿಲ್ಲ. ಹಾಸಿಗೆ, ದಿಂಬು, ಬೆಡ್ಶೀಟ್ ಕೇಳಿದರೂ ನೀಡಿಲ್ಲ. ಹಿಂದಿನ ಸ್ಥಿತಿಯೇ ಮುಂದುವರಿದಿದೆ. ಕೋರ್ಟ್ ಆದೇಶ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ದರ್ಶನ್ ಪರ ವಕೀಲರು ಕೋರ್ಟ್ನಲ್ಲಿ ಹೇಳಿದ್ದಾರೆ.
ವಿಷ ಕೇಳಿದ್ದ ದಾಸ
ಜೈಲಿನ ಕಠಿಣ ನಿಯಮಗಳು ದರ್ಶನ್ ಅವರನ್ನು ಧೃತಿಗೆಡವವುಂತೆ ಮಾಡಿತ್ತು. ಅವರು ಇದರಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಹೀಗಾಗಿ, ಬೆಡ್ಶೀಟ್, ತಲೆದಿಂಬಿಗೆ ಅವರು ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ ಬಂದಿತ್ತು. ಈ ವೇಳೆ ದರ್ಶನ್ ಜಡ್ಜ್ ಎದುರೇ ವಿಷ ಕೇಳಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:35 pm, Mon, 15 September 25








