ಇತ್ತೀಚೆಗೆ ಕೇರಳದ ಕೋಯಿಕ್ಕೋಡ್ ಕೋರ್ಟ್ ‘ಕಾಂತಾರ’ (Kantara Movie) ಚಿತ್ರದ ‘ವರಾಹ ರೂಪಂ.. ಹಾಡಿಗೆ’ ತಡೆ ನೀಡಿ ಆದೇಶ ಹೊರಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಸಿನಿಮಾ ತಂಡಕ್ಕೆ ಪಾಲಕ್ಕಾಡ್ ಕೋರ್ಟ್ನಿಂದ ಶಾಕ್ ಎದುರಾಗಿದೆ. ಮೊದಲ ಆದೇಶ ಹೊರ ಬಿದ್ದ ಬೆನ್ನಲ್ಲೇ ಪಾಲಕ್ಕಾಡ್ ಕೋರ್ಟ್ ಕೂಡ ಈಗ ಮತ್ತೊಂದು ಆದೇಶ ನೀಡಿದೆ. ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿ ಕೇರಳದ (Kerala Court) ಈ ಸ್ಥಳೀಯ ನ್ಯಾಯಾಲಯವು ಆದೇಶ ಹೊರಡಿಸಿದೆ.
‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡು ವಿವಾದದ ಕೇಂದ್ರ ಬಿಂದು ಆಗಿದೆ. ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ‘ನವರಸಂ..’ ಹಾಡಿನ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ‘ತೈಕ್ಕುಡಂ ಬ್ರಿಡ್ಜ್’ ಕೇಸ್ ಕೂಡ ದಾಖಲು ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿತ್ತು. ಈಗ ಪಾಲಕ್ಕಾಡ್ ಕೋರ್ಟ್ ಕೂಡ ಇದೇ ಮಾದರಿಯ ಆದೇಶ ಹೊರಡಿಸಿದೆ.
‘ಮಾತೃಭೂಮಿ ಮ್ಯೂಸಿಕ್’ ಪಾಲಕ್ಕಾಡ್ನ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ಕೇಸ್ ದಾಖಲು ಮಾಡಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ‘ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ, ಪ್ರಸಾರ ಮಾಡುವಂತಿಲ್ಲ’ ಎಂದು ಹೇಳಿದೆ. ಈ ಮೂಲಕ ಹಾಡಿಗೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: ‘ಕಾಂತಾರ’ ಚಿತ್ರ ವೀಕ್ಷಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು ನೋಡಿ
‘ಕೋರ್ಟ್ನ ಆದೇಶದ ಪ್ರತಿ ಕೈ ಸೇರಿದ ನಂತರದಲ್ಲಿ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯ. ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ವಿಯಾನ್ ಫರ್ನಾಂಡಿಸ್ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು.
Published On - 10:02 pm, Wed, 2 November 22