Tara Anuradha: ಮೊದಲು ಅವಕಾಶ ಕೊಟ್ಟ ಗುರುಗಳಿಗಾಗಿ ‘ಆವರ್ತ’ ಚಿತ್ರದ ಆಡಿಯೋ ರಿಲೀಸ್ ಮಾಡಿದ ನಟಿ ತಾರಾ
Avartha Kannada Movie: ವೇಮಗಲ್ ಜಗನ್ನಾಥ್ ರಾವ್ ಅವರ ನಿರ್ದೇಶನದಲ್ಲಿ ‘ಆವರ್ತ’ ಸಿನಿಮಾ ಮೂಡಿಬಂದಿದೆ. ನಟಿ ತಾರಾ ಅನುರಾಧಾ ಅವರು ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.
ನಟಿ ತಾರಾ ಅನುರಾಧಾ (Tara Anuradha) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅವರಿಗೆ ಈಗಲೂ ಸಖತ್ ಡಿಮ್ಯಾಂಡ್ ಇದೆ. ರಾಜಕೀಯದಲ್ಲೂ ತಾರಾ ಅವರು ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ತಮಗೆ ಮೊದಲು ಅವಕಾಶ ನೀಡಿದವರನ್ನು ಮರೆತಿಲ್ಲ. ಹೌದು, ಮೊದಲ ಬಾರಿಗೆ ತಾರಾ ಅವರು ಸ್ಯಾಂಡಲ್ವುಡ್ನಲ್ಲಿ (Sandalwood) ಬಣ್ಣ ಹಚ್ಚಿದ್ದು ‘ತುಳಸಿ ದಳ’ ಚಿತ್ರದಲ್ಲಿ. ಆ ಚಿತ್ರದ ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್ ಅವರು ತಾರಾಗೆ ಅಂದು ನಟಿಸುವ ಅವಕಾಶ ನೀಡಿದ್ದರು. ಆ ಕಾರಣದಿಂದ ಇಂದು ವೇಮಗಲ್ ಜಗನ್ನಾಥ್ ರಾವ್ ಅವರ ಹೊಸ ಚಿತ್ರಕ್ಕೆ ತಾರಾ ಅವರು ಸಾಥ್ ನೀಡಿದ್ದಾರೆ. ‘ಆವರ್ತ’ (Avartha Kannada Movie) ಸಿನಿಮಾದ ಹಾಡುಗಳನ್ನು ಅವರು ಬಿಡುಗಡೆ ಮಾಡಿದ್ದಾರೆ.
ಸಸ್ಪೆನ್ಸ್ ಕಥಾಹಂದರ ಇರುವ ‘ಆವರ್ತ’ ಚಿತ್ರದ ಟ್ರೇಲರ್ ಇತ್ತೀಚೆಗೆ ‘ಝಂಕಾರ್’ ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಣೆಗೆ ಲಭ್ಯವಾಗಿದೆ. ಕಥೆಗಾರನ ಪಾತ್ರದಲ್ಲಿ ನಾಯಕನಟ ಜಯ್ ಚಂದ್ರ ಅಭಿನಯಿಸಿದ್ದಾರೆ. ಸಿ.ಓ.ಡಿ. ಅಧಿಕಾರಿ ಪಾತ್ರಕ್ಕೆ ಧನ್ವಿತ್ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ನಯನಾ ನಟಿಸಿದ್ದಾರೆ.
‘ಆವರ್ತ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ತಾರಾ ಅನುರಾಧಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ‘ನನ್ನ ಮೊದಲ ಚಿತ್ರ ‘ತುಳಸಿದಳ’. ಆ ಚಿತ್ರದಲ್ಲಿ ವೇಮಗಲ್ ಜಗನ್ನಾಥ್ ರಾವ್ ಅವರು ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ನನ್ನ ಗುರುಗಳು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವುದಕ್ಕೆ ಬಹಳ ಖುಷಿಯಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ತಾರಾ ಅನುರಾಧ ಶುಭ ಕೋರಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಅವರು ‘ಆವರ್ತ’ ಚಿತ್ರ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳು ಚೆನ್ನಾಗಿದೆ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹೇಳಿದ್ದಾರೆ. ಅತಿಶಯ್ ಜೈನ್ ಸಂಗೀತ ನಿರ್ದೇಶನ ಹಾಗೂ ಮಲ್ಲಿಕಾರ್ಜುನ್ ಛಾಯಾಗ್ರಹಣ ಮಾಡಿದ್ದಾರೆ.
‘ಯುವಕನೊಬ್ಬನಿಗೆ ಕಥೆ ಬರೆಯುವ ಹವ್ಯಾಸ ಇರುತ್ತದೆ. ಕಾಲ್ಪನಿಕ ಕಥೆ ಬರೆಯುವ ಬಯಕೆಯಿಲ್ಲದ ಆತನಿಗೆ ನೈಜಘಟನೆ ಕುರಿತು ಕಥೆ ಬರೆಯುವ ಆಸಕ್ತಿ. ಆ ಸಮಯದಲ್ಲಿ ಆತನಿಗೊಂದು ಮೆಸೇಜ್ ಬರುತ್ತದೆ. ಆತ ಆ ಸ್ಥಳಕ್ಕೆ ಹೋದಾಗ ಏನೆಲ್ಲಾ ಆಗುತ್ತದೆ ಎಂಬುದು ನಮ್ಮ ಚಿತ್ರದ ಕಥೆ’ ಎಂದು ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್ ಮಾಹಿತಿ ನೀಡಿದ್ದಾರೆ. ನವೆಂಬರ್ 18ರಂದು ಈ ಸಿನಿಮಾ ರಿಲಿಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:41 pm, Wed, 2 November 22