ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಸೆಪ್ಟೆಂಬರ್ 29) ಕರ್ನಾಟಕ ಬಂದ್ಗೆ ವಾಟಾಳ್ ನಾಗರಾಜ್ (Vatal Nagaraj) ಅವರು ಕರೆ ನೀಡಿದ್ದಾರೆ. ಇದಕ್ಕೆ ಚಿತ್ರರಂಗದವರು ಕೂಡ ಬೆಂಬಲ ನೀಡಿದ್ದಾರೆ. ಈ ಸಂಬಂಧ ಇಂದು (ಸೆಪ್ಟೆಂಬರ್ 27) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿದೆ. ಅಲ್ಲಿ ಸಂಪೂರ್ಣ ರೂಪುರೇಷೆ ಸಿದ್ಧವಾಗಲಿದೆ.
‘ನೆಲ, ಜಲ, ಭಾಷೆ ವಿಚಾರವಾಗಿ ಚಿತ್ರರಂಗದವರಿಂದ ಯಾವಾಗಲೂ ಬೆಂಬಲ ಇದ್ದೆ ಇರುತ್ತದೆ. ಶುಕ್ರವಾರದ ಬಂದ್ಗೆ ನಮ್ಮ ಬೆಂಬಲ ಇದೆ. ಆದರೆ ನಮ್ಮ ಹೋರಾಟ ಹೇಗೆ ಎಂಬುದರ ಬಗ್ಗೆ ಇವತ್ತು ಸಭೆ ಮಾಡುತ್ತೇವೆ. ಪ್ರತ್ಯೇಕವಾಗಿ ಭಾಗಿಯಾಗಬೇಕಾ ಅಥವಾ ಕನ್ನಡ ಸಂಘಟನೆಗಳ ಜೊತೆಯೇ ಪ್ರತಿಭಟನೆ ಮಾಡಬೇಕಾ ಅನ್ನೋದನ್ನು ಚರ್ಚೆ ಮಾಡುತ್ತೇವೆ. ಕಲಾವಿದರ ಭಾಗಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಹೇಳಿದ್ದಾರೆ.
ಶಿವರಾಜ್‌ಕುಮಾರ್ ಅವರನ್ನು ಸಂಪರ್ಕಿಸಲು ಎನ್ಎಂ ಸುರೇಶ್ ಅವರು ಪ್ರಯತ್ನಿಸುತ್ತಿದ್ದಾರೆ. ಸಭೆಯ ಬಳಿಕ ಅಂತಿಮ ನಿರ್ಧಾರ ಪ್ರಕಟ ಆಗಲಿದೆ. ಅಂದು ಶೂಟಿಂಗ್, ಸಿನಿಮಾ ಪ್ರದರ್ಶನ ಇರುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಫೈರ್ ಫ್ಲೈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಶುಕ್ರವಾರ ಹಲವು ಸಿನಿಮಾಗಳು ರಿಲೀಸ್ ಆಗುವುದರಲ್ಲಿವೆ. ಕನ್ನಡದಲ್ಲಿ ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಸಿನಿಮಾ ರಿಲೀಸ್ ಆಗಲಿದೆ. ತಮಿಳಿನಲ್ಲಿ ‘ಚಂದ್ರಮುಖಿ 2’ ರಿಲೀಸ್ ಆಗುತ್ತಿದೆ. ಇದಲ್ಲದೆ, ‘ದಿ ವ್ಯಾಕ್ಸಿನ್ ವಾರ್’ ಕೂಡ ಅದೇ ದಿನ ಬಿಡುಗಡೆ ಆಗಲಿದೆ. ಇವುಗಳ ಗಳಿಕೆ ಮೇಲೆ ಬಂದ್ ಪರಿಣಾಮ ಬೀರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ