Siddaramaiah: ಸಿದ್ದರಾಮಯ್ಯ ಭೇಟಿ ಮಾಡಿದ ಕನ್ನಡ ಚಿತ್ರರಂಗದ ಗಣ್ಯರು; ಸಿಎಂ ಮುಂದೆ ಇಟ್ಟ ಮನವಿಗಳೇನು?

Karnataka Film Chamber of Commerce: ‘ಒಂದಷ್ಟು ಸಮಸ್ಯೆಗಳ ಬಗ್ಗೆ ಮನವಿ ಕೊಟ್ಟಿದ್ದೇವೆ. ಚಿತ್ರರಂಗದ ಧ್ಯೇಯ ಮತ್ತು ಉದ್ದೇಶದ ಬಗ್ಗೆಯೂ ಸಿಎಂ ಮುಂದೆ ಪ್ರಸ್ತಾಪ ಮಾಡಲಾಯ್ತು. ಸಬ್ಸಿಡಿ ವಿಚಾರ ಏನೂ ಸದ್ಯಕ್ಕೆ ಚರ್ಚೆ ಮಾಡಿಲ್ಲ’ ಎಂದು ಭಾ.ಮ. ಹರೀಶ್​ ಹೇಳಿದ್ದಾರೆ.

Siddaramaiah: ಸಿದ್ದರಾಮಯ್ಯ ಭೇಟಿ ಮಾಡಿದ ಕನ್ನಡ ಚಿತ್ರರಂಗದ ಗಣ್ಯರು; ಸಿಎಂ ಮುಂದೆ ಇಟ್ಟ ಮನವಿಗಳೇನು?
ಸಿಎಂ ಸಿದ್ದರಾಮಯ್ಯ, ಭಾ.ಮ. ಹರೀಶ್​

Updated on: Jun 01, 2023 | 12:48 PM

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber of Commerce) ಪ್ರಮುಖರು ಇಂದು (ಜೂನ್​ 1) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಅವರ ನೇತೃತ್ವದಲ್ಲಿ ಈ ಭೇಟಿ ನಡೆದಿದೆ. ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಆ ಕುರಿತು ಭಾ.ಮ. ಹರೀಶ್​ (Ba Ma Harish) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ರಾಜಕೀಯಕ್ಕೂ ಚಿತ್ರೋತ್ಸಮಕ್ಕೂ ಹತ್ತಿರದ ನಂಟು. ರಾಜಕೀಯದಲ್ಲಿನ ಅನೇಕರು ಚಿತ್ರೋದ್ಯಮದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ ಚಿತ್ರರಂಗದ ಅನೇಕರು ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಸರ್ಕಾರಗಳು ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿವೆ. ಚಿತ್ರರಂಗದ ಬೇಡಿಕೆಗಳು ಇನ್ನೂ ಸಾಕಷ್ಟು ಇವೆ. ಹೊಸ ಸರ್ಕಾರದ ಮುಂದೆ ಕನ್ನಡ ಚಿತ್ರರಂಗದವರು (Kannada Film Industry) ಕೆಲವು ಮನವಿಗಳನ್ನು ಇಟ್ಟಿದ್ದಾರೆ.

‘ವಾಣಿಜ್ಯ ಮಂಡಳಿ ವತಿಯಿಂದ ಒಂದಷ್ಟು ಸಮಸ್ಯೆಗಳ ಬಗ್ಗೆ ಮನವಿ ಕೊಟ್ಟಿದ್ದೇವೆ. ಚಿತ್ರರಂಗದ ಧ್ಯೇಯ ಮತ್ತು ಉದ್ದೇಶದ ಬಗ್ಗೆಯೂ ಸಿಎಂ ಮುಂದೆ ಪ್ರಸ್ತಾಪ ಮಾಡಲಾಯ್ತು. ಸಬ್ಸಿಡಿ ವಿಚಾರ ಏನೂ ಸದ್ಯಕ್ಕೆ ಚರ್ಚೆ ಮಾಡಿಲ್ಲ. ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಹಾಗೂ ಕಂಠೀರವ ಸ್ಟುಡಿಯೋ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇವೆ. ಸಿನಿಮಾದವರಿಗೆ ಅವಕಾಶ ಕೊಡಿ ಅಂತ ಕೇಳಿದ್ದೇವೆ. ಈ ವಿಚಾರಗಳ ಬಗ್ಗೆ ಸಿಎಂಗೆ ಮನವರಿಕೆ ಮಾಡಿದ್ದೇವೆ. ಸಿಎಂ ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ’ ಎಂದು ಭಾ.ಮ. ಹರೀಶ್​ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಹೊಸ ಸರ್ಕಾರದಿಂದ ಶಿವರಾಜ್ ಕುಮಾರ್ ಅವರಿಗಿರುವ ನಿರೀಕ್ಷೆ ಇಷ್ಟೆ

‘ಸೆನ್ಸಾರ್ ಮಂಡಳಿ ವಿಚಾರದಲ್ಲಿ ಗೊಂದಲಗಳಿವೆ. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಈ ಹಿಂದೆ ಲೋಕಸಭಾ ಸದಸ್ಯರಿಗೆ ಮನವಿ ಮಾಡಿದ್ದೆವು. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಹೇಳಿದ್ದೆವು. ಆದರೆ ಸೆನ್ಸಾರ್ ಮಂಡಳಿಯಲ್ಲಿ ಕಾರ್ಯಕರ್ತರ ನೇಮಕ ಮಾಡಿದರೆ ಸಮಸ್ಯೆ ಆಗುತ್ತದೆ. ಈ ವಿಚಾರಕ್ಕೆ ಸಂಬಂಧಪಟ್ಟ ಲೋಕಸಭೆ ಸದಸ್ಯರನ್ನು ಮತ್ತೆ ಭೇಟಿಯಾಗಿ ಮನವಿ ಮಾಡುತ್ತೇವೆ. ಸಮಗ್ರ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಿದೆ’ ಎಂದು ಭಾ.ಮ. ಹರೀಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us