ಹೊಸ ಸರ್ಕಾರದಿಂದ ಚಿತ್ರರಂಗಕ್ಕಿರುವ ನಿರೀಕ್ಷೆಗಳೇನು?
Karnataka Government: ಕರ್ನಾಟಕದಲ್ಲಿ ಹೊಸ ಸರ್ಕಾರ ಸ್ಥಾಪನೆ ಆಗಲಿಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲ ಕ್ಷೇತ್ರಗಳಿಗೂ ಸರ್ಕಾರದಿಂದ ತಮ್ಮದೇ ಆದ ನಿರೀಕ್ಷೆಗಳಿವೆ. ಹೊಸ ಸರ್ಕಾರದಿಂದ ಕನ್ನಡ ಚಿತ್ರರಂಗಕ್ಕೆ ಇರುವ ಬೇಡಿಕೆಗಳೇನು ಎಂಬ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮಾ ಹರೀಶ್ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಸರ್ಕಾರ (Government Of Karnataka) ಬದಲಾಗುತ್ತಿದೆ. ಆ ಮೂಲಕ ಹೊಸ ನಿರೀಕ್ಷೆಗಳು, ಹೊಸ ಭರವಸೆಗಳು ಗರಿಗೆದರಿವೆ. ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಸಮಸ್ಯೆಗಳು, ತನ್ನದೇ ಆದ ನಿರೀಕ್ಷೆಗಳಿವೆ. ಕನ್ನಡ ಚಿತ್ರರಂಗಕ್ಕೂ ಸಹ ಹೊಸ ಸರ್ಕಾರದಿಂದ ಹಲವು ನಿರೀಕ್ಷೆಗಳಿವೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ (Social Media) ಕೆಲವು ಸಿನಿಮಾಕರ್ಮಿಗಳು ಹೊಸ ಸರ್ಕಾರದಿಂದ ಚಿತ್ರರಂಗಕ್ಕೆ ಆಗಬೇಕಾದ ಕಾರ್ಯದ ಪಟ್ಟಿ ಮಾಡುವುದರಲ್ಲಿ ತೊಡಗಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮಾ ಹರೀಶ್ (Ba Ma Harish) ಅವರು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ.
”ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅವರು ಚಿತ್ರರಂಗಕ್ಕೆ ಬೆಂಬಲ ನೀಡಿದ್ದರು. ಹಲವು ವಿಧದಲ್ಲಿ ಚಿತ್ರರಂಗಕ್ಕೆ ಸಹಕರಿಸಿದ್ದರು. ಅದೇ ಸಹಕಾರವನ್ನು ಈಗಲೂ ಮುಂದುವರೆಸುವ ನಿರೀಕ್ಷೆ ಇದೆ. ಕಳೆದ ಬಾರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಚಿತ್ರನಗರಿಗಾಗಿ ಅವರೇ ಮೈಸೂರಿನ ಬಳಿ ಸ್ಥಳ ಗುರುತು ಮಾಡಿಸಿದ್ದರು. ಈಗ ಮತ್ತೊಮ್ಮೆ ಸಿಎಂ ಆಗುವ ಹಂತದಲ್ಲಿದ್ದಾರೆ ಈ ಬಾರಿ ಅವರೇ ಚಿತ್ರನಗರಿಯ ಕಾಮಗಾರಿ ಮುಗಿಸಿಕೊಡುವ ನಿರೀಕ್ಷೆ ನಮಗೆ ಇದೆ” ಎಂದು ಭರವಸೆ ವ್ಯಕ್ತಪಡಿಸಿದರು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮಾ ಹರೀಶ್.
”ಕನ್ನಡ ಚಿತ್ರರಂಗ ಬಹಳ ದೊಡ್ಡ ಕಟುಂಬ. ಇಲ್ಲಿ ಉಳ್ಳವರು, ದಿನಗೂಲಿಯವರು ಎಲ್ಲರೂ ಇದ್ದಾರೆ. ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಕುಟುಂಬಗಳಿಗೆ ಇಂದಿಗೂ ಸ್ವಂತ ಸೂರಿಲ್ಲ. ಯಾರಿಗೆ ಮನೆ ಇಲ್ಲವೊ ಅವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬುದು ಈ ಬಾರಿ ನಮ್ಮ ಕಡೆಯಿಂದ ಹೊಸ ಸರ್ಕಾರದ ಮುಂದೆ ಇಡಲಿರುವ ಪ್ರಮುಖ ಬೇಡಿಕೆ ಆಗಿರಲಿದೆ” ಎಂದಿದ್ದಾರೆ ಬಾಮಾ ಹರೀಶ್.
ಈ ಬಾರಿ ಕೆಲವು ದೊಡ್ಡ ನಾಯಕ ನಟರು ಸಿದ್ದರಾಮಯ್ಯ ಅವರ ವಿರುದ್ಧ ಪ್ರಚಾರ ಮಾಡಿದರಲ್ಲ, ಇದು ಚಿತ್ರರಂಗಕ್ಕೆ ವ್ಯಕ್ತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗೆ, ”ಸಿದ್ದರಾಮಯ್ಯ ಅವರು ದೊಡ್ಡ ನಾಯಕರು, ನಟರ ವೈಯಕ್ತಿಕ ನಿಲವುಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರ ಪರವಾಗಿಯೂ ಚಿತ್ರರಂಗದ ಹಲವರು ಪ್ರಚಾರ ಮಾಡಿದ್ದಾರೆ. ಪ್ರಚಾರ, ಪಕ್ಷಕ್ಕೆ ಬೆಂಬಲ ಎಂಬುದೆಲ್ಲ ವೈಯಕ್ತಿಕ ವಿಷಯ” ಎಂದರು.
ಈ ಹಿಂದಿನ ಸರ್ಕಾರದ ಬಗ್ಗೆಯೂ ಮಾತನಾಡಿದ ಬಾಮಾ ಹರೀಶ್, ”ಈ ಹಿಂದೆ ಇದ್ದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರಗಳು ಸಹ ಚಿತ್ರರಂಗಕ್ಕೆ ಸಾಕಷ್ಟು ಒಳಿತು ಮಾಡಿವೆ. ನಮ್ಮ ಕಷ್ಟಗಳಿಗೆ, ಮನವಿಗಳಿಗೆ ಸ್ಪಂದಿಸಿದ್ದಾರೆ. ಈಗ ಮುಂಬರುವ ಸರ್ಕಾರವೂ ಸಹ ಚಿತ್ರರಂಗಕ್ಕೆ ಅಗತ್ಯ ಬೆಂಬಲ, ಸಹಕಾರ ನೀಡುತ್ತದೆ ಎಂಬ ನಿರೀಕ್ಷೆ ಚಿತ್ರರಂಗಕ್ಕಿದೆ” ಎಂದರು.
ಇದನ್ನೂ ಓದಿ:ತಮಿಳಿನಲ್ಲಿ ದೊಡ್ಡ ಯಶಸ್ಸು ಸಿಕ್ಕರೂ ರಮೇಶ್ ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದಿದ್ದರ ಹಿಂದಿತ್ತು ಕಾರಣ
ಇದರ ನಡುವೆ, ಕೇರಳದಲ್ಲಿ ಅಲ್ಲಿನ ಕಲಾವಿದರ ಸಂಘ, ನಿರ್ಮಾಪಕರ ಸಂಘವು ಚಿತ್ರರಂಗದಲ್ಲಿ ಅಶಿಸ್ತು ಪ್ರದರ್ಶಿಸುತ್ತಿರುವ ನಟರು, ಸಿನಿಮಾ ಸೆಟ್ನಲ್ಲಿ ಡ್ರಗ್ಸ್ ಬಳಕೆ ಮಾಡುವ ನಟರ ವಿರುದ್ಧ ಕ್ರಮ ಹಾಗೂ ಪೊಲೀಸ್ ದೂರು ನೀಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಾಮಾ ಹರೀಶ್, ”ನಮ್ಮಲ್ಲಿ ಯಾವುದೇ ನಟ-ನಟಿಯರಲ್ಲಿ ಡ್ರಗ್ಸ್ ಸಂಸ್ಕೃತಿ ಇಲ್ಲ. ಅದರಲ್ಲಿಯೂ ಚಿತ್ರೀಕರಣದ ಸೆಟ್ನಲ್ಲಿ ಅಂಥಹಾ ದುರ್ವರ್ತನೆ ತೋರಿದ ಉದಾಹರಣೆಗಳೇ ಇಲ್ಲ. ಇನ್ನು ಅಶಿಸ್ತಿನ ಬಗ್ಗೆ ಯಾವುದೇ ನಿರ್ಮಾಣ ಸಂಸ್ಥೆ ನಮಗೆ ಸಾಕ್ಷ್ಯ ಸಮೇತ ದೂರು ನೀಡಿದರೆ ಆ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Wed, 17 May 23