‘ಥಗ್ ಲೈಫ್’ ವಿವಾದ, ಸುಪ್ರೀಂಕೋರ್ಟ್​ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಸರ್ಕಾರ

Thug Life movie: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಮಾಡಲು ಅನುವು ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ತಿಳಿಸುವಂತೆ ಸೂಚಿಸಿತ್ತು. ಅದರಂತೆ ಈಗ ರಾಜ್ಯ ಸರ್ಕಾರವು ಪ್ರತಿಕ್ರಿಯೆ ಸಲ್ಲಿಸಿದ್ದು, ಸಿನಿಮಾ ಬಿಡುಗಡೆ ಆದರೆ ಭದ್ರತೆ ಒದಗಿಸಲು ಬದ್ಧ ಎಂದಿದೆ.

‘ಥಗ್ ಲೈಫ್’ ವಿವಾದ, ಸುಪ್ರೀಂಕೋರ್ಟ್​ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಸರ್ಕಾರ
Kamal Haasan

Updated on: Jun 19, 2025 | 12:35 PM

ಕಮಲ್ ಹಾಸನ್ (Kamal Haasan), ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆ ವಿರೋಧಿಸಿ ಅವರ ನಟನೆಯ ‘ಥಗ್ ಲೈಫ್’ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಆಗದಂತೆ ಕನ್ನಡಪರ ಸಂಘಟನೆಗಳು, ಫಿಲಂ ಚೇಂಬರ್ ಇನ್ನಿತರೆ ಕೆಲ ಸಂಘಟನೆಗಳು ತಡೆದಿದ್ದವು. ಆದರೆ ಸಿನಿಮಾ ನಿರ್ಮಾಣ ತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಸಿನಿಮಾ ಪರವಾಗಿ ಸುಪ್ರೀಂ ಆದೇಶ ಹೊರಬಿದ್ದಿದೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ತಿಳಿಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು, ರಾಜ್ಯ ಸರ್ಕಾರವು ನಿನ್ನೆ (ಜೂನ್ 18) ಸುಪ್ರೀಂಕೋರ್ಟ್​ಗೆ ತನ್ನ ಪ್ರತಿಕ್ರಿಯೆ ತಿಳಿಸಿದೆ.

ರಾಜ್ಯ ಸರ್ಕಾರವು ‘ಥಗ್ ಲೈಫ್’ ಸಿನಿಮಾದ ಮೇಲೆ ನಿಷೇಧ ಹೇರಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಜೊತೆಗೆ, ಒಂದೊಮ್ಮೆ ಸಿನಿಮಾದ ನಿರ್ಮಾಪಕರು ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆದರೆ ಅದಕ್ಕೆ ಸೂಕ್ತ ಭದ್ರತೆಯನ್ನು ನೀಡುವುದಾಗಿಯೂ ಸಹ ರಾಜ್ಯ ಸರ್ಕಾರ ಹೇಳಿದೆ. ಸಿನಿಮಾಕ್ಕೆ ಸಂಬಂಧಿಸಿದ ನಟರು, ನಿರ್ಮಾಪಕರು, ವಿತರಕರು, ಪ್ರೇಕ್ಷಕರಿಗೆ ರಾಜ್ಯ ಸರ್ಕಾರವು ಸೂಕ್ತ ಭದ್ರತೆ ಒದಗಿಸಲಿದೆ’ ಎಂದಿದೆ.

‘ಥಗ್ ಲೈಫ್’ ಸಿನಿಮಾದ ನಿಷೇಧದಲ್ಲಿ ತನ್ನ ಭಾಗವಹಿಸುವಿಕೆ ಇಲ್ಲವೆಂದು ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ನಾಗರೀಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಯಾವುದೇ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದು ಸರ್ಕಾರ, ಸುಪ್ರೀಂಗೆ ಸ್ಪಷ್ಟಪಡಿಸಿದೆ. ಆ ಮೂಲಕ ಒಂದೊಮ್ಮೆ ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆದರೆ ಸಿನಿಮಾಕ್ಕೆ ಸೂಕ್ತ ಭದ್ರತೆ ಒದಗಿಸುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ

ಆದರೆ ನಿನ್ನೆ ಕನ್ನಡಪರ ಸಂಘಟನೆ ಮುಖಂಡ ಪ್ರವೀಣ್ ಶೆಟ್ಟಿ ವಿಡಿಯೋ ಬಿಡುಗಡೆ ಮಾಡಿ, ‘ಒಂದೊಮ್ಮೆ ಥಗ್ ಲೈಫ್ ಸಿನಿಮಾ ಬಿಡುಗಡೆ ಆದರೆ ಕನ್ನಡಪರ ಸಂಘಟನೆಗಳ ಸದಸ್ಯರು ಟಿಕೆಟ್ ಖರೀದಿ ಚಿತ್ರ ನೋಡಲು ಹೋಗುತ್ತೇವೆ’ ಎಂದಿದ್ದರು. ಆ ಮೂಲಕ ಚಿತ್ರಮಂದಿರದ ಒಳಗೆ ದಾಂಧಲೆ ಎಬ್ಬಿಸುವ ಎಚ್ಚರಿಕೆಯನ್ನು ನೀಡಿದ್ದರು. ಈ ಸನ್ನಿವೇಶದಲ್ಲಿ ಸರ್ಕಾರ ಹೇಗೆ ಭದ್ರತೆ ಒದಗಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

‘ಥಗ್ ಲೈಫ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್ ಹಾಸನ್, ಕನ್ನಡ ಭಾಷೆ ತಮಿಳಿನಿಂದಲೇ ಜನಿಸಿದೆ ಎಂದಿದ್ದರು. ಕಮಲ್ ಅವರ ಈ ಅಜ್ಞಾನದ ಹೇಳಿಕೆಗೆ ತೀವ್ರ ವಿರೋಧ ರಾಜ್ಯದಲ್ಲಿ ವ್ಯಕ್ತವಾಗಿತ್ತು. ಕಮಲ್ ಅವರ ಹೇಳಿಕೆ ವಿರುದ್ಧ ಪ್ರತಿಭಟನೆಗಳು ನಡೆದವು, ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಕನ್ನಡಪರ ಸಂಘಟನೆಗಳು ಹಾಕಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ