ಈ ವಾರ ‘ಕಾಲವೇ ಮೋಸಗಾರ’ ರಿಲೀಸ್; ಜೋರಾಗಿದೆ ಪರಭಾಷೆ ಸಿನಿಮಾಗಳ ಪೈಪೋಟಿ
ಹೊಸಬರಿಗಾದರೂ, ಸ್ಟಾರ್ ನಟರಿಗಾದರೂ ಶುಕ್ರವಾರ ಎಂದರೆ ಹೊಸ ಅಧ್ಯಾಯ ಇದ್ದಂತೆ. ವರ್ಷವಿಡೀ ಕಷ್ಟಪಟ್ಟು ಮಾಡಿದ ಸಿನಿಮಾಗೆ ಜನರ ಪ್ರತಿಕ್ರಿಯೆ ತಿಳಿಯುವ ದಿನ ಅದು. ಈ ಶುಕ್ರವಾರ (ಜೂ.20) ‘ಕಾಲವೇ ಮೋಸಗಾರ’, ‘ಬುಲೆಟ್’ ಸೇರಿದಂತೆ ಒಂದಷ್ಟು ಸಿನಿಮಾಗಳು ತೆರೆಕಾಣುತ್ತಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಪ್ರತಿ ಶುಕ್ರವಾರ ಬಂದರೆ ಹೊಸ ಚಿತ್ರಗಳ (New Movies) ನಡುವೆ ಪೈಪೋಟಿ ಜೋರಾಗುತ್ತದೆ. ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊಸ ಹೊಸ ತಂಡಗಳು ಚಿತ್ರಮಂದಿರಕ್ಕೆ ಕಾಲಿಡುತ್ತವೆ. ಈ ವಾರ (ಜೂನ್ 20) ಕೂಡ ಹೊಸ ಕಲಾವಿದರ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಗಂತ ಈ ಸಿನಿಮಾಗಳ ಹಾದಿ ಸುಗಮವಾಗಿಲ್ಲ. ಯಾಕೆಂದರೆ ಪರಭಾಷೆಯ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಪೈಪೋಟಿ ನೀಡುತ್ತಿವೆ. ಕನ್ನಡದಲ್ಲಿ ‘ಕಾಲವೇ ಮೋಸಗಾರ’ (Kalave Mosagara), ‘ಬುಲೆಟ್’, ‘ಡೆಡ್ಲಿ ಲವರ್ಸ್’ ಮುಂತಾದ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಬಹಳ ಹಿಂದಿಯೇ ಸೆಟ್ಟೇರಿದ ಸಿನಿಮಾ ‘ಕಾಲವೇ ಮೋಸಗಾರ’. ಈ ಚಿತ್ರದಲ್ಲಿ ಭರತ್ ಸಾಗರ್ ಅವರು ಹೀರೋ ಆಗಿ ನಟಿಸಿದ್ದಾರೆ. ಸಂಜಯ್ ಪುರಾಣಿಕ್ ಅವರು ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಆ್ಯಕ್ಷನ್-ಥ್ರಿಲ್ಲರ್ ಲವ್ ಸ್ಟೋರಿ ಈ ಸಿನಿಮಾದಲ್ಲಿದೆ. ಮೊದಲ ಬಾರಿ ಹೀರೋ ಆಗಿ ನಟಿಸಿರುವ ಭರತ್ ಸಾಗರ್ ಅವರು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದಾರೆ.
‘ಕಾಲವೇ ಮೋಸಗಾರ’ ಸಿನಿಮಾದ ಜೊತೆಗೆ ಕನ್ನಡದಲ್ಲಿ ಇನ್ನೂ ಕೆಲವು ಸಿನಿಮಾಗಳು ತೆರೆ ಕಾಣುತ್ತಿವೆ. ಧರ್ಮ ಕೀರ್ತಿರಾಜ್ ನಟಿಸಿರುವ ‘ಬುಲೆಟ್’ ಸಿನಿಮಾ ಸಹ ಜೂನ್ 20ಕ್ಕೆ ಬಿಡುಗಡೆ ಆಗುತ್ತಿದೆ. ಹೊಸ ಕಲಾವಿದರು ನಟಿಸಿರುವ ‘ಡೆಡ್ಲಿ ಲವರ್ಸ್’ ಸಿನಿಮಾ ಕೂಡ ತೆರೆಕಾಣುತ್ತಿದೆ. ಹೊಸಬರ ‘ಬ್ಲ್ಯಾಕ್ ಶೀಪ್’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಈ ಎಲ್ಲ ಸಿನಿಮಾಗಳ ನಡುವೆ ಈಗಾಗಲೇ ಬಿಡುಗಡೆ ಆಗಿರುವ ‘ಮಾದೇವ’, ‘ಸಂಜು ವೆಡ್ಸ್ ಗೀತಾ 2’, ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗಳು ಕೂಡ ಪೈಪೋಟಿ ನೀಡುತ್ತಿವೆ.
ಇದನ್ನೂ ಓದಿ: ‘ಕಾಲವೇ ಮೋಸಗಾರ’ ಚಿತ್ರದಿಂದ ಗಾಂಧಿನಗರಕ್ಕೆ ಹೊಸ ಹೀರೋ ಭರತ್ ಸಾಗರ್ ಎಂಟ್ರಿ
ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕೂಡ ಜೂನ್ 20ಕ್ಕೆ ಬಿಡುಗಡೆ ಆಗುತ್ತಿವೆ. ಆಮಿರ್ ಖಾನ್ ಅವರು ನಟಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಮತ್ತು ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ನಟಿಸಿರುವ ‘ಕುಬೇರ’ ಸಿನಿಮಾ ಕೂಡ ತೆರೆಕಾಣುತ್ತಿದೆ. ಕುಬೇರ ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಪೈಪೋಟಿ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








