
ಕರ್ನಾಟಕ ರಾಜ್ಯದಲ್ಲಿ ಏಕದರ ಸಿನಿಮಾ ಟಿಕೆಟ್ ದರವನ್ನು ಜಾರಿಗೆ ತರುವಂತೆ ಅನೇಕರು ಒತ್ತಾಯಿಸಿದ್ದರು. ಈ ಒತ್ತಾಯಕ್ಕೆ ಮಣಿದಿದ್ದ ಕರ್ನಾಟಕ ಸರ್ಕಾರ 200 ರೂಪಾಯಿ ಟಿಕೆಟ್ ದರವನ್ನು ಜಾರಿಗೆ ತಂದಿತ್ತು. ಆದರೆ, ಇದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿತ್ತು. ಸರ್ಕಾರದ ಈ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. ‘ಕಾಂತಾರ: ಚಾಪ್ಟರ್ 1’ ರಿಲೀಸ್ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರಕ್ಕೆ ಕಡಿವಾಣವೇ ಇಲ್ಲದಂತೆ ಆಗಿತ್ತು. ಇದರಿಂದ ಸಾಮಾನ್ಯ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಕಾರಣದಿಂದ ಜನರು ಥಿಯೇಟರ್ನತ್ತ ಮುಖ ಮಾಡುತ್ತಿಲ್ಲ ಎಂದು ಹೇಳಲಾಗಿತ್ತು. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಆದೇಶ ಹೊರಿಡಿಸಿತ್ತು. ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ನ ಮೂಲ ಬೆಲೆ 200 ರೂಪಾಯಿ ಜೊತೆಗೆ ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ನಿಗದಿ ಮಾಡಲು ಮಾತ್ರ ಅವಕಾಶ ಇತ್ತು. ಹೊಸ ಆದೇಶವು ಸೆಪ್ಟೆಂಬರ್ 12ರಂದು ಜಾರಿಗೆ ಬಂದಿತ್ತು. ಎರಡು ವಾರ ಕಳೆಯುವುದರೊಳಗೆ ಆದೇಶಕ್ಕೆ ಬ್ರೇಕ್ ಬಿದ್ದಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಚಿತ್ರ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗಿದೆ. ಈ ವೇಳೆ 200 ರೂಪಾಯಿ ಟಿಕೆಟ್ ದರ ನಿಗದಿ ಆದರೆ ಹೆಚ್ಚಿನ ಕಲೆಕ್ಷನ್ ಆಗುವುದಿಲ್ಲ ಎಂಬುದು ನಿರ್ಮಾಣ ಸಂಸ್ಥೆಯ ಆಲೋಚನೆ ಆಗಿತ್ತು. ಈ ಕಾರಣದಿಂದಲೇ ಮಲ್ಟಿಪ್ಲೆಕ್ಸ್ನವರ ಜೊತೆಗೂಡಿ ಹೊಂಬಾಳೆ ಅವರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಹೊಂಬಾಳೆಗೆ ಜಯ ಸಿಕ್ಕಿದೆ.
ಇದನ್ನೂ ಓದಿ: ‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ‘ಕಾಂತಾರ: ಚಾಪ್ಟರ್ 1’ ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ. ಅಕ್ಟೋಬರ್ 2 ಗುರುವಾರ ಮತ್ತು ಗಾಂಧೀ ಜಯಂತಿ ಪ್ರಯುಕ್ತ ಸರ್ಕಾರಿ ರಜ ಇರುವ ದಿನ. ಅಂದು ಟಿಕೆಟ್ ದರ ಗಗನಕ್ಕೇರುವುದು ಪಕ್ಕಾ. ಅಷ್ಟೇ ಅಲ್ಲದೆ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಕೂಡ ದುಬಾರಿ ಟಿಕೆಟ್ ದರ ನಿಗದಿ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:47 am, Tue, 23 September 25