ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದಕ್ಕಾಗಿ ನವೆಂಬರ್ 1ರಂದು ದಿನಾಂಕ ನಿಗದಿ ಆಗಿದೆ. ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ‘ಪವರ್ ಸ್ಟಾರ್’ ಅಭಿಮಾನಿಗಳು ಕಾದಿದ್ದಾರೆ. ಅಪ್ಪು ಫ್ಯಾನ್ಸ್ಗೆ ಇದು ಹೆಮ್ಮೆಯ ಕ್ಷಣ. ಈ ಸಮಾರಂಭಕ್ಕೆ ಯಾರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ. ಖ್ಯಾತ ನಟ ರಜನಿಕಾಂತ್ (Rajinikanth) ಅಥವಾ ಜೂನಿಯರ್ ಎನ್ಟಿಆರ್ ಅವರು ಆಗಮಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ. ಈ ಇಬ್ಬರು ಸ್ಟಾರ್ ಕಲಾವಿದರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಆಹ್ವಾನ ಹೋಗಿದೆ.
ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ಕುಮಾರ್ ಅವರು ಮಾಡಿದ ಸಾಧನೆ ಅಪಾರ. ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಜನರನ್ನು ರಂಜಿಸಿದರು. ಹೀರೋ ಆದ ಬಳಿಕ ಅವರ ಅಭಿಮಾನಿ ಬಳಗ ಹಿರಿದಾಯಿತು. ನಟನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಜನಮನ ಗೆದ್ದರು. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಕರುನಾಡಿನ ಯುವಜನತೆಗೆ ಅವರು ಸ್ಫೂರ್ತಿ ಆಗಿದ್ದರು. ನಿರ್ಮಾಪಕನಾಗಿ ಅನೇಕರಿಗೆ ಅವಕಾಶ ನೀಡಿದ್ದರು. ಇಷ್ಟೆಲ್ಲ ಸಾಧನೆ ಮಾಡಿದ ಅವರು ಕಳೆದ ವರ್ಷ ಅಕ್ಟೋಬರ್ 29ರಂದು ನಿಧನರಾಗಿದ್ದು ತೀವ್ರ ನೋವಿನ ಸಂಗತಿ.
ಪುನೀತ್ ನಿಧನರಾದಾಗ ಇಡೀ ಕರುನಾಡಿಗೆ ಕತ್ತಲು ಕವಿದಂತಾಯಿತು. ಅವರು ಇಲ್ಲ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮರಣೋತ್ತರವಾಗಿ ಅವರಿಗೆ ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿತು. ಪುನೀತ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿರುವುದು ವಿಶೇಷ. ಪುನೀತ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು ಈ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ.
ನಿಧನರಾಗುವುದಕ್ಕೂ ಮುನ್ನ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಕೆಲಸಗಳಲ್ಲಿ ಪುನೀತ್ ರಾಜ್ಕುಮಾರ್ ತೊಡಗಿಕೊಂಡಿದ್ದರು. ಇದು ಅವರ ಕನಸಿನ ಪ್ರಾಜೆಕ್ಟ್. ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ರಿಲೀಸ್ ಆಗುತ್ತಿದೆ. ಒಂದು ದಿನ ಮುನ್ನ, ಅಂದರೆ ಅ.27ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್ ಪ್ರದರ್ಶನ ಆಯೋಜನೆಗೊಂಡಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಆರಂಭ ಆಗಿದ್ದು, ಅಭಿಮಾನಿಗಳು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ‘ಗಂಧದ ಗುಡಿ’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.