‘ಸರ್ಕಾರಿ ಒಟಿಟಿ ಆರಂಭಿಸಿ’; ಸಿಎಂ ಡಿಕೆ ಶಿವಕುಮಾರ್ ಬಳಿ ಬೇಡಿಕೆ ಇಟ್ಟ ಚಲನಚಿತ್ರ ವಾಣಿಜ್ಯ ಮಂಡಳಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದ ನಿಯೋಗವು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚಿಸಿತು. ಒಟಿಟಿ ವೇದಿಕೆಗಳಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಇಲ್ಲದಿರುವುದನ್ನು ಹೈಲೈಟ್ ಮಾಡಿದ ನಿಯೋಗ, ಸರ್ಕಾರಿ ಒಟಿಟಿ ಆರಂಭಿಸಲು ಕೋರಿತು. ಚಿತ್ರಮಂದಿರಗಳ ಉಳಿವು, ಹೊಸ ಚಲನಚಿತ್ರ ನೀತಿ ಹಾಗೂ ಬಾಕಿ ಇರುವ ರಾಜ್ಯ ಪ್ರಶಸ್ತಿಗಳ ವಿತರಣೆಗೂ ಈ ವೇಳೆ ಆಗ್ರಹಿಸಲಾಯಿತು.

‘ಸರ್ಕಾರಿ ಒಟಿಟಿ ಆರಂಭಿಸಿ’; ಸಿಎಂ ಡಿಕೆ ಶಿವಕುಮಾರ್ ಬಳಿ ಬೇಡಿಕೆ ಇಟ್ಟ ಚಲನಚಿತ್ರ ವಾಣಿಜ್ಯ ಮಂಡಳಿ
ಡಿಕೆ ಶಿವಕುಮಾರ್ ಭೇಡಿ ಮಾಡಿದ ಚಿತ್ರರಂಗ
Edited By:

Updated on: Jul 01, 2026 | 8:21 PM

ಮುಖ್ಯಾಂಶಗಳು

  • ಬಹುರಾಷ್ಟ್ರೀಯ ಒಟಿಟಿ ಕಂಪನಿಗಳಿಂದ ಕನ್ನಡ ಚಿತ್ರಗಳ ಕಡೆಗಣನೆ: ಚಿತ್ರರಂಗದ ರಕ್ಷಣೆಗೆ ಸರ್ಕಾರಿ ಒಟಿಟಿ ಅಗತ್ಯ
  • 1200 ರಿಂದ 400 ಕ್ಕೆ ಕುಸಿದ ಚಿತ್ರಮಂದಿರಗಳ ಸಂಖ್ಯೆ: ನವೀಕರಣಕ್ಕೆ ಶೇ. 4 ರ ಬಡ್ಡಿ ದರದಲ್ಲಿ ಸಾಲಕ್ಕೆ ಬೇಡಿಕೆ
  • ಬಾಕಿ ಉಳಿದಿರುವ ರಾಜ್ಯ ಪ್ರಶಸ್ತಿಗಳ ವಿಲೇವಾರಿಗೆ ಆಗ್ರಹ: ಡಾ. ರಾಜ್ ಜನ್ಮದಿನದಂದೇ ಪ್ರಶಸ್ತಿ ನೀಡಲು ಮನವಿ

ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗವು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚಿತ್ರರಂಗದ ವಿವಿಧ ಬೇಡಿಕೆಗಳು ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ ನಡೆಸಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದ ಈ ನಿಯೋಗದಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು, ಮಂಡಳಿಯ ಮಾಜಿ ಅಧ್ಯಕ್ಷರಾದ ಗಂಗರಾಜು, ಸಾ.ರಾ. ಗೋವಿಂದು, ಚಿನ್ನೇಗೌಡ ಹಾಗೂ ಹಿರಿಯ ನಟ ಸುಂದರ್ ರಾಜ್ ಸಾಥ್ ನೀಡಿದ್ದಾರೆ. ಚಿತ್ರರಂಗದ ಉಳಿವಿಗಾಗಿ ನಿಯೋಗವು ಸಿಎಂಗೆ ಸುದೀರ್ಘ ಅಹವಾಲು ಸಲ್ಲಿಸಿದೆ.

ಸರ್ಕಾರಿ ಒಟಿಟಿಗೆ ಆಗ್ರಹ

ಪ್ರಸ್ತುತ ಕನ್ನಡ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ಸರಿಯಾದ ಬೇಡಿಕೆ ಸಿಗುತ್ತಿಲ್ಲ ಎಂಬ ಕಹಿ ಸತ್ಯವನ್ನು ನಿಯೋಗವು ಸಿಎಂ ಗಮನಕ್ಕೆ ತಂದಿದೆ. ರಾಜ್ಯದಲ್ಲಿ ಪ್ರತಿವರ್ಷ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ, ಪ್ರಮುಖ ಒಟಿಟಿ ವೇದಿಕೆಗಳು ಬಹುರಾಷ್ಟ್ರೀಯ ಕಂಪೆನಿಗಳಾಗಿರುವ ಕಾರಣ, ಅವು ಸಣ್ಣ ಬಜೆಟ್‌ನ ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿವೆ. ಸಣ್ಣ ಮೊತ್ತದ ಸಿನಿಮಾಗಳು ಎಂಬ ಕಾರಣ ನೀಡಿ ಖರೀದಿಸಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಸಣ್ಣ ನಿರ್ಮಾಪಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ, ಕನ್ನಡ ಚಿತ್ರರಂಗದ ರಕ್ಷಣೆಗಾಗಿ ಸರ್ಕಾರವೇ ಸ್ವಂತದಾದ ‘ಸರ್ಕಾರಿ ಒಟಿಟಿ ವೇದಿಕೆ’ಯನ್ನು ಪ್ರಾರಂಭಿಸಬೇಕು ಎಂದು ನಿಯೋಗವು ವಿಶೇಷವಾಗಿ ಒತ್ತಾಯಿಸಿದೆ.

ಚಿತ್ರಮಂದಿರಗಳ ಕುಸಿತ ಮತ್ತು ಏಕಗವಾಕ್ಷಿ ಯೋಜನೆ

ಹಿಂದೆ ರಾಜ್ಯದಲ್ಲಿ 1,200 ರಷ್ಟಿದ್ದ ಏಕಪರದೆ ಚಿತ್ರಮಂದಿರಗಳ ಸಂಖ್ಯೆ ಈಗ 400 ಕ್ಕೆ ಕುಸಿದಿರುವುದಕ್ಕೆ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಹಳೆಯ ಕಾಲದ ಸೆಲ್ಯುಲಾಯ್ಡ್ ನಿಯಮಗಳ ಬದಲಿಗೆ ಡಿಜಿಟಲ್ ಯುಗಕ್ಕೆ ಹೊಂದುವ ಷರತ್ತುಗಳನ್ನು ರೂಪಿಸಬೇಕು ಎಂದು ಕೋರಲಾಗಿದೆ. ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ಮೂಲಕ ಥಿಯೇಟರ್‌ಗಳ ಲೈಸೆನ್ಸ್ ನವೀಕರಣಕ್ಕೆ ಏಕಗವಾಕ್ಷಿ ಯೋಜನೆ ತರಬೇಕು ಎಂದು ಮನವಿ ಮಾಡಲಾಗಿದೆ. ಹಳೆಯ ಚಿತ್ರಮಂದಿರಗಳ ನವೀಕರಣಕ್ಕೆ ಶೇ. 4 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಹಾಗೂ ಗ್ರಾಮೀಣ ಭಾಗದಲ್ಲಿ ಹೊಸ ಥಿಯೇಟರ್ ನಿರ್ಮಾಣಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೇಳಿಕೊಳ್ಳಲಾಗಿದೆ.

ಅಪರೂಪದ ಚಿತ್ರಗಳ ಡಿಜಿಟಲೀಕರಣ ಹಾಗೂ ರಾಜ್ಯ ಪ್ರಶಸ್ತಿ ವಿತರಣೆ

1934 ರಿಂದ 2010 ರವರೆಗೆ ಸೆಲ್ಯುಲಾಯ್ಡ್‌ನಲ್ಲಿ ಮೂಡಿಬಂದ 3 ಸಾವಿರಕ್ಕೂ ಹೆಚ್ಚು ಅಪರೂಪದ ಕನ್ನಡ ಚಿತ್ರಗಳು ಹಾಳಾಗುತ್ತಿದ್ದು, ಇವುಗಳ ಆಕ್ರೈವಿಂಗ್ (ರಕ್ಷಣೆ) ಕಾರ್ಯಕ್ಕೆ ವಿಶೇಷ ಗಮನಹರಿಸಬೇಕು ಎಂದು ನಿಯೋಗ ವಿನಂತಿಸಿದೆ. 2025-26 ರಲ್ಲಿ ಘೋಷಣೆಯಾಗಿದ್ದ 3 ಕೋಟಿ ರೂಪಾಯಿ ಅನುದಾನದ ಕೆಲಸಗಳು ತಕ್ಷಣ ಆರಂಭವಾಗಬೇಕಿದೆ. ಇದರೊಂದಿಗೆ, 2022 ರಿಂದ ಬಾಕಿ ಉಳಿದಿರುವ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪ್ರಕ್ರಿಯೆಯನ್ನು ತುರ್ತಾಗಿ ಮುಗಿಸಿ, ಪ್ರತಿ ವರ್ಷ ಏಪ್ರಿಲ್ 24 ರಂದು ಡಾ. ರಾಜ್‌ಕುಮಾರ್ ಜನ್ಮದಿನದಂದೇ ಪ್ರಶಸ್ತಿ ವಿತರಣೆ ಮಾಡಲು ನಿಯಮ ರೂಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ:  ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಮೈಸೂರಿನ ಚಿತ್ರನಗರಿ ಯೋಜನೆಗೆ ಘೋಷಿತ 500 ಕೋಟಿ ರೂ. ಬಿಡುಗಡೆ ಮಾಡುವುದು ಹಾಗೂ ಚಿತ್ರರಂಗದ ಕಾರ್ಮಿಕರ ವಸತಿಗಾಗಿ ಬಿಡಿಎ ವತಿಯಿಂದ 5 ಎಕರೆ ಜಾಗ ಮಂಜೂರು ಮಾಡಿಕೊಡುವಂತೆಯೂ ಸಿಎಂಗೆ ಮನವಿ ಸಲ್ಲಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:20 pm, Wed, 1 July 26

Follow Us