ನೂರಾರು ಕೋಟಿ ರೂಪಾಯಿ ಹಾಕಿ ಮಾಡಿದ ಸಿನಿಮಾ ಹಿಟ್ ಆಯಿತು ಎಂದಾಕ್ಷಣ ನಿರ್ಮಾಪಕರಿಗೆ ಹೊಸ ಹುಮ್ಮಸ್ಸು ಬರುತ್ತದೆ. ಮುಂದಿನ ಪ್ರಾಜೆಕ್ಟ್ಗೆ ಬೇಕಾಬಿಟ್ಟಿ ದುಡ್ಡು ಸುರಿಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ಇನ್ನೂ ಕೆಲವರು ಒಂದು ಸಿನಿಮಾ ಹಿಟ್ ಆದ ಬಳಿಕ ಮತ್ತೆ ಸಿನಿಮಾ ಮಾಡುವ ಸಾಹಸಕ್ಕೆ ಹೋಗುವುದೇ ಇಲ್ಲ. ‘ಕೆಜಿಎಫ್ 2’ ಚಾಪ್ಟರ್ ಸಿನಿಮಾ (KGF Chapter 2) ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಅವರು ಈ ವಿಚಾರದಲ್ಲಿ ಜಾಣತನದ ನಡೆ ತೋರಿದ್ದಾರೆ. ತೆಲುಗು, ಮಲಯಾಳಂ, ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಅವರು ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.
‘ಕೆಜಿಎಫ್ 2’ ಸಿನಿಮಾ ಮಾಡಿದ ಮೋಡಿ ತುಂಬಾನೇ ದೊಡ್ಡದು. ಈ ಚಿತ್ರದಿಂದ ನಿರ್ಮಾಣ ಸಂಸ್ಥೆಗೆ ನೂರಾರು ಕೋಟಿ ಹರಿದು ಬಂದಿದೆ. 100 ಕೋಟಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಹಲವು ಪಟ್ಟು ಹೆಚ್ಚು ಹಣವನ್ನು ಗಳಿಕೆ ಮಾಡಿದೆ. ಇದು ವಿಜಯ್ ಖುಷಿಗೆ ಕಾರಣವಾಗಿದೆ. ಈ ಹಣವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ನಿರ್ಮಾಪಕರು ಯೋಚಿಸಿದಂತಿದೆ.
ಕನ್ನಡದ ‘ಕಾಂತಾರಾ’, ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗಳು ಕಡಿಮೆ ಬಜೆಟ್ನಲ್ಲಿ ಸಿದ್ಧಗೊಂಡ ಸಿನಿಮಾಗಳು. ಈ ಎರಡೂ ಚಿತ್ರಗಳ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ಬಘೀರ’ ಹಾಗೂ ‘ರಿಚರ್ಡ್ ಆ್ಯಂಟನಿ’ ಸಿನಿಮಾಗಳು ಸ್ವಲ್ಪ ದೊಡ್ಡ ಬಜೆಟ್ನಲ್ಲಿ ಸಿದ್ದಗೊಳ್ಳುತ್ತಿವೆ. ಈ ಚಿತ್ರಗಳ ಬಗ್ಗೆಯೂ ನಿರೀಕ್ಷೆ ಇದೆ.
ಇದಲ್ಲದೆ, ತೆಲುಗಿನಲ್ಲಿ ‘ಸಲಾರ್’, ಮಲಯಾಳಂನಲ್ಲಿ ‘ಟೈಸನ್’, ತಮಿಳಿನಲ್ಲಿ ಸುಧಾ ಕೊಂಗರ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಈ ಮೂಲಕ ವಿಜಯ್ ಕಿರಗಂದೂರು ಅವರು ದಕ್ಷಿಣ ಭಾರತದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗಳಲ್ಲಿ ಕೆಲವು ಹಿಂದಿಗೂ ಡಬ್ ಆಗಿ ತೆರೆ ಕಾಣುತ್ತಿದೆ.
ವಿಜಯ್ ಕಿರಗಂದೂರು ಅವರಿಗೆ ಬಾಲಿವುಡ್ನಿಂದಲೂ ಬೇಡಿಕೆ ಇದೆ. ಅಲ್ಲಿ ಹೋಗಿ ನೂರಾರು ಕೋಟಿ ಸುರಿದು ಸಿನಿಮಾ ಮಾಡುವ ಅವಕಾಶ ಅವರಿಗೆ ಇತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಸದ್ಯ ಬಾಲಿವುಡ್ನಲ್ಲಿ ಎಲ್ಲಾ ಸಿನಿಮಾಗಳು ಮಕಾಡೆ ಮಲಗುತ್ತಿವೆ. ಅಲ್ಲಿ ಸಿನಿಮಾ ಮಾಡಿದರೆ ನಷ್ಟ ಕೂಡ ಆಗಬಹುದು. ಹೀಗಾಗಿ, ವಿಜಯ್ ಕಿರಗಂದೂರು ಅವರು ದಕ್ಷಿಣ ಭಾರತದಲ್ಲೇ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅವರ ಈ ಜಾಣತನದ ನಡೆಗೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.