‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನವೇ ಅನಾವರಣ ಆಗಲಿದೆ ರಾಕಿ ಭಾಯ್​ ಮೆಟಾವರ್ಸ್​ ಜಗತ್ತು

| Updated By: ಮದನ್​ ಕುಮಾರ್​

Updated on: Mar 31, 2022 | 12:20 PM

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಪ್ರಚಾರಕ್ಕೆ ಮೆಟಾವರ್ಸ್​ ತಂತ್ರಜ್ಞಾನ ಬಳಕೆ ಆಗುತ್ತಿದೆ. ಭಾರತೀಯ ಸಿನಿಮಾ ಜಗತ್ತಿನಲ್ಲಿ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದೆ.

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನವೇ ಅನಾವರಣ ಆಗಲಿದೆ ರಾಕಿ ಭಾಯ್​ ಮೆಟಾವರ್ಸ್​ ಜಗತ್ತು
ಕೆಜಿಎಫ್​: ಚಾಪ್ಟರ್​ 2
Follow us on

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಏ.14ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಯಶ್​ ಅಭಿಮಾನಿಗಳು ‘ಕೆಜಿಎಫ್​ 2’ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಿಜಯ್​ ಕಿರಗಂದೂರು ಅವರು ಈ ಸಿನಿಮಾವನ್ನು ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ನರಾಚಿಯ ಕರಾಳ ಲೋಕವನ್ನು ನಿರ್ದೇಶಕರು ಈಗಾಗಲೇ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಈಗ ಅದರ ಮುಂದುವರಿದ ಭಾಗ ‘ಕೆಜಿಎಫ್​: ಚಾಪ್ಟರ್​ 2’ನಲ್ಲಿ ಇರಲಿದೆ. ಒಟ್ಟಾರೆ ರಾಕಿ ಭಾಯ್​ ಜಗತ್ತು ಹೇಗಿರಲಿದೆ ಎಂಬುದು ಏ.14ರಂದು ತಿಳಿಯಲಿದೆ. ಆದರೆ ಅದಕ್ಕೂ ಮುನ್ನ ಮೆಟಾವರ್ಸ್ (Metaverse)​ ಮೂಲಕ ಈ ಪ್ರಪಂಚ ಅನಾವರಣ ಆಗಲಿದೆ. ಹೌದು, ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ‘ಕೆಜಿಎಫ್​’ ಲೋಕವನ್ನು (KGF Verse) ತೋರಿಸಲು ಪ್ಲ್ಯಾನ್​ ಮಾಡಲಾಗಿದೆ. ಈ ವಿಷಯ ಕೇಳಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಮೆಟಾವರ್ಸ್​ ಎಂದರೆ ಏನು? ಅದರಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಜಗತ್ತು ಹೇಗಿರಲಿದೆ? ಇದರಲ್ಲಿ ಜನರು ಏನೆಲ್ಲ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೇಲರ್​ ಲಾಂಚ್​ ಆಯಿತು. ಈ ಸಂದರ್ಭದಲ್ಲಿ ಕೆಜಿಎಫ್​ ಮೆಟಾವರ್ಸ್​ ಬಗ್ಗೆ ನಿರೂಪಕ ಕರಣ್​ ಜೋಹರ್​ ಅವರು ಘೋಷಣೆ ಮಾಡಿದರು. ಆದರೆ ಅದೇನು ಎಂಬುದನ್ನು ಚಿತ್ರತಂಡದವರು ವಿವರಿಸಲಿಲ್ಲ. ‘ಕೆಜಿಎಫ್​’ ಸಿನಿಮಾದ ಅಭಿಮಾನಿಗಳು ಮೆಟಾವರ್ಸ್​ ಜಗತ್ತಿನಲ್ಲಿ ಹಲವು ವಿಷಯಗಳನ್ನು ನೋಡಬಹುದು. ಎಲ್ಲವೂ ಇಲ್ಲಿ ವರ್ಚುವಲ್​ ರಿಯಾಲಿಟಿ ರೀತಿ ಇರಲಿದೆ. ಈ ಹೊಸ ಪ್ರಕಾರದ ದುನಿಯಾದಲ್ಲಿ ಏನುಂಟು ಏನಿಲ್ಲ ಎಂಬುದನ್ನು ತಿಳಿಯಲು ಎಲ್ಲರಲ್ಲೂ ಕೌತುಕ ಮೂಡಿದೆ.

ಏಪ್ರಿಲ್​ 7ರಿಂದ ‘ಕೆಜಿಎಫ್​: ಚಾಪ್ಟರ್​ 2’ ರಾಕಿ ಭಾಯ್​ ಮೆಟಾವರ್ಸ್​ ಸೇಲ್ಸ್​ ಆರಂಭ ಆಗಲಿದೆ. ಇದಕ್ಕೆ ಸಂಬಂಧಿಸಿದ ವೆಬ್​ಸೈಟ್​ ಕೂಡ ಈಗ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿಯನ್ನು ಸೋಶಿಯಲ್​ ಮೀಡಿಯಾ ಮೂಲಕ ಚಿತ್ರತಂಡ ಹಂಚಿಕೊಂಡಿದೆ. Non-fungible token ಮೂಲಕ ಕೆಜಿಎಫ್​ ಮೆಟಾವರ್ಸ್​ಗೆ ಪ್ರವೇಶ ಪಡೆಯಬಹುದು. ಅಲ್ಲಿ ಗೇಮ್​ ಡೆವೆಲಪ್​​ ಮಾಡಬಹುದು, ವಸ್ತುಗಳನ್ನು ಹಾಗೂ ಸ್ಥಳಗಳನ್ನು ವರ್ಚುವಲ್​ ಆಗಿ ಖರೀದಿಸಬಹುದು. ಇನ್ನೂ ಹಲವಾರು ಸಾಧ್ಯತೆಗಳು ಈ ದುನಿಯಾದಲ್ಲಿ ಇದೆ. ಒಟ್ಟಿನಲ್ಲಿ ಜನರಿಗೆ ಹೊಸದೊಂದು ಅನುಭೂತಿ ನೀಡಲು ‘ಕೆಜಿಎಫ್​ ಮೆಟಾವರ್ಸ್​’ ಸಿದ್ಧವಾಗುತ್ತಿದೆ.

ಮೆಟಾವರ್ಸ್​ ಎಂಬುದು ಇಂಟರ್​ನೆಟ್​ ಲೋಕದ ಹೊಸ ಆವಿಷ್ಕಾರ. ಸೋಶಿಯಲ್​ ಮೀಡಿಯಾಗಳ ಸ್ವರೂಪವನ್ನೇ ಇದು ಸಂಪೂರ್ಣವಾಗಿ ಬದಲಾಯಿಸಲಿದೆ. ಸಿನಿಮಾ ನೋಡುವ, ಶಾಪಿಂಗ್​ ಮಾಡುವ, ಜನರ ಜೊತೆ ಸ್ನೇಹ ಬೆಳೆಸುವ, ಚರ್ಚೆ ನಡೆಸುವ.. ಹೀಗೆ ಎಲ್ಲ ಕ್ರಿಯೆಗಳೂ ಇಲ್ಲಿ ಹೊಸ ರೂಪ ಪಡೆದುಕೊಳ್ಳಲಿವೆ. ಇದು ಈಗ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಪ್ರಚಾರಕ್ಕೆ ಬಳಕೆ ಆಗುತ್ತಿದೆ. ಭಾರತೀಯ ಸಿನಿಮಾ ಜಗತ್ತಿನಲ್ಲಿ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದೆ.

ಕನ್ನಡ ಚಿತ್ರರಂಗವನ್ನು ದೊಡ್ಡ ಸ್ಥಾನಕ್ಕೆ ಕೊಂಡೊಯ್ದ ಖ್ಯಾತಿ ‘ಕೆಜಿಎಫ್​: ಚಾಪ್ಟರ್ 1’ ಸಿನಿಮಾಗೆ ಇದೆ. ಈಗ ಈ ಸಿನಿಮಾದ ಎರಡನೇ ಪಾರ್ಟ್​ ಬಿಡುಗಡೆ ಆಗುತ್ತಿದ್ದು ಸಹಜವಾಗಿಯೇ ನಿರೀಕ್ಷೆ ಮುಗಿಲು ಮುಟ್ಟಿದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಜಯ್​ ದತ್​, ರವೀನಾ ಟಂಡನ್​ ಮುಂತಾದವರು ಅಭಿನಯಿಸಿರುವುದರಿಂದ ಉತ್ತರ ಭಾರತದಲ್ಲೂ ಈ ಚಿತ್ರದ ಬಗ್ಗೆ ಹೈಪ್​ ಸೃಷ್ಟಿ ಆಗಿದೆ. ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್​ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ:

‘ಕೆಜಿಎಫ್​ 2’, ಉಪೇಂದ್ರ ಮತ್ತು ಸ್ಯಾಂಡಲ್​ವುಡ್​ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಹೇಳೋದು ಏನು?

‘ಕೆಜಿಎಫ್​ 2’ ಮತ್ತು ‘ಬೀಸ್ಟ್​’ ನಿರ್ದೇಶಕರ ನಡುವೆ ದೋಸ್ತಿ ಹೇಗಿದೆ ನೋಡಿ; ಕ್ಲ್ಯಾಶ್​ ವಿಷಯ ಬಿಟ್ಟುಬಿಡಿ