
ಕಿಚ್ಚ ಸುದೀಪ್ ಅವರ ‘ಮಾರ್ಕ್’ ಸಿನಿಮಾ (Mark Movie) ಡಿಸೆಂಬರ್ 25ರಂದು ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿತ್ತು. ಪರೋಕ್ಷವಾಗಿ ಇದನ್ನು ಸುದೀಪ್ ಕೊಡ ಒಪ್ಪಿಕೊಂಡರು. ಈಗ ನಾಲ್ಕು ದಿನದ ಗಳಿಕೆ ಲೆಕ್ಕಾಚಾರವನ್ನು ಚಿತ್ರತಂಡ ನೀಡಿದೆ. ಈ ಸಿನಿಮಾ ನಾಲ್ಕು ದಿನಕ್ಕೆ ಬರೋಬ್ಬರಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕ್ರಿಸ್ಮಸ್ ವಿನ್ನರ್ ಆಗಿ ಸಿನಿಮಾ ಹೊರ ಹೊಮ್ಮಿದೆ.
‘ಮಾರ್ಕ್’ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಕೆಲವೇ ತಿಂಗಳಲ್ಲಿ ಸಿನಿಮಾದ ಕೆಲಸವನ್ನು ಸುದೀಪ್ ಮಾಡಿ ಮುಗಿಸಿದ್ದರು. ಈ ನಿರೀಕ್ಷೆಯನ್ನು ತಲುಪಲು ಸಿನಿಮಾ ಯಶಸ್ವಿಯಾಗಿದೆ. ಈ ಚಿತ್ರ ಎಲ್ಲ ಕಡೆಗಳಿಂದ ಅದ್ಭುತ ಕಲೆಕ್ಷನ್ ಮಾಡುತ್ತಾ ಇದೆ. ಈ ಸಿನಿಮಾ ತಂಡದವರು ‘ಕ್ರಿಸ್ಮಸ್ ಬ್ಲಾಕ್‌ಬಸ್ಟರ್’ ಎಂದು ಘೋಷಣೆ ಮಾಡಿದ್ದಾರೆ. ಮೊದಲ ನಾಲ್ಕು ದಿನಕ್ಕೆ ಚಿತ್ರ ಇಷ್ಟು ದೊಡ್ಡ ಮೊತ್ತ ಹರಿದು ಬಂದಿರುವುದು ತಂಡದ ಖುಷಿ ಹೆಚ್ಚಿಸಿದೆ. ಈ ಮೂಲಕ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಕ್ರಿಸ್ಮಸ್ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಸಾಲು ಸಾಲು ರಜೆಗಳು ಸಿಗುತ್ತವೆ. ಅನೇಕ ಕಂಪನಿಗಳಿಗೆ ವಾರ ಪೂರ್ತಿ ರಜೆ ಇರುತ್ತದೆ. ಕೆಲ ಶಾಲಾ-ಕಾಲೇಜುಗಳು ಕ್ರಿಸ್ಮಸ್ ರಜೆ ಘೋಷಣೆ ಮಾಡುತ್ತವೆ. ಇದು ಸಿನಿಮಾಗೆ ಸಹಕಾರಿ ಆಗಿದೆ. ಶನಿವಾರ ಹಾಗೂ ಭಾನುವಾರ ಮಾತ್ರವಲ್ಲದೆ, ಸೋಮವಾರವೂ ಸಿನಿಮಾಗೆ ಉತ್ತಮ ಬುಕಿಂಗ್ ಇದೆ.
ಸಿನಿಮಾ ವಿತರಕರು ‘ಮಾರ್ಕ್’ ಚಿತ್ರವನ್ನು ಕಮರ್ಷಿಯಲ್ ಹಿಟ್ ಎಂದು ಶ್ಲಾಘಿಸಿದ್ದಾರೆ. ಹಿಂದಿಯಲ್ಲಿ ‘ಧುರಂಧರ್’ ಹಾಗೂ ಹಾಲಿವುಡ್ನಲ್ಲಿ ‘ಅವತಾರ್ 3’ ಚಿತ್ರಕ್ಕೆ ಟಕ್ಕರ್ ಕೊಟ್ಟು ದೊಡ್ಡ ಮಟ್ಟದ ಗೆಲುವನ್ನು ಈ ಸಿನಿಮಾ ಕಂಡಿದೆ.
ಇದನ್ನೂ ಓದಿ: ‘ಮಾರ್ಕ್’ ಚಿತ್ರದ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸಿಕ್ತು ಸ್ಪಷ್ಟನೆ
ಬೆಂಗಳೂರು ಮಾತ್ರವಲ್ಲದೆ, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ ಸೇರಿದಂತೆ ರಾಜ್ಯದ ಅನೇಕ ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ಕಿಚ್ಚ ಸುದೀಪ್ ಅವರ ಸ್ಟೈಲ್, ಸಿನಿಮಾದಲ್ಲಿನ ಅವರ ಮ್ಯಾನರಿಸಂ ಫ್ಯಾನ್ಸ್ಗೆ ಇಷ್ಟ ಆಗಿದೆ. ‘ಮ್ಯಾಕ್ಸ್’ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಬೆಳ್ಳಿಪರದೆ ಮೇಲೆ ಮೋಡಿ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.