ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಕಲಾವಿದರ ನಟ್ಟು ಬೋಲ್ಟ್ ಎಲ್ಲಿ ಟೈಟ್ ಮಾಡೋದು ಅಂತ ನಂಗೆ ಗೊತ್ತು ಎಂದು ಶಿವಕುಮಾರ್ ಹೇಳಿದ್ದರು. ಈ ಹೇಳಿಕೆ ಬೆಂಬಲಿಸಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ, ಸಿಸಿಎಲ್ ಆಡಿ ಸಿನಿಮೋತ್ಸವಕ್ಕೆ ಬರದವರ ಬಗ್ಗೆಯೂ ಪರೋಕ್ಷವಾಗಿ ಟೀಕೆ ಮಾಡಿದ್ದರು. ಈ ಎಲ್ಲಾ ವಿಚಾರಗಳ ಬಗ್ಗೆ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರೋ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ.
‘ಚಲನಚಿತ್ರ vs ಸರ್ಕಾರ ವಿಷಯ ಚರ್ಚೆ ಆಗುತ್ತಿದೆ. ಎಲ್ಲರೂ ಚಿತ್ರರಂಗದವರನ್ನು ಬಯ್ಯುತ್ತಿದ್ದಾರೆ. ರವಿ ಗಣಿಗ ಚಿತ್ರರಂಗದ ಕಲಾವಿದರ ಬಗ್ಗೆ, ಚೇಂಬರ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ರವಿಕುಮಾರ್ ನೇರವಾಗಿ ಹೆಸರು ತೆಗೆದುಕೊಂಡು ಮಾತನಾಡಬೇಕಿತ್ತು. ಆಗ ಅವರ ಮಾತಿಗೆ ತೂಕ ಬರುತ್ತಿತ್ತು. ಈ ಹೀರೋಗಳನ್ನು ಬ್ಯಾನ್ ಮಾಡಬೇಕು ಎಂದು ಅವರು ಹೇಳಿದ್ದಾರೆ. ಶಾಸಕರಾಗಿ ಈ ಹೇಳಿಕೆ ನೀಡಬಾರದು. ಹಿಟ್ಲರ್ ರೀತಿ ಆಡಬಾರದು’ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್. ಅಲ್ಲದೆ, ರವಿಕುಮಾರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
‘ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದೀರಿ. 2004ರಿಂದ ಈವರೆಗೆ ಅವರು ಅವಾರ್ಡ್ ತೆಗೆದುಕೊಂಡಿಲ್ಲ. ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದರು. ಈ ಮೊದಲು ಅವಾರ್ಡ್ಗೆ ಕೊಡುತ್ತೇವೆ ಎಂದು ಕೊಟ್ಟಿಲ್ಲ. ರಾಜ್ಯ ಪ್ರಶಸ್ತಿ ಎಂದರೆ ಅಸಹ್ಯವಾಗಿ ಹೋಗಿದೆ. ಅವಾರ್ಡ್ ನಿರಾಕರಿಸೋದಕ್ಕೆ ಅವರದ್ದೇ ಆದ ಕಾರಣ ಇರುತ್ತದೆ’ ಎಂದು ಸುದೀಪ್ ಪರ ಬ್ಯಾಟ್ ಬೀಸಿದ್ದಾರೆ.
‘ಪಕ್ಷದ ಕಾರ್ಯಕ್ರಮಕ್ಕೆ ಚಿತ್ರರಂಗದವರು ಬಂದಿಲ್ಲ ಎಂಬುದನ್ನು ಅಧಿಕಾರಕ್ಕೆ ಬಂದ ಬಳಿಕ ಸೇಡು ತೀರಿಸಿಕೊಳ್ಳೋದು ತಪ್ಪು. ಎಲ್ಲಾ ಪಕ್ಷದವರೂ ನೂರು ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆ ನಟರು ಹೊಗಬೇಕು ಎಂಬ ಕಾನೂನು ಇದೆಯಾ? ಸಾಧು ಕೋಕಿಲ ಅವರಿಗೆ ನಿಮ್ಮ ಪಕ್ಷದ ಬಗ್ಗೆ ಒಲವು ಇತ್ತು. ಅವರು ಬಂದರು. ನಿಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬಂದಿಲ್ಲ ಎಂಬ ಕಾರಣಕ್ಕೆ ಚಿತ್ರರಂಗದವರು ಕನ್ನಡ ವಿರೋಧಿಗಳಾ’ ಎಂದು ಪ್ರಶ್ನೆ ಮಾಡಿದ್ದಾರೆ ಚಕ್ರವರ್ತಿ ಚಂದ್ರಚೂಡ್.
‘ಸಿನಿಮೋತ್ಸವಕ್ಕೆ ಸುದೀಪ್, ಯಶ್ಗೆ ಆಹ್ವಾನ ಕೊಟ್ಟಿದ್ದೀರಾ? ಇಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತದೆ. ದುಡ್ಡು ಹೊಡೆಯೋ ಕಾರ್ಯಕ್ರಮ ಇದು. ಯಾರೇ ಅಧಿಕಾರದಲ್ಲಿ ಇದ್ದರೂ ಹಿಟ್ಲರ್ ಆಗೋಕೆ ಆಗಲ್ಲ. ಸಾಧು ಕೋಕಿಲ ಅವರು ರಾಜಕಾರಣಿನಾ ಅಥವಾ ಸಿನಿಮಾದವರಾ ಎಂಬುದು ಗೊತ್ತಾಗಿಲ್ಲ’ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.
‘ರಾಜಕಾರಣಿಗಳು ಹಿಟ್ಲರ್ ನೀತಿ ತೋರಬಾರದು. ಕನ್ನಡಾಭಿವೃದ್ಧಿ ಕಾರ್ಯಕ್ರಮ ಏನು ಮಾಡ್ತಿದೆ ಹೇಳಿ. ಚಿತ್ರರಂಗವನ್ನು ನಾಶ ಮಾಡೋಕೆ ಆಗಲ್ಲ. ಚಿತ್ರೋದ್ಯಮದವರಿಗೆ ಬಯ್ಯೋದು ಕೆಲಸ ಆಗಿದೆ. ಸಾಧು ಕೋಕಿಲ ಕೊಟ್ಟ ತಪ್ಪು ಮಾಹಿತಿಗೆ ಈ ರೀತಿ ಆಗಿರೋದು’ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.
ಇದನ್ನೂ ಓದಿ: ‘ಪಾರ್ಟಿ ಅನ್ನೋದು ವೈಯಕ್ತಿಕ’; ಕಿಚ್ಚ ಸುದೀಪ್ ಅವರ ಆಲೋಚೆನೆಯೇ ಬೇರೆ
‘ನೀವು ಇನ್ನೂ ಉಪಮುಖ್ಯಮಂತ್ರಿ. ನಿಮ್ಮ ಸಿಎಂ ಮಾಡಿದರೆ ರಾಜ್ಯಕ್ಕೆ ಕಷ್ಟ ಆಗುತ್ತದೆ. ಓರ್ವ ಹಿಟ್ಲರ್ನ ತಂದು ಕೂರಿಸಬಾರದು. ಈ ವರ್ತನೆ ಬಿಟ್ಟರೆ ದೊಡ್ಡ ನಾಯಕರಾಗ್ತೀರಾ. ಪುಡಿ ರೌಡಿ ತರ ಮಾತನಾಡೋದು ಬಿಟ್ಟುಬಿಡಿ. ನಿಮ್ಮ ಸಾಧುಕೋಕಿಲ ತಪ್ಪು ಮಾಡಿದಾರೆ. ಅದನ್ನು ಮೊದಲು ಸರಿ ಮಾಡಿ’ ಎಂದು ಸವಾಲು ಹಾಕಿದ್ದಾರೆ ಚಕ್ರವರ್ತಿ ಚಂದ್ರಚೂಡ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.