‘ರಾಮನಗರ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಏನು ಈ ಚಿತ್ರದ ಕಹಾನಿ?
ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿರುವ ಯುವಕರ ಸಮಸ್ಯೆಗಳು ಒಂದೆರಡಲ್ಲ. ಅಂಥ ಸಮಸ್ಯೆಗಳನ್ನೇ ಕಥೆಯಾಗಿಸಿ ‘ರಾಮನಗರ’ ಸಿನಿಮಾ ಮಾಡಲಾಗಿದೆ. ಈ ಚಿತ್ರಕ್ಕೆ ವಿಜಯ್ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭು ಸೂರ್ಯ ಹೀರೋ ಆಗಿ ನಟಿಸಿದ್ದಾರೆ. ಯುಗಾದಿ ಹಬ್ಬದ ಸಮಯದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ರೈತರ ಕುರಿತು ಕಥೆ ಇರುವ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಬಂದಿವೆ. ಅವುಗಳ ಸಾಲಿಗೆ ‘ರಾಮನಗರ’ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಇದರಲ್ಲಿ ಭಿನ್ನವಾದ ಕಥಾಹಂದರ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ರಾಮನಗರ ಜಿಲ್ಲೆ ಬೇವೂರು ಮಠದ ಪರಮಪೂಜ್ಯರು ಹಾಡುಗಳನ್ನು ರಿಲೀಸ್ ಮಾಡಿ ‘ರಾಮನಗರ’ (Ramanagara) ತಂಡಕ್ಕೆ ಶುಭ ಹಾರೈಸಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ಪ್ರಭುಸೂರ್ಯ, ಶಿವಕುಮಾರ್ ಆರಾಧ್ಯ, ತಮ್ಮಣ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಅಷ್ಟಕ್ಕೂ ‘ರಾಮನಗರ’ ಎಂದು ಊರಿನ ಹೆಸರನ್ನೇ ಶೀರ್ಷಿಕೆಯಾಗಿ ಇಟ್ಟಿದ್ದು ಯಾಕೆ? ಈ ಚಿತ್ರತಂಡ ಮಾಹಿತಿ ನೀಡಿದೆ. ‘ಈ ರೀತಿ ಶೀರ್ಷಿಕೆ ಇದ್ದರೂ ಕೂಡ ಇದು ರೈತನ ಕಥೆ ಇರುವ ಸಿನಿಮಾ. ವಿದ್ಯಾವಂತನಾದ ದೇಶಾಭಿಮಾನಿ ರೈತನ ಕಹಾನಿ. ಹಳ್ಳಿಯಲ್ಲಿ ಓದಿದ ಹುಡುಗನೊಬ್ಬ ಕೆಲಸ ಹುಡುಕಿಕೊಂಡ ನಗರಕ್ಕೆ ಬರುವ ಬದಲು ಹಳ್ಳಿಯಲ್ಲೇ ಇದ್ದುಕೊಂಡು ರೈತನಾಗುತ್ತಾನೆ. ಆ ಮೂಲಕ ಇತರ ವಿದ್ಯಾವಂತ ಯುವಕರಿಗೂ ಮಾದರಿ ಆಗುತ್ತಾನೆ. ಇದು ಈ ಸಿನಿಮಾದ ಕತೆ’ ಎಂದು ನಿರ್ದೇಶಕ ವಿಜಯ್ ರಾಜ್ ಹೇಳಿದ್ದಾರೆ.
ಯುಗಾದಿ ವೇಳೆಗೆ ‘ರಾಮನಗರ’ ಸಿನಿಮಾ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಉದ್ಯಮಿ ಆಗಿರುವ ಸಿ.ಕೆ. ಮಂಜುನಾಥ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಕೆವಿನ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. 3 ಹಾಡುಗಳು ಇವೆ. ‘ಸಿರಿ ಮ್ಯೂಸಿಕ್’ ಮೂಲಕ ಹಾಡುಗಳು ಬಿಡುಗಡೆ ಆಗಿದೆ.
ಇದನ್ನೂ ಓದಿ: ಕರ್ನಾಟಕ ಎಲ್ಲಿದೆ ಅಂತ ಗೊತ್ತಿಲ್ಲ: ರಶ್ಮಿಕಾ ಹೀಗೆ ಹೇಳಿದ್ದು ನಿಜವೇ? ಆಪ್ತರು ಹೇಳೋದು ಏನು?
ಈ ಸಿನಿಮಾದಲ್ಲಿ ಪ್ರಭುಸೂರ್ಯ ಅವರು ನಾಯಕನಾಗಿ ನಟಿಸಿದ್ದಾರೆ. ‘ಹಳ್ಳಿಯ ಯುವಕರು ವಿದ್ಯಾವಂತರಾಗಿ ಕೃಷಿಕನಾಗುತ್ತೇನೆ ಎಂದರೆ ಯಾವೆಲ್ಲ ಸವಾಲುಗಳು ಎದುರಾಗುತ್ತವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಂತಹ ಸಮಸ್ಯೆಗಳನ್ನು ದಾಟಿಕೊಂಡು ಆದರ್ಶ ರೈತನಾಗುವ ಯುವಕನ ಕಥೆ ಈ ಸಿನಿಮಾದಲ್ಲಿ ಇದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.