‘ಚಕ್ರವರ್ತಿ’ ಬದಲು ‘ಚತ್ರವರ್ತಿ’ ಎಂದು ತಪ್ಪು ಬರೆದಿದ್ಯಾರು? ರಿವೀಲ್ ಮಾಡಿದ ಸುದೀಪ್

|

Updated on: Dec 31, 2024 | 7:34 AM

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಆದರೆ, ಚಿತ್ರದ ಟೈಟಲ್​ಕಾರ್ಡ್​ನಲ್ಲಿ ಚಕ್ರವರ್ತಿಯ ಬದಲು ಚತ್ರವರ್ತಿ ಎಂದು ತಪ್ಪಾಗಿ ಬರೆಯಲಾಗಿತ್ತು. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದು, ತಪ್ಪು ಸಣ್ಣದು ಎಂದೂ, ಚಿತ್ರದ ಯಶಸ್ಸೇ ಮುಖ್ಯ ಎಂದೂ ಹೇಳಿದ್ದಾರೆ. ನಿರ್ದೇಶಕರು ಕನ್ನಡದವರಲ್ಲದ ಕಾರಣ ಅವರಿಗೆ ಗೊತ್ತಾಗಿಲ್ಲ ಎಂದಿದ್ದಾರೆ.

‘ಚಕ್ರವರ್ತಿ’ ಬದಲು ‘ಚತ್ರವರ್ತಿ’ ಎಂದು ತಪ್ಪು ಬರೆದಿದ್ಯಾರು? ರಿವೀಲ್ ಮಾಡಿದ ಸುದೀಪ್
ಸುದೀಪ್
Follow us on

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾದ ಗಳಿಕೆ 30 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಈ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಚಿತ್ರತಂಡ ಮಾಡಿದ ಒಂದು ದೊಡ್ಡ ಎಡವಟ್ಟು ಕಣ್ಣಿಗೆ ಕಾಣಿಸಿತ್ತು. ‘ಅಭಿನಯ ಚಕ್ರವರ್ತಿ ಬಾದ್​ಷಾ ಕಿಚ್ಚ ಸುದೀಪ್’ ಎಂದು ಬರೆಯುವಾಗ ತಪ್ಪು ನಡೆದಿತ್ತು. ಚಕ್ರವರ್ತಿ ಬದಲು ಚತ್ರವರ್ತಿ ಎಂದು ಬರೆಯಲಾಗಿತ್ತು. ಈ ಬಗ್ಗೆ ಸುದೀಪ್ ಮೌನ ಮುರಿದಿದ್ದಾರೆ.

‘ಮ್ಯಾಕ್ಸ್’ ಸಿನಿಮಾದ ಥ್ಯಾಂಕ್ಸ್ ಮೀಟ್​ನಲ್ಲಿ ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಅವರು ‘ಕ್ಷಮಿಸಿ.. ಕ್ಷಮಿಸಿ..’ ಎಂದು ಕೇಳಿಕೊಂಡರು. ಆಗ ಸುದೀಪ್ ಅವರು ಮೈಕ್ ತೆಗೆದುಕೊಂಡು ಮಾತನಾಡಿದರು. ‘ತುಂಬಾ ಕೊರತೆ ಇರುವ ನನ್ನನ್ನು ನನ್ನ ತಾಯಿಯೇ ಕ್ಷಮಿಸಿ ಬೆಳೆಸಿದ್ದಾರೆ. ಕ್ಷಮೆ ಅನ್ನೋದು ತಾಯಿಯ ಗುಣ. ಟೈಟಲ್ ಕಾರ್ಡ್​ನಲ್ಲಿರೋ ತಪ್ಪನ್ನು ಮೊದಲು ನೋಡಿದಿರಿ. ಆ ಬಳಿಕ ಅವರು ನನ್ನ ಜೊತೆ ಕೊಟ್ಟ ಸಿನಿಮಾನ ನೋಡಿದಿರಿ. ಸಿನಿಮಾದ ಎದುರು ಈ ತಪ್ಪು ಸಣ್ಣದು’ ಎಂದರು ಸುದೀಪ್.

‘ಹೆಸರಲ್ಲೇನಿದೆ? ನನಗೆ ಹುಚ್ಚ ಎಂದೂ ಕರೆಯುತ್ತಾರೆ. ನಿರ್ದೇಶಕರು ಕನ್ನಡದವರಲ್ಲ, ಅವರಿಗೆ ಗೊತ್ತಾಗಿಲ್ಲ. ಅವರಿಗೆ ಕನ್ನಡ ಓದೋಕೆ ಬರಲ್ಲ. ಟೈಪ್ ಮಾಡಿ ಕಳುಹಿಸಿದವರ ತಪ್ಪು. ಇದು ಅಪ್ಪಟ ಕನ್ನಡದವರೇ ಮಾಡಿದ ತಪ್ಪು’ ಎಂದರು ಸುದೀಪ್.

ಇದನ್ನೂ ಓದಿ: ‘ಮ್ಯಾಕ್ಸ್’ ಕಲೆಕ್ಷನ್ ಎಷ್ಟು? ನಿರ್ಮಾಪಕನಾಗಿ ಕಿಚ್ಚ ಸುದೀಪ್ ಹೇಳಿದ್ದೇನು?

‘ಸಿನಿಮಾ ರಿಲೀಸ್​ಗೆ ನಾಲ್ಕೈದು ದಿನ ಇದ್ದಾಗ ಟ್ರೇಲರ್ ಬಂತು. ಕೊನೆಯ ಹಂತದಲ್ಲಿ ನಾವು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದೆವು. ಸಿನಿಮಾ ಟೈಟಲ್ ಕಾರ್ಡ್ ಬಗ್ಗೆ ಗಮನ ಹರಿಸೋಕೆ ಆಗಲೇ ಇಲ್ಲ. ಸಿನಿಮಾ ರಿಲೀಸ್ ಆದ ಬಳಿಕ ನನಗೆ ಸ್ಕ್ರೀನ್​ಶಾಟ್​ಗಳು ಬಂತು. ನನಗೆ ಆ ಬಗ್ಗೆ ಬೇಸರ ಆಗಿಲ್ಲ. ನಾನು ಅದನ್ನು ಕೇರ್ ಮಾಡೇ ಇಲ್ಲ. ಸಿನಿಮಾ ಸಕ್ಸಸ್​ ಮುಖ್ಯ. ಹೆಸರಲ್ಲೇನಿದೆ ಬದನೆಕಾಯಿ’ ಎಂದರು ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:34 am, Tue, 31 December 24