ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಸ್ಟಾರ್ ನಟ ಸುದೀಪ್. ಕೇವಲ ಮಾಸ್ ಸಿನಿಮಾಗಳ ಹಿಂದೆ ಬೀಳದೆ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ನಟರು ಒಂದು ಹಂತ ದಾಟಿದ ಬಳಿಕ ಕೇವಲ ತಮ್ಮ ಮ್ಯಾನರಿಸಂ, ಡೈಲಾಗ್, ಫೈಟ್ಗಳ ಮೂಲಕವೇ ಸಿನಿಮಾ ಹಿಟ್ ಮಾಡಿಕೊಳ್ಳುತ್ತೇವೆ ಎಂಬ ಹಮ್ಮಿನಲ್ಲಿರುತ್ತಾರೆ. ಕೆಲವು ಸ್ಟಾರ್ ನಟರು ಇಂದಿಗೂ ಇದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಸುದೀಪ್ ಸ್ಟಾರ್ ನಟರಾಗಿದ್ದರೂ, ದೊಡ್ಡ ಅಭಿಮಾನಿ ಬಳಗ ಹೊಂದಿದ್ದಿದ್ದರೂ ಸಹ ಈಗಲೂ ಸಿನಿಮಾಕ್ಕಾಗಿ ಪೂರ್ಣ ಪರಿಶ್ರಮ ಹಾಕುತ್ತಾರೆ. ಪಾತ್ರಕ್ಕಾಗಿ ಕಠಿಣ ತರಬೇತಿ ತೆಗೆದುಕೊಂಡು ತಯಾರಾಗುತ್ತಿದ್ದಾರೆ.
‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ಕಿಚ್ಚ ಸುದೀಪ್ ಇದೀಗ ತಮ್ಮ ಮುಂದಿನ ಸಿನಿಮಾ ‘ಬಿಲ್ಲಾ ರಂಗ ಭಾಷಾ’ಗಾಗಿ ರೆಡಿಯಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಒಂದೊಂದು ಪಾತ್ರಕ್ಕೆ ಒಂದೊಂದು ರೀತಿ ದೇಹಾಕಾರ ಹಾಗೂ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಪಾತ್ರದಲ್ಲಿ ಭಾರಿ ಕಟ್ಟುಮಸ್ತಾದ ದೇಹವನ್ನು ಹೊಂದಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ ಕಿಚ್ಚ.
ವರ್ಕೌಟ್ ಸುದೀಪ್ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುದೀಪ್ ತಮ್ಮ ಉಬ್ಬಿದ ತೋಳುಗಳನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಸುದೀಪ್ ಉದ್ದನೆಯ ಆದರೆ ಹೆಚ್ಚು ದಪ್ಪ ಅಲ್ಲದ ದೇಹ ಹೊಂದಿದವರು. ಇತರೆ ಕೆಲವು ನಟರಿಗೆ ಹೋಲಿಸಿದರೆ ದೇಹವನ್ನು ಹುರಿಗೊಳಿಸುವುದು ಸುದೀಪ್ಗೆ ತುಸು ಕಷ್ಟ ಹಾಗಿದ್ದರೂ ಸಹ ಸುದೀಪ್ ಅದನ್ನೇ ಸವಾಲಾಗಿ ಸ್ವೀಕರಿಸಿ ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಪೈಲ್ವಾನ್ ರೀತಿಯಲ್ಲಿ ತಯಾರಾಗುತ್ತಿದ್ದಾರೆ.
ಇದನ್ನೂ ಓದಿ: ಕಿಚ್ಚನಿಗೆ ಇದು ವಿಶೇಷ ದಿನ; ನೆನಪಿಸಿಕೊಂಡ ಸುದೀಪ್
ತಮ್ಮ ವರ್ಕೌಟ್ ಚಿತ್ರವನ್ನು ಹಂಚಿಕೊಂಡಿರುವ ಸುದೀಪ್ ಹೇಳಿರುವಂತೆ, ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಇನ್ನೂ ಹೆಚ್ಚಿನ ಶ್ರಮವನ್ನು ಬೇಡುತ್ತಿದೆಯಂತೆ. ಅಲ್ಲಿಗೆ ಕೇವಲ ತೋಳು ಮಾತ್ರವಲ್ಲ ಬಹುಷಃ ಸಿಕ್ಸ್ ಪ್ಯಾಕ್ ಮಾಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಸುದೀಪ್ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಅಂತ್ಯಗೊಳಿಸಿದ್ದು, ಕೆಲವೇ ದಿನಗಳಲ್ಲಿ ಸಿನಿಮಾದ ಬಗ್ಗೆ ಅಪ್ಡೇಟ್ ಒಂದು ಹೊರಬೀಳಲಿದೆ. ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗುವ ಮುನ್ನವೇ ‘ಬಿಲ್ಲಾ ರಂಗ ಭಾಷಾ’ ಸಿನಿಮಾಕ್ಕೆ ತಯಾರಾಗುತ್ತಿದ್ದಾರೆ. ಈ ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ. ‘ದ್ರೋಣಾಚಾರ್ಯ’ ಸಿನಿಮಾವನ್ನು ಅನುಪ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು, ಆದರೆ ಅದರ ಬದಲಿಗೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಪ್ರಾರಂಭ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ