ಸುದೀಪ್ ಹೊಸ ಸಿನಿಮಾ ಬಗ್ಗೆ ತೆಲುಗು ರಿಯಾಲಿಟಿ ಶೋನಲ್ಲಿ ಸುದ್ದಿ ಲೀಕ್
Kichcha Sudeep movies: ಕಿಚ್ಚ ಸುದೀಪ್ ಅವರು ಪ್ರಸ್ತುತ ‘ಬಿಲ್ಲ ರಂಗ ಭಾಷಾ’ ಮತ್ತು ‘ಮಾರ್ಕ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಸುದೀಪ್ ಅವರ ಮತ್ತೊಂದು ಹೊಸ ಸಿನಿಮಾದ ಬಗ್ಗೆ ತೆಲುಗು ರಿಯಾಲಿಟಿ ಶೋನಲ್ಲಿ ಸುದ್ದಿ ಲೀಕ್ ಆಗಿದೆ. ಯಾವುದು ಆ ಸಿನಿಮಾ? ಸುದೀಪ್ ಅವರ ಹೊಸ ಸಿನಿಮಾ ನಿರ್ದೇಶಿಸುತ್ತಿರುವುದು ಯಾವ ನಿರ್ದೇಶಕ? ಇಲ್ಲಿದೆ ಮಾಹಿತಿ...

ಕಿಚ್ಚ ಸುದೀಪ್ (Sudeep) ಪ್ರಸ್ತುತ ಬಿಗ್ಬಾಸ್ ಕನ್ನಡ ನಿರೂಪಣೆ ಜೊತೆಗೆ ಅನೂಪ್ ಭಂಡಾರಿ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ‘ಮಾರ್ಕ್’ ಹೆಸರಿನ ಹೊಸ ಸಿನಿಮಾ ಸಹ ಪ್ರಾರಂಭಿಸಿದ್ದಾರೆ. ಸುದೀಪ್ ಅವರು ತಮ್ಮ ಸಿನಿಮಾಗಳ ಘೋಷಣೆಯನ್ನು ಸ್ವತಃ ತಾವೇ ಮಾಡುತ್ತಾರೆ. ಅದೂ ಸಿನಿಮಾದ ಚಿತ್ರೀಕರಣ ಶುರು ಆಗುವ ಸಮಯದಲ್ಲಿ ಮಾತ್ರವೇ ಸಿನಿಮಾದ ಬಗ್ಗೆ ಸುದ್ದಿ ಹಂಚಿಕೊಳ್ಳುತ್ತಾರೆ. ಆದರೆ ಇದೀಗ ಸುದೀಪ್ ಅವರ ಹೊಸ ಸಿನಿಮಾದ ಸುದ್ದಿ ತೆಲುಗು ರಿಯಾಲಿಟಿ ಶೋ ಒಂದರಿಂದ ಲೀಕ್ ಆಗಿದೆ.
ತೆಲುಗಿನಲ್ಲಿ ಹಲವಾರು ಸಿಂಗಿಂಗ್ ರಿಯಾಲಿಟಿ ಶೋ ನಡೆಯುತ್ತವೆ. ಅದರಲ್ಲಿ ತೆಲುಗು ಇಂಡಿಯನ್ ಐಡಲ್ ಸಹ ಒಂದು. ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಅವರು ಈ ಶೋನ ಜಡ್ಜ್ಗಳಲ್ಲಿ ಒಬ್ಬರಾಗಿದ್ದಾರೆ. ತೆಲುಗು ಇಂಡಿಯನ್ ಐಡಲ್ ಶೋನಲ್ಲಿ ಕರ್ನಾಟಕದ ಯುವಕ ದರ್ಶನ್ ನಾರಾಯಣ್ ಸ್ಪರ್ಧಿ ಆಗಿದ್ದಾರೆ. ಇತ್ತೀಚೆಗೆ ಅವರು ವೇದಿಕೆ ಮೇಲೆ ‘ಕಿರಿಕ್ ಪಾರ್ಟಿ’ ತೆಲುಗು ಸಿನಿಮಾದ ಹಾಡೊಂದನ್ನು ಹಾಡಿದರು. ದರ್ಶನ್ ಹಾಡಿದ ರೀತಿ ಜಡ್ಜ್ಗಳಿಗೆ ಬಹಳ ಇಷ್ಟವಾಯ್ತು.
ಜಡ್ಜ್ಗಳಲ್ಲಿ ಒಬ್ಬರಾಗಿರುವ ಎಸ್ ತಮನ್, ದರ್ಶನ್ ಅವರ ಹಾಡುಗಾರಿಕೆಯನ್ನು ಕೊಂಡಾಡುತ್ತಾ, ‘ನಾನು ಮುಂದಿನ ಸಿನಿಮಾ ಕನ್ನಡದಲ್ಲಿ ಮಾಡುತ್ತಿದ್ದೇನೆ. ಸಂತೋಶ್ ಆನಂದ್ರಾಮ್ ನಿರ್ದೇಶನ, ಸುದೀಪ್ ಅವರು ನಾಯಕ. ನೀವು ಆ ಸಿನಿಮಾನಲ್ಲಿ ಒಂದು ಹಾಡು ಹಾಡಬೇಕು. ವಿಜಯ್ಪ್ರಕಾಶ್ ಅವರನ್ನು ಸಹ ನಾನು ರೆಕಾರ್ಡಿಂಗ್ಗೆ ಕರೆಯುತ್ತೀನಿ’ ಎಂದು ಹೇಳಿದ್ದಾರೆ. ಇದು ಸಹಜವಾಗಿಯೇ ದರ್ಶನ್ ನಾರಾಯಣ್ಗೆ ಖುಷಿ ತಂದಿದೆ. ಸುದೀಪ್ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ತಂದಿದೆ.
View this post on Instagram
ಅಸಲಿಗೆ ಸಂತೋಶ್ ಆನಂದ್ರಾಮ್ ಜೊತೆಗೆ ಸುದೀಪ್ ಸಿನಿಮಾ ಮಾಡುತ್ತಿರುವುದು ಗುಟ್ಟಾಗಿಯೇ ಇತ್ತು. ಇದೀಗ ತೆಲುಗು ರಿಯಾಲಿಟಿ ಶೋನಲ್ಲಿ ಸುದ್ದಿ ಹೊರಬಿದ್ದಿದೆ. ‘ರಾಮಾಚಾರಿ’, ‘ರಾಜಕುಮಾರ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಸಂತೋಶ್ ಆನಂದ್ರಾಮ್ ಇದೀಗ ಸುದೀಪ್ ಜೊತೆಗೆ ಕೈ ಜೋಡಿಸಿದ್ದಾರೆ. ಸುದೀಪ್ ಹಾಗೂ ಸಂತೋಶ್ ಆನಂದ್ರಾಮ್ ಸಿನಿಮಾಕ್ಕೆ ಹೊಂಬಾಳೆ ಬಂಡವಾಳ ಹೂಡುವ ಸಾಧ್ಯತೆ ಇದೆ.
ಸುದೀಪ್ ಅವರು ಪ್ರಸ್ತುತ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ‘ಬಿಲ್ಲ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಮಾರ್ಕ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಮ್ಯಾಕ್ಸ್’ ಚಿತ್ರತಂಡವೇ ಈಗ ‘ಮಾರ್ಕ್’ ಸಿನಿಮಾನಲ್ಲಿಯೂ ಇದೆ. ಇವೆರಡರ ಬಳಿಕ ಬಹುಷಃ ಸಂತೋಶ್ ಆನಂದ್ರಾಮ್ ಜೊತೆಗಿನ ಸಿನಿಮಾಕ್ಕೆ ಚಾಲನೆ ಸಿಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Tue, 21 October 25




