
ಸಾಕಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ ‘ಗತವೈಭವ’ ಸಿನಿಮಾ (Gatha Vaibhava Movie) ನವೆಂಬರ್ 14ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹೊಸ ಹೀರೋ ದುಷ್ಯಂತ್ (Dushyanth) ಹಾಗೂ ನಟಿ ಆಶಿಕಾ ರಂಗನಾಥ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಜೋರಾಪುರ್, ಕೃಷ್ಣ ಹೆಬ್ಬಾಳೆ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ನಟ ಕಿಚ್ಚ ಸುದೀಪ್ ಅವರು ‘ಗತವೈಭವ’ ಸಿನಿಮಾದ ಟ್ರೇಲರ್ (Gatha Vaibhava Trailer) ಬಿಡುಗಡೆ ಮಾಡಿ ಶುಭ ಹಾರೈಸಿದರು.
‘ಗತವೈಭವ’ ಸಿನಿಮಾಗೆ ಜೂಡಾ ಸ್ಯಾಂಡಿ ಅವರು ಸಂಗೀತ ನೀಡಿದ್ದಾರೆ. ವಿಲೀಯಂ ಡೇವಿಡ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯ ಮೂಲಕ ದೀಪಕ್ ಮತ್ತು ಸಿಂಪಲ್ ಸುನಿ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ‘ಗತವೈಭವ’ ಸಿನಿಮಾದಲ್ಲಿ ಪ್ರೇಮಕಥೆ ಹಾಗೂ ಫ್ಯಾಂಟಸಿ ಇರಲಿದೆ. ಟ್ರೇಲರ್ನಲ್ಲಿ ಸಿನಿಮಾದ ಕಥೆ ಬಗ್ಗೆ ಸುಳಿವು ನೀಡಲಾಗಿದೆ.
ಟ್ರೇಲರ್ ಬಿಡುಗಡೆ ಬಳಿಕ ಕಿಚ್ಚ ಸುದೀಪ್ ಅವರು ಮಾತನಾಡಿದರು. ‘ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು. ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಇನ್ನೂ ಸಿಕ್ಕಿಲ್ಲ. ಒಂದಲ್ಲಾ ಒಂದು ದಿನ ಅವರ ಜೊತೆ ಕೆಲಸ ಮಾಡಬಹುದು. ನಾನು ಗತವೈಭವ ಸಿನಿಮಾಗಾಗಿ ಕಾಯುತ್ತಿದ್ದೇನೆ. ಚಿತ್ರದ ಹೀರೋ ದುಷ್ಯಂತ್ ಹಾಗೂ ನಾಯಕಿ ಆಶಿಕಾ ರಂಗನಾಥ್ ಚೆನ್ನಾಗಿ ಕಾಣುತ್ತಿದ್ದೀರಿ’ ಎಂದು ಟ್ರೇಲರ್ ನೋಡಿ ಸುದೀಪ್ ಅವರು ಮೆಚ್ಚುಗೆ ಸೂಚಿಸಿದರು.
ದುಷ್ಯಂತ್ ಅವರು ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದು ದುಷ್ಯಂತ್ ಅವರಿಗೆ ಖುಷಿ ತಂದಿದೆ. ‘8 ವರ್ಷಗಳ ಪ್ರಯತ್ನದ ಬಳಿಕ ನಾನು ನಟನಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ತ್ರಿಭಾಷಾ ನಟಿ ಆಶಿಕಾ ಜೊತೆ ನಟಿಸಿರುವುದಕ್ಕೆ ಖುಷಿ ಇದೆ’ ಎಂದು ಅವರು ಹೇಳಿದರು. ‘ಗತವೈಭವ ನೋಡಿದರೆ 4 ಸಿನಿಮಾ ನೋಡುವ ಅನುಭವ ಆಗುತ್ತದೆ. 4 ಕಥೆ, 4 ಪಾತ್ರಗಳು ಇವೆ. ಇದು ಹೊಸ ರೀತಿಯ ಸ್ಕ್ರಿಪ್ಟ್’ ಎಂದಿದ್ದಾರೆ ಆಶಿಕಾ ರಂಗನಾಥ್.
ಇದನ್ನೂ ಓದಿ: ‘ಗತವೈಭವ’ ಸುಂದರಿ ಆಶಿಕಾ ರಂಗನಾಥ್ ಚಂದದ ಫೋಟೋಗಳು
‘ಸುದೀಪ್ ಸರ್ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ಈ ಸಿನಿಮಾ ರಿಲೀಸ್ ಆದ ನಂತರ ಜನರ ಬಾಯಿ ಮಾತಿನ ಪ್ರಚಾರ ತೆಗೆದುಕೊಂಡು ಸೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಸಿನಿಮಾಗೆ ಹಾಕಿರುವ ಎಫರ್ಟ್ ದೊಡ್ಡದಿದೆ. ಆದರೆ ಸ್ಟಾರ್ ವ್ಯಾಲ್ಯೂ ಕಮ್ಮಿ ಇತ್ತು. ನಮ್ಮ ಚಿತ್ರರಂಗದ ಗಣ್ಯರಾದ ಶಿವರಾಜ್ಕುಮಾರ್ ಮತ್ತು ಸುದೀಪ್ ಸರ್ ಬೆಂಬಲ ಸಿಕ್ಕಿರುವುದರಿಂದ ಗತವೈಭವ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗಲಿದೆ’ ಎಂದು ಸಿಂಪಲ್ ಸುನಿ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.