
‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ (Kichcha Sudeep) ಅವರ ಕುಟುಂಬದಿಂದ ಮತ್ತೋರ್ವ ಹೀರೋ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹೌದು, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ (Sanchith Sanjeev) ಅವರು ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಇಂದು (ಸೆಪ್ಟೆಂಬರ್ 30) ಬಿಡುಗಡೆ ಆಗಿದೆ. ಅಕ್ಕನ ಮಗನ ಮೊದಲ ಸಿನಿಮಾದ ಟೀಸರ್ (Mango Pachcha Teaser) ಅನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ. ಆಯುಧ ಪೂಜೆಯ ದಿನವೇ ಸಂಚಿತ್ ನಟನೆಯ ಚೊಚ್ಚಲ ಸಿನಿಮಾದ ಟೀಸರ್ ರಿಲೀಸ್ ಆಗಿರುವುದು ವಿಶೇಷ.
‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಮೈಸೂರು ಭಾಗದ ಕಹಾನಿ ಇದೆ. ಈಗ ಅದ್ದೂರಿಯಾಗಿ ದಸರಾ ಹಬ್ಬ ನಡೆಯುತ್ತಿದೆ. ಈ ಸಂಭ್ರಮದ ನಡುವೆಯೇ ‘ಮ್ಯಾಂಗೋ ಪಚ್ಚ’ ಟೀಸರ್ ಮೂಲಕ ಮೈಸೂರು ಭಾಗದ ಕಥೆಯ ಝಲಕ್ ತೋರಿಸಲಾಗಿದೆ. ಈ ಮೊದಲು ಬಂದಿದ್ದ ಇಂಟ್ರಡಕ್ಷನ್ ಟೀಸರ್ನಲ್ಲಿ ಸಂಚಿತ್ ಅವರ ರೆಟ್ರೋ ಲುಕ್ ಗಮನ ಸೆಳೆದಿತ್ತು. ಈಗ ಟೀಸರ್ ಸದ್ದು ಮಾಡುತ್ತಿದೆ.
ಮೈಸೂರಿನಲ್ಲೇ ‘ಮ್ಯಾಂಗೋ ಪಚ್ಚ’ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಕ್ರೈಂ ಥ್ರಿಲ್ಲರ್ ಕಹಾನಿಯನ್ನು ಈ ಚಿತ್ರ ಹೊಂದಿದೆ. ಮಾವ ಕಿಚ್ಚ ಸುದೀಪ್ ರೀತಿಯೇ ಸಂಚಿತ್ ಕೂಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುವ ಲಕ್ಷಣಗಳು ಕಾಣುತ್ತಿವೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದು ವಿವೇಕ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.
2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ‘ಮ್ಯಾಗೋ ಪಚ್ಚ’ ಸಿನಿಮಾದಲ್ಲಿವೆ. ಈ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಬಂಡವಾಳ ಹೂಡಿವೆ. ಪ್ರಿಯಾ ಸುದೀಪ್, ಕಾರ್ತಿಕ್, ಯೋಗಿ ಜಿ. ರಾಜ್ ಅವರು ನಿರ್ಮಾಪಕರಾಗಿದ್ದಾರೆ. ಟೀಸರ್ ನೋಡಿದ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: ‘ಚಂದ್ರಪ್ರಭ ಕೆಟ್ಟದಾಗಿ ಕಾಮಿಡಿ ಮಾಡ್ತಾರೆ’; ಸುದೀಪ್ ಎದುರೇ ಹೇಳಿದ ಡಾಗ್ ಸತೀಶ್
ನಟಿ ಕಾಜಲ್ ಕುಂದರ್ ಅವರು ‘ಮ್ಯಾಂಗೋ ಪಚ್ಚ’ ಸಿನಿಮಾಗೆ ನಾಯಕಿ ಆಗಿದ್ದಾರೆ. ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಮಾಲಾಶ್ರೀ, ಬಿಗ್ ಬಾಸ್ ಖ್ಯಾತಿಯ ನಟಿ ಹಂಸ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚರಣ್ ರಾಜ್ ಅವರು ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಅವರು ಛಾಯಾಗ್ರಾಹಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.