ಹೈದರಾಬಾದ್ನಲ್ಲಿ ಶುರುವಾದ ವಿವಾದಕ್ಕೆ ವಿಜಯವಾಡನಲ್ಲಿ ಅಂತ್ಯ ಹಾಡಿದ ರಿಷಬ್ ಶೆಟ್ಟಿ
Rishab Shetty: ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ರಿಷಬ್ ಶೆಟ್ಟಿ ವಿರುದ್ಧ ತೆಲುಗು ಜನ ಅಸಮಾಧಾನ ವ್ಯಕ್ತಪಡಿಸಿದ್ದರು. ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ನಲ್ಲಿ ರಿಷಬ್ ಕನ್ನಡದಲ್ಲಿ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ನಿನ್ನೆ ವಿಜಯವಾಡನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಾದವನ್ನು ತಣ್ಣಗಾಗಿಸಿದ್ದಾರೆ ರಿಷಬ್ ಶೆಟ್ಟಿ.

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಾಳೆ (ಅಕ್ಟೋಬರ್ 02) ದೇಶದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀಮಿಯರ್ ಶೋಗಳು ಇಂದೇ ಹಲವೆಡೆ ಪ್ರದರ್ಶನಗೊಳ್ಳಲಿವೆ. ಸಿನಿಮಾದ ಪ್ರಚಾರವನ್ನು ರಿಷಬ್ ಹಾಗೂ ತಂಡ ಜೋರಾಗಿಯೇ ಮಾಡಿದೆ. ಇತ್ತೀಚೆಗಷ್ಟೆ ಹೈದರಾಬಾದ್ನಲ್ಲಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜೂ ಎನ್ಟಿಆರ್ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದರು. ಆದರೆ ಇದನ್ನು ತೆಲುಗು ಜನ ವಿರೋಧಿಸಿದ್ದರು.
2022 ರಲ್ಲಿ ಬಿಡುಗಡೆ ಆದ ‘ಕಾಂತಾರ’ ಸಿನಿಮಾದ ಪ್ರಚಾರಕ್ಕೆ ಬಂದಾಗ ರಿಷಬ್ ಶೆಟ್ಟಿ ತೆಲುಗಿನಲ್ಲಿ ಮಾತನಾಡಿದ್ದರು ಆದರೆ ಈಗ ಹೈದರಾಬಾದ್ಗೆ ಬಂದು ಕನ್ನಡದಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು. ಇದೇ ಕಾರಣಕ್ಕೆ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ಕೊಡಬಾರದು, ಸಿನಿಮಾದ ಬಿಡುಗಡೆಗೆ, ಪ್ರೀಮಿಯರ್ ಶೋಗೆ ಅವಕಾಶ ಕೊಡಬಾರದು ಎಂದು ಆಕ್ರೋಶ ಹೊರಹಾಕಿದ್ದರು.
#RishabShetty is on a job to impress Telugu Audiences amidst the controversy.#KantaraChapter1pic.twitter.com/CkkLM38qjT
— Telugu Bit (@Telugubit) September 30, 2025
ಆದರೆ ಈಗ ಭಾಷೆಯ ವಿವಾದಕ್ಕೆ ರಿಷಬ್ ಶೆಟ್ಟಿ ಅಂತ್ಯ ಹಾಡಿದ್ದಾರೆ. ನಿನ್ನೆ (ಸೆಪ್ಟೆಂಬರ್ 30) ವಿಜಯವಾಡನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಇತ್ತು. ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ತೆಲುಗು ಮಾತನಾಡಿದರು. ಮಾತ್ರವಲ್ಲದೆ, ಭಾಷಾ ವಿವಾದಕ್ಕೆ ಅಂತ್ಯ ಸಹ ಹಾಡಿದರು. ಹಾಗೆಂದು ಕನ್ನಡ ಭಾಷೆಯನ್ನು ಮರೆಯಲಿಲ್ಲ, ವಿಜಯವಾಡನಲ್ಲಿಯೂ ಸಹ ಕನ್ನಡ ಭಾಷೆಯ ಬಗ್ಗೆ ಭಾಷೆಯ ಮೇಲಿರುವ ತಮ್ಮ ಅಭಿಮಾನದ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ತೆಲುಗು ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದ ರಿಷಬ್ ಶೆಟ್ಟಿ
ತೆಲುಗಿನಲ್ಲೇ ಮಾತು ಆರಂಭಿಸಿದ ರಿಷಬ್ ಶೆಟ್ಟಿ, ‘ಮೂರು ವರ್ಷಗಳ ಹಿಂದೆ ಇದೇ ದಿನ ನಮ್ಮ ‘ಕಾಂತಾರ’ ಸಿನಿಮಾ ಬಿಡುಗಡೆ ಆಗಿತ್ತು, ಆ ಸಿನಿಮಾಕ್ಕೆ ಬಹಳ ಪ್ರೀತಿ, ಆಶೀರ್ವಾದ ಕೊಟ್ಟಿದ್ದೀರಿ, ಈಗ ಮತ್ತೆ ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಆಗುತ್ತಿದೆ. ಆ ಸಿನಿಮಾಕ್ಕೆ ನಿಮ್ಮ ಪ್ರೀತಿ, ಆಶೀರ್ವಾದ ಬೇಕಿದೆ’ ಎಂದು ಅರೆ-ಬರೆ ತೆಲುಗಿನಲ್ಲೇ ಹೇಳಿದರು. ದಸರಾ ಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದರು.
ಬಳಿಕ, ‘ಜೂ ಎನ್ಟಿಆರ್, ಡಾರ್ಲಿಂಗ್ ಪ್ರಭಾಸ್, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮತ್ತು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬಳಿಕ ಕನ್ನಡದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ನಾನು ಅಪ್ಪಟ ಕನ್ನಡಿಗ, ಕನ್ನಡ ಭಾಷೆಯ ಅಭಿಮಾನಿ, ಹಾಗಿದ್ದಾಗ ನಾನು ಸಹೋದರ ಭಾಷೆಯನ್ನು ಅಷ್ಟೇ ಗೌರವದಿಂದ ಕಾಣುತ್ತೇನೆ. ಕನ್ನಡ ಮತ್ತು ತೆಲುಗು ಪರಸ್ಪರ ಸಹೋದರ ಭಾಷೆಗಳು. ಒಗ್ಗಟ್ಟಿನ ಭಾಷೆಗಳು’ ಎಂದರು.
ಮಾತು ಮುಂದುವರೆಸಿ, ‘ನನ್ನ ‘ಜೈ ಹನುಮಾನ್’ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಇದಕ್ಕಿಂತಲೂ ಉತ್ತಮವಾಗಿ ತೆಲುಗು ಮಾತನಾಡುವುದನ್ನು ಕಲಿತಿರುತ್ತೇನೆ’ ಎಂಬ ಭರವಸೆಯನ್ನು ಸಹ ರಿಷಬ್ ಶೆಟ್ಟಿ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 am, Wed, 1 October 25




