ಕಿಚ್ಚ ಸುದೀಪ್ ಅವರು ಸದ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಅವರು ಪ್ರಚಾರ ಮಾಡುತ್ತಿದ್ದಾರೆ. ಇಂದು (ಏಪ್ರಿಲ್ 28) ಹುಬ್ಬಳ್ಳಿ, ಕಲಘಟಗಿ, ಧಾರವಾಡ ಹಾಗೂ ಗದಗದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ. ಪ್ರಚಾರಕ್ಕೆ ತೆರಳುವುದಕ್ಕೂ ಮೊದಲು ಟಿವಿ9 ಕನ್ನಡದ ಜೊತೆ ಸುದಿಪ್ (Sudeep) ಮಾತನಾಡಿದ್ದಾರೆ. ರಮ್ಯಾ ಫ್ರೆಂಡ್ಶಿಪ್ ಬಗ್ಗೆ, ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಅವರು ಮಾತನಾಡಿದ್ದಾರೆ.
ಇತ್ತೀಚೆಗೆ ರಮ್ಯಾ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಸುದೀಪ್ ಅವರು ರಾಜಕೀಯಕ್ಕೆ ಬರಬೇಕು ಎಂದು ಹೇಳಿದ್ದರು. ಆ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ‘ರಮ್ಯಾ ಅವರು ಕಾಂಗ್ರೆಸ್ನವರು. ಆದರೆ, ಫ್ರೆಂಡ್ಶಿಪ್ನಲ್ಲಿ ಎಂದಿಗೂ ಭೇದ-ಭಾವ ಬಂದಿಲ್ಲ. ಅವರು ಒಳ್ಳೆಯ ಸ್ನೇಹಿತೆ. ರಮ್ಯಾ ಯಾವಾಗ ಸಿಕ್ಕಾಗಲೂ ರಾಜಕೀಯ ಆ್ಯಂಗಲ್ನಿಂದ ನನಗೆ ಸ್ಫೂರ್ತಿ ನೀಡುತ್ತಾರೆ’ ಎಂದಿದ್ದಾರೆ ಸುದೀಪ್.
ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುದೀಪ್, ‘ಗೀತಾ ಅಕ್ಕಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಗೀತಾ ಅಕ್ಕ ಕೈಗೊಂಡಿರುವ ನಿರ್ಧಾರದ ಹಿಂದೆ ಒಳ್ಳೆಯ ಚಿಂತನೆ ಇರುತ್ತೆ. ಗೀತಕ್ಕಗೆ ಒಳ್ಳೆಯದಾಗಲಿ’ ಎಂದು ಹೇಳಿದ್ದಾರೆ. ಶಿವಣ್ಣ-ಗೀತಾ ದಂಪತಿ ಜೊತೆ ಸುದೀಪ್ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.
‘ಸಿನಿಮಾ, ರಾಜಕೀಯ ಪ್ರಚಾರದ ನಡುವೆ ವ್ಯತ್ಯಾಸ ಇಲ್ಲ. ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದೇವೆ. ಜನರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ. ಸದ್ಯ ರಾಜಕೀಯದ ಬಗ್ಗೆ ನಾನು ಮಾತಾಡುವುದಿಲ್ಲ. ನನಗೆ ಸಿನಿಮಾದಲ್ಲಿ ಮಾಡಲು ಸಾಕಷ್ಟು ಕೆಲಸಗಳು ಇವೆ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ರಮ್ಯಾ ಮೊದಲ ಸಿನಿಮಾ ಅಭಿಗೆ 20 ವರ್ಷ, ಸಿನಿಮಾಕ್ಕೆ ಸಂಬಂಧಿಸಿದ ಅಪರೂಪದ ಚಿತ್ರಗಳ ಹಂಚಿಕೊಂಡ ನಟಿ
‘ಮನೆಯಲ್ಲಿ ಇದ್ದಾಗ ಬರೀ ಸಿನಿಮಾ ಬಗ್ಗೆ ಮಾತ್ರ ಮಾಹಿತಿ ಸಿಗುತ್ತಿತ್ತು. ಜನರ ಮನಸ್ಸಿನಲ್ಲಿ ನಮಗೆ ಯಾವ ಸ್ಥಾನ ಇದೆ ಎಂಬುದು ಹೊರಗೆ ಬಂದಾಗ್ಲೇ ಗೊತ್ತಾಗೋದು. ರಸ್ತೆಗೆ ಇಳಿದಾಗಲೇ ಅರ್ಹತೆ, ಯೋಗ್ಯತೆ ಗೊತ್ತಾಗೋದು. ನಮಗೆ ಸಿಗುತ್ತಿರುವ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಅಭಿಮಾನ ನಮ್ಮ ಆಸ್ತಿ. ಅದೇ ನಮ್ಮನ್ನು ಎಬ್ಬಿಸೋದು. ನಾನು ಬಸವರಾಜ ಬೊಮ್ಮಾಯಿ ಅವರು ಹೇಳಿದ ರೀತಿ ಪ್ರಚಾರದಲ್ಲಿ ಭಾಗಿ ಆಗುತ್ತೇನೆ. ಪಕ್ಷ ಗೆದ್ದಲ್ಲಿ ನಾನೂ ಜನರ ಸಮಸ್ಯೆ ಬಗ್ಗೆ ಹೇಳಬೇಕು ಎಂದುಕೊಂಡಿದ್ದೇನೆ’ ಎಂಬುದು ಸುದೀಪ್ ಮಾತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ