ಕ್ರಿಕೆಟ್ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಅಪಾರವಾದ ಆಸಕ್ತಿ ಇದೆ. 1983ರಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ‘83’ (83 Movie) ಸಿನಿಮಾ ಸಿದ್ಧಗೊಂಡಿದೆ. ಅದನ್ನು ಕರ್ನಾಟಕದಲ್ಲಿ ಸುದೀಪ್ ಪ್ರಸ್ತುತಪಡಿಸುತ್ತಿದ್ದಾರೆ. ಅಲ್ಲದೇ, ಈ ಸಿನಿಮಾ ಬಗ್ಗೆ ತಮಗೆ ಎಷ್ಟು ಕಾತರ ಇದೆ ಎಂಬುದನ್ನು ಅವರು ವಿವರಿಸಿದ್ದಾರೆ. ಆ ವಿಡಿಯೋವನ್ನು ರಣವೀರ್ ಸಿಂಗ್ (Ranveer Singh) ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ‘ಹೆಸರಾಂತ ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್ ಅವರು ಭಾರತದ ಮಹಾನ್ ಗೆಲುವನ್ನು ಬೆಳ್ಳಿಪರದೆ ಮೇಲೆ ನೋಡಲು ಕಾತರಾಗಿದ್ದಾರೆ’ ಎಂದು ಆ ವಿಡಿಯೋಗೆ ರಣವೀರ್ ಸಿಂಗ್ ಅವರು ಕ್ಯಾಪ್ಷನ್ ನೀಡಿದ್ದಾರೆ. ಹಿಂದಿಯಲ್ಲಿ ತಯಾರಾಗಿರುವ ‘83’ ಸಿನಿಮಾ ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗೆ ಡಬ್ ಆಗಿ ತೆರೆಕಾಣುತ್ತಿದೆ. ಡಿ.24ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗುತ್ತಿದೆ.
‘1983ರ ವಿಶ್ವಕಪ್ ಬಗ್ಗೆ ಮಾತನಾಡಲು ಹಲವು ವಿಚಾರಗಳಿವೆ. ಅದರಲ್ಲೊಂದು ಕಥೆ ಇದೆ ಅಂತ ಒಂದು ತಂಡ ನಂಬಿದೆ. ಆ ಕಥೆ ಮಹತ್ವದ್ದಾಗಲಿದೆ ಎಂಬ ನಂಬಿಕೆ ಆ ತಂಡಕ್ಕೆ ಇದೆ. ಆ ನಂಬಿಕೆಯೇ ನನಗೆ ಒಂದು ಅದ್ಭುತ ಕಥೆಯಂತೆ ಕಾಣಿಸುತ್ತಿದೆ. ಒಬ್ಬ ಕ್ರಿಕೆಟ್ ಪ್ರೇಮಿಯಾಗಿ, ಭಾರತೀಯನಾಗಿ ಥಿಯೇಟರ್ನಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಲು ಬಯಸುತ್ತೇನೆ. ಇಂಥ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಕಬೀರ್ ಖಾನ್ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತ ವಿಶ್ವಕಪ್ ಗೆದ್ದಾಗ ಎಷ್ಟು ಖುಷಿ ಆಗಿತ್ತೋ ಅದೇ ರೀತಿ ಈ ಸಿನಿಮಾ ತೆರೆಕಾಣುತ್ತಿರುವುದಕ್ಕೆ ಖುಷಿ ಆಗುತ್ತಿದೆ’ ಎಂದು ಸುದೀಪ್ ಹೇಳಿದ್ದಾರೆ.
Renowned actor, director & producer, @KicchaSudeep , expresses his anticipation of witnessing India’s greatest victory on the big screen!#6DaysTo83
83 RELEASING IN CINEMAS ON 24TH DEC, 2021, in Hindi, Tamil, Telugu, Kannada and Malayalam. Also in 3D.#ThisIs83 pic.twitter.com/kK6OtprwXn
— Ranveer Singh (@RanveerOfficial) December 18, 2021
ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ಮೊದಲ ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ರಿಲೀಸ್ಗೆ ಸಿದ್ಧವಾಗಿತ್ತು. ಆದರೆ ಲಾಕ್ಡೌನ್ ಜಾರಿಯಾದ ಬಳಿಕ ಬಿಡುಗಡೆ ದಿನಾಂಕ ಮುಂದೂಡಿಕೊಳ್ಳುವುದು ಅನಿವಾರ್ಯ ಆಗಿತ್ತು. ರಣವೀರ್ ಸಿಂಗ್ ನಟನೆಯ ಈ ಚಿತ್ರ ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಡಿ.24ರಂದು ತೆರೆ ಕಾಣಲಿದೆ. ಕಿಚ್ಚ ಸುದೀಪ್ ಅವರು ಕೂಡ ಈಗ ಈ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಅಂದರೆ, ಕನ್ನಡದಲ್ಲಿ ‘83’ ಸಿನಿಮಾವನ್ನು ಸುದೀಪ್ ಅರ್ಪಿಸುತ್ತಿದ್ದಾರೆ.
ಕಪಿಲ್ ದೇವ್ ಪಾತ್ರದಲ್ಲಿ ನಟಿಸಲು ರಣವೀರ್ ಸಿಂಗ್ ತುಂಬ ಶ್ರಮಪಟ್ಟಿದ್ದಾರೆ. ಟೀಸರ್ ಮತ್ತು ಪೋಸ್ಟರ್ಗಳಲ್ಲಿ ಅವರ ಲುಕ್ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೇನ್ಮೆಂಟ್ ಸಂಸ್ಥೆಗಳು ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.
ಇದನ್ನೂ ಓದಿ:
ಜೆನಿಲಿಯಾ ರಿತೇಶ್ ದಂಪತಿಗೆ ಸುದೀಪ್ ಪ್ರೀತಿಯ ವಿಶ್; ಹೊಸ ಕಾರ್ಯಕ್ಕೆ ಕಿಚ್ಚನ ಪ್ರೋತ್ಸಾಹ
ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್