ಭಕ್ತಿ ಪ್ರಧಾನ ಸಿನಿಮಾಗಳ ಸಾಲಿಗೆ ‘ಸಿಂಹರೂಪಿಣಿ’ ಕೂಡ ಸೇರ್ಪಡೆ ಆಗುತ್ತಿದೆ. ಈ ಸಿನಿಮಾಗೆ ಕಿನ್ನಾಳ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಡೈರೆಕ್ಷನ್ ಜೊತೆಗೆ ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಕೂಡ ಅವರೇ ಬರೆದಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ಸಿನಿಮಾದ ಕಥಾಹಂದರಕ್ಕೆ ಪೂರಕವಾಗಿ ವೇದಿಕೆಯಲ್ಲಿ ಮಾರಮ್ಮನ ಪ್ರತಿಷ್ಠಾಪನೆ ಮಾಡುವ ಮೂಲಕ ಟೀಸರ್ ಬಿಡುಗಡೆಗೊಳಿಸಿದ್ದು ವಿಶೇಷ. ಕೆ.ಎಂ. ನಂಜುಂಡೇಶ್ವರ ಅವರು ‘ಸಿಂಹರೂಪಿಣಿ’ ಚಿತ್ರಕ್ಕೆ ಕಥೆ ಬರೆದಿದಾರೆ. ‘ಶ್ರೀ ಚಕ್ರ ಫಿಲ್ಮ್ಸ್’ ಮೂಲಕ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್ನಲ್ಲಿ ಕೋಣ ಇದೆ. ಅದರ ಬಗ್ಗೆ ಕೌತುಕ ಮೂಡಿದೆ.
‘ಕೆಜಿಎಫ್ 2’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ‘ಸಿಂಹರೂಪಿಣಿ’ ಟೀಸರ್ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದರು. ‘ದೇವಿಯ ಮೇಲೆ ಚಿತ್ರತಂಡಕ್ಕೆ ಇರುವ ಭಕ್ತಿ ಹಾಗೂ ತಂತ್ರಜ್ಞರ ಕೆಲಸಗಳು ಈ ಟೀಸರ್ನಲ್ಲಿ ಕಾಣಿಸುತ್ತಿದೆ. ನನ್ನ ಹಾಗೂ ಕಿನ್ನಾಳ ರಾಜ್ ಅವರ ಪಯಣ ಸುಮಾರು 15 ವರ್ಷಗಳಷ್ಟು ಹಳೆಯದು. ಅವರ ನಿರ್ದೇಶನದ ಸಿನಿಮಾಗೆ ನಾನು ಸಂಗೀತ ನೀಡಬೇಕು ಅಂತ ಆ ಸಮಯದಲ್ಲಿ ಮಾತನಾಡಿಕೊಂಡಿದ್ದೆವು. ಒಳಿಕ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ವಿ’ ಎಂದು ಒಡನಾಟವನ್ನು ರವಿ ಬಸ್ರೂರು ನೆನಪಿಸಿಕೊಂಡರು.
ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್ ಕುಮಾರ್ ಅವರು ‘ಸಿಂಹರೂಪಿಣಿ’ ಪೋಸ್ಟರ್ ಅನಾವರಣ ಮಾಡಿದರು. ‘ನಿರ್ದೇಶಕರು ನಮ್ಮ ಪಕ್ಕದ ಊರಿನವರು. ಆರಂಭದಿಂದಲೂ ಅವರ ಶ್ರಮವನ್ನು ನೋಡುತ್ತಾ ಬಂದಿದ್ದೇನೆ. ಸಿನಿಮಾದಲ್ಲಿ ನಮ್ಮ ಭಾಗದ ಸಂಸ್ಕೃತಿ ತೋರಿಸಲಾಗಿದೆ. ಅಂಥ ಪ್ರಯತ್ನಗಳು ನಡೆದಾಗಲೇ ಮಾಹಿತಿಗಳು ಎಲ್ಲರಿಗೂ ತಿಳಿಯುತ್ತವೆ. ಈ ಸಿನಿಮಾದ ಸಂಗೀತ ಚೆನ್ನಾಗಿದೆ. ಕಾಟೇರದ ಕೋಣ ಇಲ್ಲಿಗೆ ಯಾಕೆ ಬಂತು ಅಂತ ನಾನು ಕೇಳಿದೆ. ಸಿನಿಮಾ ನೋಡಿದರೆ ಗೊತ್ತಾಗತ್ತೆ ಅಂತ ನಿರ್ದೇಶಕರು ಹೇಳ್ತಾರೆ. ಅವರ ಪ್ರಯತ್ನಕ್ಕೆ ಶುಭವಾಗಲಿ’ ಎಂದಿದ್ದಾರೆ ಜಡೇಶ್.
ಇದನ್ನೂ ಓದಿ: 2024ರ ಜನಪ್ರಿಯ, ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್; ಕನ್ನಡದ ಒಂದು ಚಿತ್ರವೂ ಇಲ್ಲ
ಅಂಕಿತಾ ಗೌಡ, ಯಶಸ್ವಿನಿ ಸಿದ್ದೇಗೌಡ, ಕುಮಾರಿ ಖುಷಿ ಬಸ್ರೂರು, ಹರೀಶ್ ರಾಯ್, ದಿನೇಶ್ ಮಂಗಳೂರು, ಯಶ್ ಶೆಟ್ಟಿ, ಪುನೀತ್ ರುದ್ರನಾಗ್, ನೀನಾಸಂ ಅಶ್ವತ್ಥ್, ಭಜರಂಗಿ ಪ್ರಸನ್ನ, ಸುಮನ್, ತಬಲ ನಾಣಿ, ದಿವ್ಯಾ ಆಲೂರು, ವಿಜಯ್ ಚೆಂಡೂರು, ಮನಮೋಹನ್‌ರೈ, ಆರವ್ ಲೋಹಿತ್, ಮಧುಶ್ರೀ, ಪಿಳ್ಳಣ್ಣ, ವೇದಾ ಹಾಸನ್, ಸುನಂದಾ ಕಲ್ಬುರ್ಗಿ, ಕೆ. ಬಾಲಸುಬ್ರಮಣ್ಯಂ, ಶಶಿಕುಮಾರ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
‘ರಾಕ್ಷಸನ ಸಂಹಾರ ಮಾಡಲು ಪಾರ್ವತಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿಯದು. ತಾಯಿಯ ಮಹಿಮೆ, ಪವಾಡಗಳನ್ನು ಈಗಿನ ಟ್ರೆಂಡ್‌ಗೆ ತಕ್ಕಂತೆ ಈ ಸಿನಿಮಾದಲ್ಲಿ ತೋರಿಸಿದ್ದೇವೆ. 132 ಕಲಾವಿದರು ಇದರಲ್ಲಿ ನಟಿಸಿದ್ದಾರೆ. 15 ನಿಮಿಷಗಳ ಗ್ರಾಫಿಕ್ಸ್ ಇದೆ. ಇದರಲ್ಲಿ ಕೋಣ ಯಾಕೆ ಇದೆ ಎಂಬುದು ಸಿನಿಮಾ ನೋಡಿದ ಬಳಿಕ ತಿಳಿಯುತ್ತೆ’ ಎಂದು ನಿರ್ದೇಶಕ ಕಿನ್ನಾಳ ರಾಜ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.