ಸಖತ್ ಭಯಾನಕ ಆಗಿರುವ ‘ಹಗ್ಗ’ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಆರ್. ಚಂದ್ರು
‘ಹಗ್ಗ’ ಸಿನಿಮಾದ ನಾಯಕ ನಟ ವೇಣು ಅವರಿಗೆ ಇದು ಮೊದಲ ಚಿತ್ರ. ಅವರ ಜೊತೆ ಅನು ಪ್ರಭಾಕರ್, ಅವಿನಾಶ್, ಹರ್ಷಿಕಾ ಪೂಣಚ್ಚ, ತಬಲನಾಣಿ, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಮೈಕೋ ಮಂಜು, ಪ್ರಿಯ ಹೆಗ್ಡೆ, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದ ಕಲಾವಿದರು ನಟಿಸಿದ್ದಾರೆ. ಹಾರರ್ ಕಥಾಹಂದರದ ‘ಹಗ್ಗ’ ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ.
ಹಾರರ್ ಸಿನಿಮಾ ಇಷ್ಟಪಡುವ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ರೀತಿಯಲ್ಲಿ ‘ಹಗ್ಗ’ ಸಿನಿಮಾದ ಟೀಸರ್ ಮೂಡಿಬಂದಿದೆ. ಇತ್ತೀಚೆಗೆ ಈ ಟೀಸರ್ ಬಿಡುಗಡೆ ಮಾಡಲಾಯಿತು. ‘ವಸಂತ ಸಿನಿ ಕ್ರಿಯೇಷನ್ಸ್’ ಮೂಲಕ ರಾಜ್ ಭಾರದ್ವಾಜ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅವಿನಾಶ್ ಎನ್. ಅವರು ನಿರ್ದೇಶನ ಮಾಡಿದ್ದಾರೆ. ‘ಹಗ್ಗ’ ಸಿನಿಮಾದ ಪಾತ್ರವರ್ಗದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ ಅವರು ಇದ್ದಾರೆ. ‘ಕಬ್ಜ’ ನಿರ್ದೇಶಕ ಆರ್. ಚಂದ್ರು ಅವರು ಈ ಟೀಸರ್ ಅನಾವರಣ ಮಾಡಿದ್ದಾರೆ. ಅಲ್ಲದೇ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕೆ. ಮಂಜು, ದಯಾಳ್ ಮುಂತಾದವರು ಕೂಡ ‘ಹಗ್ಗ’ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಟೀಸರ್ ಬಿಡುಗಡೆಯ ಬಳಿಕ ನಿರ್ದೇಶಕ ಅವಿನಾಶ್ ಅವರು ಮಾತನಾಡಿದರು. ‘ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ನಾನು. ಸಿನಿಮಾ ನಿರ್ದೇಶನ ಎಂಬುದು ನನ್ನ ಕನಸು. ಅದು ಹಗ್ಗ ಸಿನಿಮಾದ ಮೂಲಕ ಈಡೇರಿದೆ. ಈ ಸಿನಿಮಾದಲ್ಲಿ ವೇಣು, ಅನು ಪ್ರಭಾಕರ್, ಹರ್ಷಿಕಾ ಪೂಣಚ್ಚ ಅವರಿಗೆ ಪ್ರಮುಖ ಪಾತ್ರವಿದೆ. ನಮ್ಮ ಸಿನಿಮಾದಲ್ಲಿ ಹಗ್ಗವೇ ಹೀರೋ’ ಎನ್ನುವ ಮೂಲಕ ನಿರ್ದೇಶಕರು ಕೌತುಕ ಮೂಡಿಸಿದ್ದಾರೆ.
ಇದನ್ನೂ ಓದಿ: ತಾಯಿಯಾಗುತ್ತಿರುವ ಹರ್ಷಿಕಾ, ಭಿನ್ನ ಫೋಟೊಶೂಟ್ ಮೂಲಕ ಗಮನ ಸೆಳೆದ ಜೋಡಿ
ಇದು ಹಾರರ್ ಸಿನಿಮಾ ಆಗಿದ್ದರೂ ಕೂಡ ಈ ಚಿತ್ರದಲ್ಲೊಂದು ಮೆಸೇಜ್ ಇದೆ ಎಂದು ನಿರ್ದೇಶಕ ಅವಿನಾಶ್ ಹೇಳಿದ್ದಾರೆ. ನಿರ್ಮಾಪಕ ರಾಜ್ ಭಾರದ್ವಾಜ್ ಮಾತನಾಡಿ, ‘ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ಟೀಸರ್ ರಿಲೀಸ್ ಮಾಡಲು ಬಂದ ಎಲ್ಲ ಗಣ್ಯರಿಗೆ ಧನ್ಯವಾದಗಳು. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ ನಮ್ಮ ಸಿನಿಮಾ ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಟೀಸರ್ ಬಿಡುಗಡೆ ಆಗಿದೆ. ಆಗಸ್ಟ್ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಪ್ರಯತ್ನ ಜಾರಿಯಲ್ಲಿದೆ’ ಎಂದರು.
ನಟಿ ಅನು ಪ್ರಭಾಕರ್ ಮಾತನಾಡಿ, ‘ಅವಿನಾಶ್ ಅವರು ಸಿನಿಮಾದ ಬಗ್ಗೆ ಹೇಳಿದಾಗ ನನ್ನ ಪಾತ್ರ ನನಗೆ ತುಂಬ ಇಷ್ಟ ಆಯಿತು. ನನ್ನನ್ನು ಸೂಪರ್ ಹೀರೋ ರೀತಿ ತೋರಿಸಿದ್ದಾರೆ. ಪಾತ್ರದ ಕುರಿತು ನಾನು ಈಗ ಹೆಚ್ಚು ಹೇಳುವಂತಿಲ್ಲ. ಈ ಪಾತ್ರ ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದ’ ಎಂದಿದ್ದಾರೆ.
‘ಹಗ್ಗ’ ಸಿನಿಮಾದ ಟೀಸರ್:
ಹರ್ಷಿಕಾ ಪೂಣಚ್ಚ ಅವರು ಈ ಸಿನಿಮಾದಲ್ಲಿ ಪತ್ರಕರ್ತೆಯ ಪಾತ್ರ ಮಾಡಿದ್ದಾರೆ. ‘ಯಾವುದೋ ಒಂದು ವಿಷಯದ ಅನ್ವೇಷಣೆ ಮಾಡಲು ಹಳ್ಳಿಗೆ ಹೋದಾಗ ನಡೆಯುವ ಘಟನೆಗಳು ಇಲ್ಲಿ ಹೈಲೈಟ್’ ಎಂದಿದ್ದಾರೆ ಹರ್ಷಿಕಾ. ಮ್ಯಾಥ್ಯೂಸ್ ಮನು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಟೆಕ್ ಸೂರಿ ಅವರ ಛಾಯಾಗ್ರಹಣ, ಎನ್.ಎಂ. ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ. ಮನೋಹರ್ ಎಸ್. ಪಿ. ಸಂಭಾಷಣೆ ಅವರು ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.