ಕೊಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಬಗ್ಗೆ ದರ್ಶನ್ ವಿರುದ್ಧ ಸಿಕ್ಕಿದೆ ಪ್ರಮುಖ ಸಾಕ್ಷಿ
ರೇಣುಕಾ ಸ್ವಾಮಿ ಕೊಲೆ ಕೇಸ್ ಕಳೆದ ಒಂದೂವರೆ ತಿಂಗಳಿಂದ ಸದ್ದು ಮಾಡುತ್ತಲೇ ಇದೆ. ರೇಣುಕಾ ಸ್ವಾಮಿ ಹತ್ಯೆಯಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಪ್ರಮುಖ ಆರೋಪಿಗಳಾಗಿದ್ದಾರೆ. ಕೊಲೆ ಕೇಸ್ನಲ್ಲಿ ಅರೆಸ್ಟ್ ಆದ ಎಲ್ಲರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಮಧ್ಯೆ ದರ್ಶನ್ ವಿರುದ್ಧ ಪ್ರಮಖ ಸಾಕ್ಷಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು A2 ಆರೋಪಿ ಆದರೆ, ಪವಿತ್ರಾ ಗೌಡ A1 ಆರೋಪಿ ಎನಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ 15ಕ್ಕೂ ಅಧಿಕ ಮಂದಿ ಅರೆಸ್ಟ್ ಆಗಿದ್ದಾರೆ. ಈಗ ಈ ಪ್ರಕರಣದಲ್ಲಿ ದರ್ಶನ್ ಅವರ ವಿರುದ್ಧ ಪೊಲೀಸರಿಗೆ ಪ್ರಮುಖ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಕೊಲೆ ಬಳಿಕ ದರ್ಶನ್ 83 ಲಕ್ಷಕ್ಕೂ ಹೆಚ್ಚಿನ ನಗದು ಪಡೆದಿದ್ದರು ಎನ್ನಲಾಗಿದೆ. ಸದ್ಯ ತನಿಖಾ ತಂಡವು ದರ್ಶನ್ ವಿರುದ್ಧ ಮಾಹಿತಿ ಕಲೆ ಹಾಕಿದೆ. ಹಣ ಪಡೆದ ಬಗ್ಗೆ ಇಬ್ಬರಿಂದ ತನಿಖಾ ತಂಡ ಮಾಹಿತಿ ಪಡೆದುಕೊಂಡಿದೆ. ಇದು ಚಾರ್ಜ್ಶೀಟ್ನಲ್ಲಿ ಪ್ರಮುಖ ಅಂಶ ಆಗುವ ಸಾಧ್ಯತೆ ಇದೆ. ಈ ರೀತಿಯ ಅಂಶಗಳಿಂದ ದರ್ಶನ್ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.
ದರ್ಶನ್ ಮೋಹನ್ ರಾಜ್ ಮತ್ತು ಪ್ರಕಾಶ್ ಎಂಬುವವರಿಂದ ಹಣ ಪಡೆದಿದ್ದರು. ಯಾವಾಗ ಹಣ ಕೇಳಿದ್ದರು, ಹಣವನ್ನು ಎಲ್ಲಿಂದ ತಂದು ದರ್ಶನ್ ನೀಡಲಾಗಿದೆ ಎಂಬ ಬಗ್ಗೆ ಇಬ್ಬರೂ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕವೇ ದರ್ಶನ್ ನಗದು ರೂಪದಲ್ಲಿ ಹಣ ಪಡೆದಿದ್ದಾರೆ. ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಲು ಹೊರಟವರಿಗೆ ನೀಡಬೇಕಿದ್ದ ಹಣ ಇದು ಎಂದು ತಿಳಿದು ಬಂದಿದೆ. ಈ ಮೂಲಕ ಕೊಲೆ ಮುಚ್ಚಿ ಹಾಕಲು ದರ್ಶನ್ ಪ್ರಯತ್ನಿಸಿದ್ದು ಇಲ್ಲಿ ಸ್ಪಷ್ಟವಾಗಿದೆ.
ಇದನ್ನೂ ಓದಿ: ಪವಿತ್ರಾ ಆಪ್ತರಿಂದಲೇ ನಡೆಯಿತಾ ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ?
ಕೊಲೆ ಮಾಡುವುದು ಎಷ್ಟು ಅಪರಾಧವೋ ಸಾಕ್ಷಿ ನಾಶ ಮಾಡುವುದು, ಕೊಲೆಯನ್ನೇ ಮುಚ್ಚಿ ಹಾಕುವುದು ಕೂಡ ಅಪರಾಧ. ಹೀಗಾಗಿ, ದರ್ಶನ್ ಅಂಥಹ ಕೃತ್ಯದಲ್ಲಿ ಭಾಗಿ ಆಗಿದ್ದಾರೆ. ಒಂದೊಮ್ಮೆ ಅವರು ಕೊಲೆಯನ್ನೇ ಮಾಡಿಲ್ಲ ಎಂದಾದರೆ ಅದನ್ನು ಮುಚ್ಚಿ ಹಾಕಲು ಏಕೆ ಪ್ರಯತ್ನಿಸುತ್ತಿದ್ದರು ಎಂಬ ಪ್ರಶ್ನೆಯೂ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.