ಮನೆ ಊಟ, ಹಾಸಿಗೆಗಾಗಿ ದರ್ಶನ್ ರಿಟ್ ಅರ್ಜಿ; ಜುಲೈ 29ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ರೇಣುಕಾ ಸ್ವಾಮಿ ಮರ್ಡರ್​ ಆರೋಪದಲ್ಲಿ ನಟ ದರ್ಶನ್ ಹಾಗೂ ಸಹಚರರು ಜೈಲುಪಾಲಾಗಿದ್ದಾರೆ. ಇಂದು (ಜುಲೈ 19) ಹೈಕೋರ್ಟ್​ನಲ್ಲಿ ದರ್ಶನ್ ಅವರ ರಿಟ್ ಅರ್ಜಿ ವಿಚಾರಣೆ ನಡೆದಿದೆ. ‘5 ಸಾವಿರ ಕೈದಿಗಳು ದಿನವೂ ಜೈಲಿನಲ್ಲಿ ಊಟ ಮಾಡುತ್ತಿದ್ದಾರೆ. ಯಾರಿಗೂ ಫುಡ್ ಪಾಯಿಸನಿಂಗ್ ಆಗಿಲ್ಲ. ದರ್ಶನ್ ಕೂಡ ಫುಡ್ ಪಾಯಿಸನಿಂಗ್ ಬಗ್ಗೆ ವೈದ್ಯರಿಗೆ ಹೇಳಿಲ್ಲ’ ಎಂದು ಸರ್ಕಾರದ ಪರ ಎಎಜಿ ಭಾನುಪ್ರಕಾಶ್ ಆಕ್ಷೇಪಿಸಿದ್ದಾರೆ.

ಮನೆ ಊಟ, ಹಾಸಿಗೆಗಾಗಿ ದರ್ಶನ್ ರಿಟ್ ಅರ್ಜಿ; ಜುಲೈ 29ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ದರ್ಶನ್​
Follow us
| Updated By: ಮದನ್​ ಕುಮಾರ್​

Updated on: Jul 19, 2024 | 6:48 PM

ದೇಶಾದ್ಯಂತ ಸುದ್ದಿ ಆಗಿರುವ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ ದರ್ಶನ್​ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುವುದು ಕಷ್ಟ ಆಗಿದೆ. ಅವರಿಗೆ ಜೈಲಿನ ಊಟದಿಂದ ಫುಡ್​ ಪಾಯ್ಸನ್ ಆಗಿದೆ ಎನ್ನಲಾಗಿದೆ. ಇದರಿಂದ ಅವರ ಆರೋಗ್ಯದಲ್ಲಿ ಏರುಪೇರು ಆದ ಬಗ್ಗೆ ಇತ್ತೀಚೆಗೆ ವರದಿ ಆಗಿತ್ತು. ಮನೆ ಊಟ, ಹಾಸಿಗೆ ಪಡೆಯಲು ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಲಾಗಿದೆ. ದರ್ಶನ್​ ಪರವಾಗಿ ಹಿರಿಯ ವಕೀಲ ಕೆ.ಎನ್​. ಫಣೀಂದ್ರ ವಾದ ಮಾಡಿದ್ದಾರೆ. ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.

ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠದಲ್ಲಿ ದರ್ಶನ್​ ಅವರ ರಿಟ್​ ಅರ್ಜಿಯ ವಿಚಾರಣೆ ಇಂದು (ಜುಲೈ 19) ನಡೆದಿದೆ. ‘2022ರಲ್ಲಿ ಜೈಲು ಕೈಪಿಡಿಯಲ್ಲಿ ನಿಯಮ ರೂಪಿಸಲಾಗಿದೆ. ಪ್ಯಾರಾ 295ರಲ್ಲಿ ವಿಚಾರಣಾಧೀನ ಕೈದಿಗೆ ಅವಕಾಶ ಕಲ್ಪಿಸಲಾಗಿದೆ. ಮನೆ ಊಟ, ಹಾಸಿಗೆ, ಊಟದ ಪರಿಕರ, ದಿನಪತ್ರಿಕೆಗೆ ಅವಕಾಶವಿದೆ. ಜೈಲು ಕಾಯ್ದೆಯ ಸೆಕ್ಷನ್​ 30ರಲ್ಲಿ ಮನೆ ಊಟಕ್ಕೆ ಯಾವುದೇ ನಿರ್ಬಂಧವಿಲ್ಲ. ಕೈಪಿಡಿಯಲ್ಲಿ ಕೊಲೆ ಆರೋಪಿಗೂ ಇತರೆ ಆರೋಪಿಗೂ ವ್ಯತ್ಯಾಸ ತೋರಲಾಗಿದೆ. ನಿಯಂತ್ರಣಕ್ಕೊಳಪಟ್ಟು ಸವಲತ್ತು ನೀಡಲು ಅವಕಾಶವಿದೆ. ಸಮಯದ ನಿಬಂಧನೆ ವಿಧಿಸಿ ಅವಕಾಶ ನೀಡಬಹುದು’ ಎಂದು ಕೆ.ಎನ್. ಫಣೀಂದ್ರ ವಾದ ಮಂಡಿಸಿದ್ದಾರೆ.

‘ನೀವು ಸೆ.30ರಡಿ ಖೈದಿಗೆ ಸಂಪೂರ್ಣ ಅಧಿಕಾರವಿದೆ ಎಂದು ಹೇಳುತ್ತಿದ್ದೀರಿ. ಹೀಗೆ ಆದೇಶ ನೀಡಿದರೆ ಅದು ಎಲ್ಲ ಕೈದಿಗಳ ಹಕ್ಕಾಗಿ ಬಿಡುತ್ತದೆ. ಈ ಕೇಸಿನಲ್ಲಿ ನಾನು ಮಧ್ಯಂತರ ಆದೇಶ ನೀಡಬಯಸುವುದಿಲ್ಲ. ಸಂಪೂರ್ಣ ವಾದ ಮಂಡನೆ ಆಲಿಸಿದ ನಂತರವೇ ತೀರ್ಮಾನಿಸಬೇಕಾಗುತ್ತದೆ. ಈ ಬಗ್ಗೆ ನೀಡುವ ತೀರ್ಪು ಇತರೆ ಕೈದಿಗಳಿಗೂ ಅನ್ವಯ ಆಗಬಹುದು. ಹೀಗಾಗಿ ನೀವು ಮ್ಯಾಜಿಸ್ಟ್ರೇಟ್ ಮುಂದೆಯೇ ಅರ್ಜಿ ಸಲ್ಲಿಸುವುದು ಸೂಕ್ತ’ ಎಂದು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಮದುವೆ ಡೇಟ್ ಚೇಂಜ್ ಮಾಡಬೇಡ, ಅಷ್ಟರೊಳಗೆ ಬರ್ತೀನಿ’: ತರುಣ್​ಗೆ ದರ್ಶನ್​ ಭರವಸೆ

‘ಮೂಲಭೂತ ಹಕ್ಕಾಗಿ ಪರಿಗಣಿಸಬೇಕಾದರೆ ವಿವರವಾದ ವಾದಮಂಡನೆ ಆಲಿಸಬೇಕು. ಸೆ.30 ಹಾಗೂ ಅದಕ್ಕಿರುವ ನಿರ್ಬಂಧಗಳು, ಕಾನೂನನ್ನು ವ್ಯಾಖ್ಯಾನಿಸಬೇಕು. ಇದನ್ನು ಕೋರ್ಟ್ ತೀರ್ಮಾನಿಸಲು ಸಮಯ ಬೇಕಾಗಬಹುದು. ಬೇಕಿದ್ದರೆ ನಾಳೆಯೇ ಮ್ಯಾಜಿಸ್ಟ್ರೇಟ್​​ಗೆ ಅರ್ಜಿ ಸಲ್ಲಿಸಿ. ಮುಂದಿನ ಶುಕ್ರವಾರದೊಳಗೆ ಮ್ಯಾಜಿಸ್ಟ್ರೇಟ್ ತೀರ್ಮಾನಿಸಲಿ’ ಎಂದು ನಟ ದರ್ಶನ್ ಪರ ವಕೀಲರಿಗೆ ಹೈಕೋರ್ಟ್ ಸಲಹೆ ನೀಡಿದೆ. ಮನೆ ಊಟ, ಹಾಸಿಗೆ ಇನ್ನಿತರೆ ಕಾರಣಕ್ಕೆ ಅರ್ಜಿ ಸಲ್ಲಿಸಬೇಕು. ನಾಳೆಯೇ (ಜುಲೈ 20) ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರಿಗೆ ಅವಕಾಶವಿದೆ. ಜುಲೈ 27ರೊಳಗೆ ಅರ್ಜಿ ಬಗ್ಗೆ ತೀರ್ಮಾನಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್​​ಗೆ ಸೂಚಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.