Kotigobba 3, Salaga Release: ‘ಕೋಟಿಗೊಬ್ಬ 3’ ನಾಳೆ ಬಿಡುಗಡೆ; ಭರ್ಜರಿ ಎಂಟ್ರಿ ಕೊಟ್ಟ ‘ಸಲಗ’

TV9 Web
| Updated By: shivaprasad.hs

Updated on:Oct 14, 2021 | 3:26 PM

ಕೋಟಿಗೊಬ್ಬ 3, ಸಲಗ ಸಿನಿಮಾ ಬಿಡುಗಡೆ: ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ ‘ಕೋಟಿಗೊಬ್ಬ 3’ ಹಾಗೂ ‘ಸಲಗ’ ಇಂದು (ಗುರುವಾರ) ಬಿಗ್​ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಲಾಗಿತ್ತು. ಈ ಸಂಭ್ರಮದಲ್ಲಿ ಅಭಿಮಾನಿಗಳು ಹೇಗೆ ಭಾಗಿಯಾಗಿದ್ದಾರೆ? ಅವರ ಪ್ರತಿಕ್ರಿಯೆ ಏನು? ಅನಿರೀಕ್ಷಿತ ಬೆಳವಣಿಗೆಗಳಿಗೆ ಅಭಿಮಾನಿಗಳು ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

Kotigobba 3, Salaga Release: ‘ಕೋಟಿಗೊಬ್ಬ 3’ ನಾಳೆ ಬಿಡುಗಡೆ; ಭರ್ಜರಿ ಎಂಟ್ರಿ ಕೊಟ್ಟ ‘ಸಲಗ’
‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್, ‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್

ಇಂದು ಕನ್ನಡ ಚಿತ್ರಪ್ರೇಮಿಗಳಿಗೆ ಸಂಭ್ರಮದ ದಿನ. ಆಯುಧ ಪೂಜೆಯ ದಿನದಂದು ಕನ್ನಡದ ಎರಡು ಬಿಗ್ ಬಜೆಟ್ ಚಿತ್ರಗಳಾದ ‘ಕೋಟಿಗೊಬ್ಬ 3’ ಹಾಗೂ ‘ಸಲಗ’ ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಿಸಿದ್ದವು. ಬಹು ತಾರಾಗಣದ ಈ ಚಿತ್ರಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಸಲಗ’ ಚಿತ್ರಗಳನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಈ ಪೈಕಿ ‘ಸಲಗ’ ಮಾತ್ರ ಬಿಡುಗಡೆಯಾಗಿದ್ದು, ‘ಕೋಟಿಗೊಬ್ಬ 3’ ಅನಿವಾರ್ಯ ಕಾರಣದಿಂದ ನಾಳೆ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದರು. ಆದರೆ ರಾಜ್ಯದ ಎಲ್ಲೆಡೆ ಏರ್ಪಡಿಸಿದ್ದ ಫ್ಯಾನ್ಸ್ ಶೋಗಳು ಏಕಾಏಕಿ ರದ್ದಾಗಿದ್ದವು. ಬೆಳಗ್ಗೆ ಚಿತ್ರಮಂದಿರಕ್ಕೆ ಬಂದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿ, ನಿರ್ಮಾಪಕ ಹಾಗೂ ವಿತರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಮಾಹಿತಿ ನೀಡಿದ್ದು, ನಾಳೆ (ಶುಕ್ರವಾರ) ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಬಿಗ್​ ಸ್ಕ್ರೀನ್​ನಲ್ಲಿ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ.

ಇತ್ತ ದುನಿಯಾ ವಿಜಯ್ ನಟನೆಯ ಸಲಗ ಮೊದಲ ಶೋ ಹೌಸ್​ಫುಲ್ ಆಗಿದ್ದು, ಚಿತ್ರ ನೋಡಿ ಹೊರಬಂದ ಅಭಿಮಾನಿಗಳು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಬಿಡುಗಡೆಯ ಕುರಿತ ಅಪ್ಡೇಟ್ಸ್​​ಗಳು ಇಲ್ಲಿ ಲಭ್ಯವಿದೆ.

LIVE NEWS & UPDATES

The liveblog has ended.
  • 14 Oct 2021 03:18 PM (IST)

    ಶಿವಮೊಗ್ಗ: ‘ಕೋಟಿಗೊಬ್ಬ 3’ ಪ್ರದರ್ಶನ ರದ್ದಾದರೂ ನಿಲ್ಲದ ಅಭಿಮಾನಿಗಳ ಸಂಭ್ರಮ

    ಶಿವಮೊಗ್ಗ: ನಗರದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಮಹಾವೀರ ವೃತ್ತದ ಬಳಿ ಸಂಭ್ರಮಾಚರಣೆ ನಡೆಸಿದ್ದಾರೆ. ಚಿತ್ರದ ಪ್ರದರ್ಶನ ರದ್ದಾಗಿ ನಾಳೆಗೆ ಮುಂದೂಡಲಾಗಿದ್ದರೂ ಕೂಡ, ಫ್ಯಾನ್ಸ್ ಸಂಭ್ರಮ ನಿಂತಿಲ್ಲ. ಕಿಚ್ಚನ ಅಭಿಮಾನಿಗಳು 400 ಅಡಿ ಅಗಲದ ಸುದೀಪ್ ಫ್ಲೆಕ್ಸ್ ಗೆ ಬೂದು ಕುಂಬಳಕಾಯಿ ಕರ್ಪೂರ ಬೆಳಗಿ ಪೂಜೆ ಸಲ್ಲಿಸಿದ್ದು, 10 ಕ್ಕೂ ಹೆಚ್ಚು ಕುಂಬಳಕಾಯಿ ಒಡೆದಿದ್ದಾರೆ. ಪಟಾಕಿ ಸಿಡಿಸಿ, ಸುದೀಪ್ ಬಾವುಟ ಕೈಯಲ್ಲಿ ಹಿಡಿದು ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ.

  • 14 Oct 2021 03:06 PM (IST)

    ಅನಿಲ್ ಹಾಗೂ ಉದಯ್​ರನ್ನು ನೆನಪಿಸಿಕೊಂಡ ದುನಿಯಾ ವಿಜಯ್ ಅಭಿಮಾನಿಗಳು

    ಶಿವಮೊಗ್ಗ: ಅ‌ನಿಲ್ ಹಾಗೂ ಉದಯ್ ಭಾವಚಿತ್ರಕ್ಕೆ ದುನಿಯಾ ವಿಜಯ್ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದಾವಣಗೆರೆ ದುನಿಯಾ ವಿಜಯ್ ಅಭಿಮಾನಿಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದು, ನಟರ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಆರ್ಪಿಸಲಾಗಿದೆ. ಸಲಗ ಚಿತ್ರದಲ್ಲಿ ಇವರಿಬ್ಬರು ಇರಬೇಕಿತ್ತು ಎಂದು ಅಭಿಮಾನಿಗಳು ನೋವು ತೋಡಿಕೊಂಡಿದ್ದಾರೆ. ಅನಿಲ್ ಹಾಗೂ ಉದಯ್ ‘ಮಾಸ್ತಿಗುಡಿ’ ಸಿನಿಮಾದ ದುರಂತದಲ್ಲಿ ಸಾವನ್ನಪ್ಪಿದ್ದರು.

  • 14 Oct 2021 02:51 PM (IST)

    ‘ಯಾರಿಂದ ತೊಂದರೆ ಆಗಿದೆ ಎನ್ನುವುದು ಗೊತ್ತು’; ನಟ ಕಿಚ್ಚ ಸುದೀಪ್ ಹೇಳಿಕೆ

    ‘ಕೋಟಿಗೊಬ್ಬ 3’ ಚಿತ್ರದ ಮೊದಲ ದಿನದ ಪ್ರದರ್ಶನ ರದ್ದಾದ ಬೆನ್ನಲ್ಲೇ ನಿರ್ಮಾಪಕರ ಬೆನ್ನಿಗೆ ಸುದೀಪ್ ನಿಂತಿದ್ದಾರೆ. ಸೂರಪ್ಪ ಬಾಬು ಅವರಿಗೆ ಧೈರ್ಯ ತುಂಬಿರುವ ಕಿಚ್ಚ, ಯಾರಿಂದ ಈ ತೊಂದರೆ ಆಗಿದೆ ಎನ್ನುವುದು ತಿಳಿದಿದೆ ಎಂದಿದ್ದಾರೆ. ಅವರಿಗೆ ಕಾಲವೇ ಉತ್ತರ ಕೊಡಲಿದೆ ಎಂದೂ ಅವರು ತಿಳಿಸಿದ್ದಾರೆ. ನಾಳೆಯಿಂದ ಬಿಡುಗಡೆ ಆಗಲಿರುವ ಚಿತ್ರವು ಭರ್ಜರಿ ಪ್ರದರ್ಶನ ಕಾಣಲಿದೆ ಎಂದೂ ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.

  • 14 Oct 2021 02:45 PM (IST)

    ‘ಸಲಗ’ವನ್ನು ನೋಡಿದ ನಂತರ ಡಾಲಿ ಧನಂಜಯ್ ರಿಯಾಕ್ಷನ್ ಹೇಗಿತ್ತು?

    ‘ಸಲಗ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಡಾಲಿ ಧನಂಜಯ್, ಪ್ರೇಕ್ಷಕರ ನಡುವೆ ಕುಳಿತು ಚಿತ್ರವನ್ನು ವೀಕ್ಷಿಸಿದ್ದಾರೆ. ನಂತರ ಮಾತನಾಡಿದ ಅವರು ಚಿತ್ರದ ಕುರಿತು ಸಂತಸ ಹಂಚಿಕೊಂಡಿದ್ದಾರೆ. ವಿಜಯ್ ನಿರ್ದೇಶನವನ್ನು ಹೊಗಳಿದ ಡಾಲಿ, ಅವರು ಕಂಡ ಪ್ರಪಂಚವನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತಂದಿದ್ದಾರೆ ಎಂದಿದ್ದಾರೆ.

  • 14 Oct 2021 01:57 PM (IST)

    ‘ಸಲಗ’ ಚಿತ್ರದ ಪ್ರದರ್ಶನದಲ್ಲಿ ತೆರೆಯ ಮುಂದೆ ಹುಚ್ಚೆದ್ದು ಕುಣಿದ ಅಭಿಮಾನಿಗಳು

    ಮಾಸ್ ಸಿನಿಮಾಗಳನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ‘ಸಲಗ’ ಚಿತ್ರದ ಪ್ರದರ್ಶನದ ಸಮಯದಲ್ಲೂ ಸ್ಕ್ರೀನ್ ಮುಂದೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದು, ತಮ್ಮ ನೆಚ್ಚಿನ ನಟನ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

  • 14 Oct 2021 01:55 PM (IST)

    ಪಟಾಕಿ ಸಿಡಿದ ಕಾರಣ ಗಾಯಾಳುವಾದ ಕಿಚ್ಚನ ಫ್ಯಾನ್

    ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ, ಕಿಚ್ಚ ಸುದೀಪ್ ಅಭಿಮಾನಿಯೋರ್ವರು ಪಟಾಕಿ ಸಿಡಿಯುವಾಗ ಗಾಯಗೊಂಡಿದ್ದಾರೆ. ವಿಪರ್ಯಾಸವೆಂದರೆ ಇಂದು ಕೋಟಿಗೊಬ್ಬ 3 ಚಿತ್ರ ತಾಂತ್ರಿಕ ಕಾರಣಗಳಿಂದ ಬಿಡುಗಡೆ ಆಗದೇ ಮುಂದೂಡಲ್ಪಟ್ಟಿದೆ.

  • 14 Oct 2021 01:51 PM (IST)

    ‘ಸಲಗ’ ಚಿತ್ರಕ್ಕೆ ನಾಯಕಿ ಸಂಜನಾ ಮೊದಲ ರಿಯಾಕ್ಷನ್ ಏನು?

    ಚಿತ್ರ ಬಹಳ ಅದ್ಭುತವಾಗಿ ಮೂಡಿಬಂದಿದ್ದು, ಅತ್ಯುತ್ತಮ ಕಲಾವಿದರ ಜೊತೆಗೆ ಕೆಲಸ ಮಾಡಿದ್ದಕ್ಕೆ ಬಹಳ ಖುಷಿ ಇದೆ ಎಂದು ‘ಸಲಗ’ದ ನಾಯಕ ನಟಿ ಸಂಜನಾ ಪ್ರತಿಕ್ರಿಯೆ ನೀಡಿದ್ದಾರೆ.

  • 14 Oct 2021 01:41 PM (IST)

    ಯಾದಗಿರಿ, ಹುಬ್ಬಳ್ಳಿಯಲ್ಲೂ ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಅಸಮಾಧಾನ ತೋಡಿಕೊಂಡ ಫ್ಯಾನ್ಸ್

    ಯಾದಗಿರಿ: ಇಂದು ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಶಹಾಪುರ‌ದ ಜಯಶ್ರೀ ಚಿತ್ರಮಂದಿರದ ಬಳಿ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

    ಹುಬ್ಬಳ್ಳಿಯಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಬೆಳಗ್ಗೆಯೇ ಬಂದು ಟಿಕೆಟ್ ಪಡೆದಿದ್ವಿ ಎಂದು ಅಲವತ್ತುಕೊಂಡಿದ್ದಾರೆ. ಪೊಲೀಸರ ಮಧ್ಯೆ ಪ್ರವೇಶದಿಂದ ಪರಸ್ಥಿತಿ ತಿಳಿಯಾಗಿದ್ದು, ನಾಳೆ ಈಗಾಗಲೇ ಟಿಕೆಟ್ ಪಡೆದವರಿಗೆ ಅವಕಾಶ ನೀಡುವುದಾಗಿ ಚಿತ್ರಮಂದಿರ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

  • 14 Oct 2021 01:40 PM (IST)

    ಬೆಳಗಾವಿ: ಚಿತ್ರ ರದ್ಧಾಗಿದ್ದಕ್ಕೆ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದ ಯುವಕನಿಗೆ ಸಿಪಿಐ ಕಪಾಳಮೋಕ್ಷ

    ಬೆಳಗಾವಿ: ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನ ಪ್ರಚೋದಿಸುತ್ತಿದ್ದ ಯುವಕನಿಗೆ ಸಿಪಿಐ ಕಪಾಳಮೋಕ್ಷ ಮಾಡಿದ್ಧಾರೆ. ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಹೇಳಿದರೂ ಕೇಳದೇ ಅಭಿಮಾನಿಗಳನ್ನ ಕೆಲವರು ಪ್ರಚೋದಿಸುತ್ತಿದ್ದರು. ನಾಳೆ ಕೋಟಿಗೊಬ್ಬ 3 ರಿಲೀಸ್ ಆಗುತ್ತೆ ಎಂದು ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಿರುವಾಗ, ಅದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳನ್ನು ಪಾನಮತ್ತ ಯುವಕನೊಬ್ಬ ಪ್ರಚೋದಿಸಿದಾಗ, ಸಿಪಿಐ ಕಪಾಳಮೋಕ್ಷ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಭಿಮಾನಿಗಳ ಗುಂಪನ್ನು ಪೊಲೀಸರು ಚದುರಿಸಿದ್ದಾರೆ. ಚಿತ್ರಮಂದಿರದಲ್ಲಿ ಟಿಕೆಟ್ ವಾಪಸ್ ನೀಡಿ ಹಣ ಪಡೆದು ಅಭಿಮಾನಿಗಳು ಮರಳುತ್ತಿದ್ದಾರೆ.

  • 14 Oct 2021 01:32 PM (IST)

    ವಿಜಯಪುರ: ‘ಕೋಟಿಗೊಬ್ಬ 3’ ಚಿತ್ರ ಪ್ರದರ್ಶನ ರದ್ದಾಗಿದ್ದಕ್ಕೆ ಅಭಿಮಾನಿಗಳಿಂದ ದಾಂಧಲೆ

    ವಿಜಯಪುರ: ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದಾಗಿರುವುದಕ್ಕೆ ವಿಜಯಪುರದ ಡ್ರೀಂಲ್ಯಾಂಡ್​ ಥಿಯೇಟರ್ ಬಳಿ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಥಿಯೇಟರ್ ಬಾಗಿಲು ಮುರಿಯಲು ಯತ್ನಿಸಲಾಗಿದೆ. ಥಿಯೇಟರ್ ಎದುರಿದ್ದ ಲೈಟ್​ಗಳನ್ನು ಒಡೆದು ಹಾಕಲಾಗಿದೆ. ಬೆಳಗ್ಗೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳು, ಪ್ರದರ್ಶನ ರದ್ದಾದ ನಂತರ ತಾಳ್ಮೆ ಕಳೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

  • 14 Oct 2021 01:15 PM (IST)

    ‘ಸಲಗ’ ನೋಡಿದ ಪ್ರೇಕ್ಷಕರು ಹೇಳಿದ್ದೇನು?

    ‘ಸಲಗ’ ಚಿತ್ರವನ್ನು ನೋಡಿ ಹೊರಬಂದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದಲ್ಲಿ ಎಲ್ಲವೂ ಇದೆ. ದುನಿಯಾ ವಿಜಯ್ ನಿರ್ದೇಶನ ಚೆನ್ನಾಗಿದೆ ಎಂದು ಅಭಿಮಾನಿಗಳು ಹೊಗಳಿದ್ದಾರೆ. ಈ ಕುರಿತ ವಿಡಿಯೋ ವರದಿ ಇಲ್ಲಿದೆ.

  • 14 Oct 2021 12:12 PM (IST)

    ‘ಕೋಟಿಗೊಬ್ಬ 3’ ಚಿತ್ರ ನಾಳೆಯಿಂದ ಬಿಡುಗಡೆ; 2 ವರ್ಷದಿಂದ ಕಾದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ

    ‘ಕೋಟಿಗೊಬ್ಬ 3’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಚಿತ್ರ ಬಿಡುಗಡೆಯಾಗುತ್ತಿಲ್ಲ. ಈ ಕುರಿತು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದು, ನಾಳೆಯಿಂದ(ಶುಕ್ರವಾರ) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ವಿತರಕರ ಷಡ್ಯಂತ್ರದಿಂದ ಇಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ನಾಳೆ ಮುಂಜಾನೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಶೋ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

  • 14 Oct 2021 11:42 AM (IST)

    ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು ಅವರದ್ದು ಎನ್ನಲಾದ ಆಡಿಯೋ ವೈರಲ್

    ನಟ ಸುದೀಪ್ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಮನವಿ ಮಾಡಿಕೊಂಡಿದ್ದಾರೆ ಎನ್ನಲಾದ, ‘ದಯವಿಟ್ಟು ತಾಳ್ಮೆಯಿಂದ ಇರಿ, ನಿಮ್ಮ ಕಾಲು ಹಿಡಿದುಕೊಳ್ಳುವೆ. 4 ಕೋಟಿ ರೂಪಾಯಿ ಮೋಸವಾಗಿದೆ’ ಎಂಬ  ಆಡಿಯೋ ವೈರಲ್ ಆಗಿದೆ.

  • 14 Oct 2021 11:37 AM (IST)

    ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್

    ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗದ ಹಿನ್ನಲೆಯಲ್ಲಿ ಸುದೀಪ್ ಪತ್ರ ಬರೆದಿದ್ದು, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ತಾಳ್ಮೆ ಕಳೆದುಕೊಳ್ಳದಂತೆ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿದ್ದು, ಚಿತ್ರಮಂದಿರದ ಆವರಣಕ್ಕೆ ಧಕ್ಕೆ ತರದಂತೆ ಕೇಳಿಕೊಂಡಿದ್ದಾರೆ. ನಿಗಾವಹಿಸಬೇಕಾದವರ ನಿರ್ಲಕ್ಷ್ಯ ದಿಂದ ಅವ್ಯವಸ್ಥೆಯಾಗಿದ್ದು, ಇದಕ್ಕೆ ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಅವರು ತಿಳಿಸಿದ್ದಾರೆ.

  • 14 Oct 2021 11:31 AM (IST)

    ಕೋಲಾರ: 12 ಗಂಟೆಯ ಪ್ರದರ್ಶನ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಫ್ಯಾನ್ಸ್

    ಕೋಲಾರದಲ್ಲಿಯೂ ಕಿಚ್ಚ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದು, 12 ಗಂಟೆಗೆ ಚಿತ್ರ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ನಗರದ ನಾರಾಯಣಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಮುಂಜಾನೆಯಿಂದ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.

  • 14 Oct 2021 11:30 AM (IST)

    ಬಾಗಲಕೋಟೆ: ನಿರಾಸೆಯ ಮಧ್ಯೆಯೂ ಅಭಿಮಾನ ಪ್ರದರ್ಶಿಸಿದ ಫ್ಯಾನ್ಸ್

    ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನ ರದ್ದಾದ ನಿರಾಸೆಯಿದ್ದರೂ ಬಾಗಲಕೋಟೆಯಲ್ಲಿ ಫ್ಯಾನ್ಸ್ ಅಭಿಮಾನ ಪ್ರದರ್ಶಿಸಿದ್ದಾರೆ. ವಾಸವಿ ಚಿತ್ರಮಂದಿರದ ಬಳಿ ಜಮಾಯಿಸಿದ ಅಭಿಮಾನಿಗಳು, ಕಿಚ್ಚ ಕಟೌಟ್​ಗೆ ಬೃಹತ್ ಹಾರ, ಕ್ಷೀರಾಭಿಷೇಕ ಮಾಡಿ, ಡೊಳ್ಳು ಬಾರಿಸುತ್ತಾ ಘೋಷಣೆ ಹಾಕಿ ಅಭಿಮಾನ ಮೆರೆದಿದ್ದಾರೆ. ಎರಡನೇ ಪ್ರದರ್ಶನವಾದರೂ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

  • 14 Oct 2021 11:17 AM (IST)

    ಬಳ್ಳಾರಿ, ಕಲಬುರಗಿಯಲ್ಲೂ ಆರಂಭವಾಗದ ‘ಕೋಟಿಗೊಬ್ಬ 3’

    ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರವು ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲೂ ಆರಂಭವಾಗಿಲ್ಲ. ಬಹಳ ದಿನಗಳಿಂದ ಚಿತ್ರಕ್ಕಾಗಿ ಕಾದು, ಇಂದು ಮುಂಜಾನೆಯಿಂದ ಟಿಕೆಟ್ ಖರೀದಿಸಿ, ಚಿತ್ರಮಂದಿರಕ್ಕೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಬೇಸರ ಹೊರಹಾಕಿದ್ದಾರೆ. ಕಲಬುರಗಿ ನಗರದ ಸಂಗಮ ಚಿತ್ರಮಂದಿರದಲ್ಲಿ ಹಾಗೂ ಬಳ್ಳಾರಿಯ ರಾಘವೇಂದ್ರ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ಬಿಡುಗಡೆಯಾಗಲಿದೆ.

  • 14 Oct 2021 11:03 AM (IST)

    ‘ಇನ್ನು ಅರ್ಧ ಗಂಟೆಯಲ್ಲಿ ಕೋಟಿಗೊಬ್ಬ 3 ಶೋ ಆರಂಭವಾಗಲಿದೆ’; ಟಿವಿ9ಗೆ ಚಿತ್ರತಂಡ ಮಾಹಿತಿ

    ‘ಇನ್ನು ಅರ್ಧ ಗಂಟೆಯಲ್ಲಿ ಕೋಟಿಗೊಬ್ಬ 3 ಶೋ ಆರಂಭವಾಗಲಿದೆ’ ಎಂದು ಟಿವಿ9ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ತಾಂತ್ರಿಕ ದೋಷದಿಂದ ಸಿನಿಮಾ ತಡವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇಂದು ಮುಂಜಾನೆ ಶೋ ಕ್ಯಾನ್ಸಲ್ ಆಗಿದ್ದಕ್ಕೆ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟನೆ ನೀಡಿ, 10ಕ್ಕೆ ಶೋ ಆರಂಭವಾಗುತ್ತದೆ ಎಂದಿದ್ದರು. ಆದರೆ ಪ್ರದರ್ಶನ ಆರಂಭವಾಗಿರಲಿಲ್ಲ. ಪ್ರಸ್ತುತ ಚಿತ್ರತಂಡ ಮಾಹಿತಿ ನೀಡಿದ್ದು, ಅಭಿಮಾನಿಗಳು ಬಿಡುಗಡೆಗೆ ಕಾಯುತ್ತಿದ್ಧಾರೆ.

  • 14 Oct 2021 10:59 AM (IST)

    ಚಿತ್ರದುರ್ಗ: ಪ್ರಾರಂಭವಾಗದ ‘ಕೋಟಿಗೊಬ್ಬ 3’; ಫ್ಯಾನ್ಸ್​ಗೆ ತೀವ್ರ ನಿರಾಸೆ

    ಚಿತ್ರದುರ್ಗದ ವೆಂಕಟೇಶ್ವರ ಥಿಯೇಟರ್ ಬಳಿ ಇಂದು ಮುಂಜಾನೆಯಿಂದ ‘ಕೋಟಿಗೊಬ್ಬ 3’ ಚಿತ್ರವನ್ನು ನೋಡಲು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 14 Oct 2021 10:55 AM (IST)

    ತುಮಕೂರು: ರಿಲೀಸ್ ಆಗದ ಕೋಟಿಗೊಬ್ಬ 3; ಬೇಸರ ಹೊರಹಾಕಿದ ಅಭಿಮಾನಿಗಳು

    ತುಮಕೂರಿನ ಗಾಯಿತ್ರಿ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ರಿಲೀಸ್ ಆಗಿಲ್ಲ. ಬೆಳಿಗ್ಗೆಯಿಂದಲೂ ಅಭಿಮಾನಿಗಳು ಕಾಯುತ್ತಿದ್ದು, ಬೇಸರ ಹೊರಹಾಕಿದ್ದಾರೆ.

  • 14 Oct 2021 10:52 AM (IST)

    ಬೆಳಗಾವಿ: ‘ಕೋಟಿಗೊಬ್ಬ 3’ ಟಿಕೆಟ್ ನೀಡದ್ದಕ್ಕೆ ಫ್ಯಾನ್ಸ್ ಆಕ್ರೋಶ

    ಬೆಳಗಾವಿ: ಕೋಟಿಗೊಬ್ಬ 3 ಚಿತ್ರ ಬಿಡುಗಡೆ ವಿಳಂಬ ಹಿನ್ನೆಲೆಯಲ್ಲಿ ಚಿತ್ರಮಂದಿರದ ಎದುರು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಕಲಿ ಗ್ರಾಮದ ಮಯೂರ ಚಿತ್ರಮಂದಿರದ ಗೇಟ್ ತೆಗೆಯದೇ ಇರುವದು ಹಾಗೂ ಟಿಕೆಟ್ ನೀಡದ್ದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರಮಂದಿರದ ಎದುರು ಹೆಚ್ಚಿನ ಪ್ರಮಾಣದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ.

  • 14 Oct 2021 10:50 AM (IST)

    ಅಭಿಮಾನಿಗಳನ್ನು ರಂಜಿಸುತ್ತಿರುವ ‘ಸಲಗ’; ‘ಸೂರಿ ಅಣ್ಣ’ ಹಾಡಿಗೆ ಫ್ಯಾನ್ಸ್ ಡಾನ್ಸ್

    ದುನಿಯಾ ವಿಜಯ್ ನಟನೆಯ ‘ಸಲಗ’ವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ಧಾರೆ. ‘ಸೂರಿ ಅಣ್ಣ’ ಹಾಡಿಗೆ ಬೆಳ್ಳಿ ಪರದೆ ಮುಂದೆ ಅಭಿಮಾನಿಗಳು ಡ್ಯಾನ್ಸ್ ಮಾಡಿ ಸಂಭ್ರಮ ಆಚರಿಸಿದ್ದಾರೆ.

  • 14 Oct 2021 10:39 AM (IST)

    ‘ಬಹಳ ಬೇಸರವಾಗಿದೆ’; ಶೋ ಕ್ಯಾನ್ಸಲ್ ಆಗಿದ್ದಕ್ಕೆ ಸುದೀಪ್ ಮಹಿಳಾ ಅಭಿಮಾನಿಯ ರಿಯಾಕ್ಷನ್

    ‘ಕೋಟಿಗೊಬ್ಬ 3’ ಶೋ ರದ್ದಾಗಿದ್ದಕ್ಕೆ ಮಹಿಳಾ ಅಭಿಮಾನಿಯೋರ್ವರು ಬೇಸರ ವ್ಯಕ್ತಪಡಿಸಿದ್ದು, ಬೆಳಗ್ಗೆಯಿಂದ ಎಲ್ಲೂ ಶೋಗಳನ್ನ ಕೊಟ್ಟಿಲ್ಲ. ಬಹಳ ಬೇಸರವಾಗುತ್ತಿದೆ ಎಂದಿದ್ದಾರೆ. ಕುಟುಂಬ ಸಮೇತವಾಗಿ ಬಂದ ಪ್ರೇಕ್ಷರಿಗೂ ನಿರಾಸೆಯಾಗಿದ್ದು, ಏನಾದ್ರು ಮಾಡಿ ಸಿನಿಮಾ ರಿಲೀಸ್ ಮಾಡಿ ಎಂದ ಅವರು ಕೋರಿಕೊಂಡಿದ್ದಾರೆ.

  • 14 Oct 2021 10:36 AM (IST)

    ‘ಸಲಗ’ ಚಿತ್ರದ ಬಗ್ಗೆ ದುನಿಯಾ ವಿಜಯ್ ಪತ್ನಿ ಕೀರ್ತಿ ಹೇಳಿದ್ದೇನು?

    ‘ಸಲಗ’ ಚಿತ್ರದ ಕುರಿತು ದುನಿಯಾ ವಿಜಯ್ ಪತ್ನಿ ಕೀರ್ತಿ ತಮ್ಮ ಅಭಿಪ್ರಾಯವನ್ನು ಟಿವಿ9ನೊಂದಿಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

  • 14 Oct 2021 10:32 AM (IST)

    ಕೋಟಿಗೊಬ್ಬ 3 ಸಿನಿಮಾದ ನೆಗೆಟಿವ್ ರೈಟ್ಸ್ ಸಮಸ್ಯೆಯಿಂದ ಬಿಡುಗಡೆ ವಿಳಂಬವಾಗಿದೆ; ಕೆ.ವಿ.ಚಂದ್ರಶೇಖರ್

    ಕೋಟಿಗೊಬ್ಬ 3 ಸಿನಿಮಾದ ನೆಗೆಟಿವ್ ರೈಟ್ಸ್ ಸಮಸ್ಯೆ ಆಗಿದ್ದರಿಂದ ವೀರೇಶ್ ಥಿಯೇಟರ್ ಮಾಲೀಕ ಕೆ.ವಿ.ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ನಿರ್ಮಾಪಕ ಸೂರಪ್ಪಬಾಬು ಹೈದರಾಬಾದ್​ನಲ್ಲಿ ಇದ್ದಾರೆ. ಅವರು ನೆಗೆಟಿವ್ ರೈಟ್ಸ್ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಚಂದ್ರಶೇಖರ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಜವಾಬ್ದಾರಿ ಕೊರತೆಯಿಂದ ಚಿತ್ರ ರಿಲೀಸ್ ವಿಳಂಬವಾಗಿದೆ. ಯಾರೇ ಆಗಲಿ ಪ್ರೇಕ್ಷಕರ ಸಮಯ ವ್ಯರ್ಥ ಮಾಡಬಾರದು. ಇದು ನಮ್ಮ ಚಿತ್ರರಂಗಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ಕೆ.ವಿ.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

  • 14 Oct 2021 10:25 AM (IST)

    ಬೆಂಗಳೂರು: ವೀರೇಶ್ ಚಿತ್ರಮಂದಿರದ 10.30ರ ಶೋ ಕೂಡ ರದ್ದು!

    ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮಾರ್ನಿಂಗ್ ಶೋ ರದ್ದಾಗಿದೆ ಎಂದು ಮಾಲೀಕರು ಸ್ಪಷ್ಟಪಡಿಸಿದ್ದಾರೆ. ತಾಂತ್ರಿಕ ಕಾರಣದಿಂದ ಹೀಗಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ನೆಗೆಟಿವ್ ರೈಟ್ಸ್  ಸಮಸ್ಯೆಯಾಗಿದೆ ಎಂಬ ಸುಳಿವನ್ನೂ ಅವರು ನೀಡಿದ್ದಾರೆ. ಒಟ್ಟಿನಲ್ಲಿ ಇದರಿಂದ ಅಭಿಮಾನಿಗಳಿಗೆ ಬಹಳ ನಿರಾಸೆಯಾಗಿದೆ.

  • 14 Oct 2021 10:20 AM (IST)

    ಗದಗ: ಇನ್ನೂ ಆರಂಭವಾಗದ 9 ಗಂಟೆಯ ಶೋ; ಚಿತ್ರ ನೋಡುವವರೆಗೂ ಮರಳುವುದಿಲ್ಲ ಎಂದ ಫ್ಯಾನ್ಸ್

    ಕೋಟಿಗೊಬ್ಬ-3 ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಗದಗ ನಗರದ ಕೃಷ್ಣ ಟಾಕೀಸ್ ಬಳಿ ನೂರಾರು ಕಿಚ್ಚ ಸುದೀಪ್ ಅಭಿಮಾನಿಗಳು ಆಗಮಿಸಿದ್ದಾರೆ. ನೆಚ್ಚಿನ ನಟನ ಚಿತ್ರ ರಿಲೀಸ್ ಹಿನ್ನೆಲೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ ಟಿಕೆಟ್ ಖರೀದಿಸಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ 9 ಗಂಟೆಯ ಶೋ ಇನ್ನೂ ಆರಂಭವಾಗಿಲ್ಲ. ಈ ಕುರಿತು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶೋ ಆರಂಭವಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

  • 14 Oct 2021 09:59 AM (IST)

    ‘ಕೋಟಿಗೊಬ್ಬ 3’ ಚಿತ್ರದ ಮಾರ್ನಿಂಗ್ ಶೋ ಕೂಡ ರದ್ದಾಗುವ ಸಾಧ್ಯತೆ

    ಕೋಟಿಗೊಬ್ಬ 3 ಸಿನಿಮಾ ಇಂದು ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ. ಕಾರಣ, ಬೆಳಗ್ಗೆ 10 ಗಂಟೆಯಾದರೂ ಮಾರ್ನಿಂಗ್ ಶೋ ಟಿಕೆಟ್ ನೀಡಿಲ್ಲ. ಆದ್ದರಿಂದ ಮಾರ್ನಿಂಗ್ ಶೋ ಕೂಡ ಬಹುತೇಕ ರದ್ದು ಎನ್ನಲಾಗಿದೆ.

  • 14 Oct 2021 09:46 AM (IST)

    ಅಭಿಮಾನಿಗಳ ಭಾವನೆಗಳ ಜೊತೆ ಆಟವಾಡ್ಬೇಡಿ; ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದ್ದಕ್ಕೆ ಸುದೀಪ್ ಫ್ಯಾನ್ಸ್ ಕಿಡಿ

    ಕೋಟಿಗೊಬ್ಬ 3 ಚಿತ್ರದ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದ್ದರ ಕುರಿತು ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ಶೋ ನಡೆಯಲಿದೆ ಎಂದು ಟಿಕೆಟ್ ಏಕೆ ಬುಕಿಂಗ್ ಮಾಡಲು ಬಿಟ್ಟಿದ್ದರು? ಅವರು ರೀಫಂಡ್ ಮಾಡಬಹುದು. ಆದರೆ ನಾವು ಹಣಕ್ಕಾಗಿ ಬಂದಿಲ್ಲ. ಅಭಿಮಾನಕ್ಕಾಗಿ ಬಂದಿದ್ದೀವಿ. ಅಭಿಮಾನಿಗಳ ಭಾವನೆಗಳ ಜೊತೆ ನಿರ್ಮಾಪಕ ಸೂರಪ್ಪ ಬಾಬು ಆಟವಾಡಬಾರದು’’ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.

    ನಿರ್ಮಾಪಕ ಸೂರಪ್ಪ ಬಾಬು ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದ್ದರ ಕುರಿತು ಟಿವಿ9ಗೆ ಸ್ಪಷ್ಟನೆ ನೀಡಿದ್ದು, 10 ಗಂಟೆಯ ನಂತರ ಎಲ್ಲಾ ಶೋ ನಡೆಯಲಿದೆ ಎಂದಿದ್ದಾರೆ.

  • 14 Oct 2021 09:20 AM (IST)

    ದುನಿಯಾ ವಿಜಯ್​ಗೆ ಅಭಿಮಾನಿಗಳ ಬಹುಪರಾಕ್

    ನಟ ದುನಿಯಾ ವಿಜಯ್ ‘ಸಲಗ’ ಚಿತ್ರದ ಕುರಿತು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಅಭಿಮಾನಿಗಳಿಗೆ ಈ ಚಿತ್ರದ ಕುರಿತು ಅದಕ್ಕಿಂತ ದುಪ್ಪಟ್ಟು ನಿರೀಕ್ಷೆ ಇದೆ. ‘ಅವರ ಫೈಟ್, ನಟನೆ ಎಲ್ಲವೂ ಇಷ್ಟ. ಬಹಳ ಕಷ್ಟದಿಂದ ಬಂದು, ಬೆಳೆದಿರುವ ದುನಿಯಾ ವಿಜಯ್ ಗೆಲ್ಲಬೇಕು’ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದು ಹೀಗೆ.

  • 14 Oct 2021 09:16 AM (IST)

    ಶಿವಮೊಗ್ಗ: ಕಿಚ್ಚನ ಚಿತ್ರದ ಮೊದಲ ಶೋಗೆ ಕಾಯುತ್ತಿರುವ ಅಭಿಮಾನಿಗಳು

    ಶಿವಮೊಗ್ಗ: ನಗರದ ಎಚ್​ಪಿಸಿ ಚಿತ್ರಮಂದಿರದ ಮುಂದೆ ಅಭಿಮಾನಿಗಳ ನೆರೆದಿದ್ದಿ, ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಅಭಿಮಾನಿಗಳು ಪಟಾಕಿ ಸಿಡಿಸಿ, ಕಿಚ್ಚನ ಭಾವಚಿತ್ರದ ಬಾವುಟ ಹಿಡಿದು ಸಂಭ್ರಮಿಸುತ್ತಿದ್ದಾರೆ.

  • 14 Oct 2021 09:12 AM (IST)

    ಮಂಡ್ಯ: ನೆಚ್ಚಿನ ನಟರ ಚಿತ್ರಕ್ಕೆ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು

    ಮಂಡ್ಯ: ಹಲವು ತಿಂಗಳುಗಳ ನಂತರ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವ ಸಂಭ್ರಮದಲ್ಲಿ ಅಭಿಮಾನಿಗಳು ಚಿತ್ರಮಂದಿರಗಳಿಗೆ ಆಗಮಿಸಿದ್ದಾರೆ. 10.30 ಕ್ಕೆ ಮಾರ್ನಿಂಗ್ ಶೋ ಇದ್ದು, ಇದಕ್ಕಾಗಿ ಬೆಳಿಗ್ಗೆಯಿಂದಲೇ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಕಾದು ನಿಂತಿದ್ದಾರೆ. ಮಂಡ್ಯದ ಗುರುಶ್ರೀ ಥಿಯೇಟರ್ ನಲ್ಲಿ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’, ಹಾಗೂ ಮಹಾವೀರ ಚಿತ್ರ ಮಂದಿರದಲ್ಲಿ ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರ ಬಿಡುಗಡೆಯಾಗಲಿದೆ.

  • 14 Oct 2021 08:39 AM (IST)

    ‘ಫ್ಯಾನ್ಸ್ ಶೋ ಕೊಡುವುದಿಲ್ಲ ಎಂದಿದ್ದೆ, 10ಕ್ಕೆ ಶೋ ಆರಂಭವಾಗಲಿದೆ’; ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟನೆ

    ‘‘ನಾನು ಫ್ಯಾನ್ಸ್ ಶೋ ಕೊಡಲ್ಲ ಎಂದು ಆರಂಭದಲ್ಲಿ ಹೇಳಿದ್ದೆ. ಏನೂ ಪ್ರಾಬ್ಲಂ ಆಗುವುದಿಲ್ಲ. 10 ಘಂಟೆಗೆ ಚಿತ್ರದ ಎಲ್ಲಾ ಪ್ರದರ್ಶನಗಳು ಆರಂಭ ಆಗಲಿವೆ’’ ಎಂದು ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು ಟಿವಿ9ಗೆ ಹೇಳಿಕೆ ನೀಡಿದ್ದಾರೆ.

  • 14 Oct 2021 08:36 AM (IST)

    ಮುಖ್ಯ ಚಿತ್ರಮಂದಿರಗಳಲ್ಲಿ ಸಿನಿಮಾಗಳಿಗೆ ಬ್ರೇಕ್ ಬಿದ್ದಿದ್ದು ಏಕೆ?

    ‘ಕೋಟಿಗೊಬ್ಬ 3’ ಹಾಗೂ ‘ಸಲಗ’ ಚಿತ್ರವನ್ನು ಅಕ್ಕಪಕ್ಕದ ಮುಖ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಫ್ಯಾನ್ಸ್ ವಾರ್​ಗೆ ಬ್ರೇಕ್ ಬಿದ್ದಿದೆ. ಪ್ರಸ್ತುತ ‘ಭೂಮಿಕಾ’ದಲ್ಲಿ ಕೋಟಿಗೊಬ್ಬ 3 ಹಾಗೂ ತ್ರಿವೇಣಿಯಲ್ಲಿ ಸಲಗಾ ಚಿತ್ರಗಳು ರಿಲೀಸ್ ಆಗಿವೆ.

  • 14 Oct 2021 08:25 AM (IST)

    ಜೋರಾಗಿದೆ ‘ಸಲಗ’ ಬಿಡುಗಡೆಯ ಸಂಭ್ರಮ

    ನಟ ದುನಿಯಾ ವಿಜಯ್ ನಟಿಸಿ ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರದ ಬಿಡುಗಡೆಯ ಸಂಭ್ರಮ ಜೋರಾಗಿದೆ. ಈಗಾಗಲೇ ಚಿತ್ರದ ಫಸ್ಟ್ ಶೋ ಹೌಸ್​ಫುಲ್ ಆಗಿದೆ. ಬಿಡುಗಡೆಯ ಸಂಭ್ರಮದ ಲೈವ್ ಇಲ್ಲಿ ಲಭ್ಯವಿದೆ.

  • 14 Oct 2021 08:18 AM (IST)

    ‘ಕೋಟಿಗೊಬ್ಬ 3’ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಕೆರಳಿದ ಅಭಿಮಾನಿಗಳು

    ‘ಕೋಟಿಗೊಬ್ಬ 3’ ಸಿನಿಮಾ ಬೆಳಗ್ಗೆ ಶೋ ರದ್ದಾಗಿದ್ದರ ಕುರಿತು, ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಸೂರಪ್ಪ ಬಾಬುಗೆ ಅಭಿಮಾನಿಗಳು ವಾರ್ನಿಂಗ್ ಮಾಡಿದ್ದು, ಸ್ಟಾರ್ ಸಿನಿಮಾ ಮಾಡಿ ಹೀಗೆ ಮಾಡಿದ್ರೆ ಅವರೆಂಥ ನಿರ್ಮಾಪಕರು ಎಂದು ಕಿಡಿಕಾರಿದ್ಧಾರೆ. ವಿಷ್ಣುವರ್ಧನ್ ಅವರಿಗೂ ಸೂರಪ್ಪ ಬಾಬು ಹೀಗೆಯೇ ತೊಂದರೆ ಕೊಟ್ಟಿದ್ದರು ಎಂದು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೆಲವು ಅಭಿಮಾನಿಗಳು ನಿರ್ಮಾಪಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

  • 14 Oct 2021 08:14 AM (IST)

    ‘ಚಿತ್ರಮಂದಿರಗಳಿಗೆ 100% ಆಕ್ಯುಪೆನ್ಸಿಯನ್ನು ಒತ್ತಾಯ ಮಾಡಿ ಪಡೆದಿದ್ದು ಯಾವ ಪುರುಷಾರ್ಥಕ್ಕೆ’?; ಫ್ಯಾನ್ಸ್ ಗರಂ

    ‘ಕೋಟಿಗೊಬ್ಬ 3’ ಚಿತ್ರದ ಫ್ಯಾನ್ಸ್ ಶೋ ರದ್ದಾಗಿದ್ದರ ಕುರಿತು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಿಗೆ 100% ಆಕ್ಯುಪೆನ್ಸಿ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪಡೆದಿದ್ದು ಯಾವ ಪುರುಷಾರ್ಥಕ್ಕೆ ಎಂದು ಫ್ಯಾನ್ಸ್ ಗರಂ ಆಗಿ ಪ್ರಶ್ನಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಲ್ಲದೇ ಶೋ ಕ್ಯಾನ್ಸಲ್ ಮಾಡುವುದು ನೋಡಿದ್ದೆವು. ಆದರೆ ರಾತ್ರಿಯೆಲ್ಲಾ ನಿದ್ರೆ ಬಿಟ್ಟು ಇಂದು ಫ್ಯಾನ್ಸ್ ಆಗಮಿಸಿ, ಹೌಸ್​ಫುಲ್ ಆದರೂ ಕೂಡ ಶೋ ಕ್ಯಾನ್ಸಲ್ ಆಗಿದೆ. ಕನ್ನಡ ಚಿತ್ರಗಳೆಂದರೆ ಎಲ್ಲರಿಗೂ ತಾತ್ಸಾರ ಆಗಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

    ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇಲ್ಲಿದೆ:

  • 14 Oct 2021 08:06 AM (IST)

    ‘ಕೋಟಿಗೊಬ್ಬ 3’ ಫ್ಯಾನ್ಸ್ ಶೋ ಕ್ಯಾನ್ಸ್ಲ್ ಆಗಿದ್ದಕ್ಕೆ ಅಭಿಮಾನಿಗಳು ಹೇಳಿದ್ದೇನು?

    ಬೆಂಗಳೂರಿನ ಹಲವೆಡೆ ‘ಕೋಟಿಗೊಬ್ಬ 3’ ಚಿತ್ರದ ಫ್ಯಾನ್ಸ್ ಶೋ ರದ್ದಾಗಿದೆ. ಈ ಕುರಿತು ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಫ್ಯಾನ್ಸ್ ಟಿವಿ9ನೊಂದಿಗೆ ಹಂಚಿಕೊಂಡಿರುವ ಅನಿಸಿಕೆಗಳು ಇಲ್ಲಿವೆ.

  • 14 Oct 2021 08:01 AM (IST)

    ಸುದೀಪ್ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ ಚಿತ್ರ ಸ್ವಾಗತಿಸಿದ ಅಭಿಮಾನಿಗಳು

    ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಹಬ್ಬ. ಬಹಳ ಸಂತಸದಿಂದ ಅವರು ಚಿತ್ರವನ್ನು ಸ್ವಾಗತಿಸಿದ್ದಾರೆ. ಸುದೀಪ್​ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು, ಕಿಚ್ಚ ಸುದೀಪ್​ಗೆ ಜೈ ಎಂದು ಘೋಷಣೆ ಕೂಗಿದ್ದಾರೆ. ಈ ಕುರಿತ ವಿಡಿಯೋ ವರದಿ ಇಲ್ಲಿದೆ.

  • 14 Oct 2021 07:57 AM (IST)

    ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲೂ ‘ಕೋಟಿಗೊಬ್ಬ 3’ ಫಸ್ಟ್ ಶೋ ಕ್ಯಾನ್ಸಲ್

    ಕೋಟಿಗೊಬ್ಬನ ಕಣ್ತುಂಬಿಕೊಳ್ಳೊಕೆ ಟಿಕೆಟ್ ಬುಕ್ ಮಾಡಿ ಜೆಪಿ ನಗರದ ಸಿದ್ದಲಿಂಗೇಶ್ವರ ಥಿಯೇಟರ್​​ಗೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಚಿತ್ರದ ಪ್ರದರ್ಶನ ಕ್ಯಾನ್ಸಲ್ ಆಗಿದ್ದು, ವಿತರಕರು ಹಾಗೂ ನಿರ್ಮಾಪಕರ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

  • 14 Oct 2021 07:54 AM (IST)

    ತ್ರಿವೇಣಿ ಚಿತ್ರಮಂದಿರದಲ್ಲಿ ‘ಸಲಗ’ ಫಸ್ಟ್ ಶೋ ಹೌಸ್ ಫುಲ್

    ನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರದ ಬಿಡುಗಡೆ ಸಂಭ್ರಮ ಜೋರಾಗಿದೆ. ಈಗಾಗಲೇ ಫಸ್ಟ್ ಶೋ ಹೌಸ್ ಫುಲ್ ಆಗಿದೆ.

  • 14 Oct 2021 07:52 AM (IST)

    ‘ಕೋಟಿಗೊಬ್ಬ 3’ ಚಿತ್ರದ ಫ್ಯಾನ್ಸ್ ಶೋ ರದ್ದು; ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

    ‘ಕೋಟಿಗೊಬ್ಬ 3’ ಚಿತ್ರದ ಫ್ಯಾನ್ಸ್ ಶೋ ತಾಂತ್ರಿಕ ಕಾರಣಗಳಿಂದ ರದ್ದಾಗಿದೆ. ಮಾಗಡಿ ರಸ್ತೆಯ ಪ್ರಸನ್ನ, ಅವಳ ಹಳ್ಳಿಯ ವೆಂಕಟೇಶ್ವರ ಥಿಯೇಟರ್ ಸೇರಿದಂತೆ ಬೆಂಗಳೂರಿನ ಹಲವು ಚಿತ್ರ ಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಆಯೋಜನೆಗೊಂಡಿದ್ದ ಮಾರ್ನಿಂಗ್ ಶೋ ರದ್ದಾಗಿದೆ. ಅಭಿಮಾಣಿಗಳು ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶೋ ಕ್ಯಾನ್ಸಲ್ ಮಾಡಿರುವುದಾಗಿ ಚಿತ್ರಮಂದಿರದ ಆಡಳಿತ ಮಂಡಳಿ ಮಂದಿರಗಳ ಮುಂದೆ ಬೋರ್ಡ್ ಹಾಕಿದೆ. ಆನ್ ಲೈನ್ ಮೂಲಕ ಹಣವನ್ನು ರೀಫಂಡ್ ಮಾಡುವುದಾಗಿ ತಿಳಿಸಿದೆ. ಫ್ಯಾನ್ಸ್ ಶೋ ರದ್ದಾದ ಕಾರಣ, ಚಿತ್ರದ ಮೊದಲ ಶೋ 10 ಗಂಟೆಗೆ ಆರಂಭವಾಗಲಿದೆ.

  • 14 Oct 2021 07:48 AM (IST)

    ‘ಕೋಟಿಗೊಬ್ಬ 3’ ಚಿತ್ರದ ಲೈವ್ ಅಪ್ಡೇಟ್ಸ್ ಇಲ್ಲಿದೆ

    ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಯ ಸಂಪೂರ್ಣ ಲೈವ್ ವಿಡಿಯೋ ಇಲ್ಲಿ ಲಭ್ಯವಿದೆ.

  • Published On - Oct 14,2021 7:43 AM

    Follow us