ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಜಟಾಪಟಿ ಶುರುವಾದಾಗಿನಿಂದಲೂ ರಾಜಕೀಯ ವಲಯದಲ್ಲಿ ತೀವ್ರ ಕೌತುಕ ನಿರ್ಮಾಣ ಆಗಿತ್ತು. ಈಗ ಸಚಿವ ಸಂಪುಟದ ಕುರಿತು ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲ ಶಾಸಕರ ನಡೆ-ನುಡಿ ಕೂಡ ಗಮನ ಸೆಳೆಯುತ್ತಿದೆ. ಈ ನಡುವೆ ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅವರು ಪರಸ್ಪರ ಭೇಟಿ ಆಗಿರುವುದು ಕೌತುಕ ಮೂಡಿಸಿದೆ. ಮೈಸೂರಿನಲ್ಲಿ (Mysore) ಈ ಗಣ್ಯರಿಬ್ಬರು ಭೇಟಿ ಆಗಿದ್ದಾರೆ. ಈ ದಿಢೀರ್ ಭೇಟಿಗೆ ಕಾರಣ ಏನು ಎಂದು ಎಲ್ಲರ ಮನದಲ್ಲೂ ಪ್ರಶ್ನೆ ಮೂಡಿದೆ.
ಶಿವರಾಜ್ಕುಮಾರ್ ಅವರು ಈವರೆಗೂ ನೇರವಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದವರಲ್ಲ. ಆದರೆ ಅವರ ಕುಟುಂಬಕ್ಕೂ ರಾಜಕೀಯಕ್ಕೂ ನಂಟು ಮೊದಲಿನಿಂದಲೂ ಇದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಳಿಯ ಶಿವರಾಜ್ಕುಮಾರ್. ಅವರ ಪತ್ನಿ ಗೀತಾ ಕೂಡ ಈ ಹಿಂದೆ ಚುನಾವಣೆಯ ಕಣಕ್ಕೆ ಇಳಿದಿದ್ದರು. ಆಗೆಲ್ಲ ಪತ್ನಿ ಪರವಾಗಿ ಶಿವರಾಜ್ಕುಮಾರ್ ಪ್ರಚಾರ ಮಾಡಿದ್ದರು. ಹೀಗೆ ಪರೋಕ್ಷವಾಗಿ ಅವರು ರಾಜಕೀಯದ ಜೊತೆ ಸಂಪರ್ಕ ಹೊಂದಿದ್ದಾರೆ.
ಈಗ ಶಿವರಾಜ್ಕುಮಾರ್ ಅವರು ಮೈಸೂರಿನಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರನ್ನು ಭೇಟಿ ಆಗಿರುವುದಕ್ಕೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಇದೊಂದು ಸಹಜ ಭೇಟಿ ಎನ್ನಲಾಗಿದೆ. ಇಂದು (ಜು.30) ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಈಶ್ವರಪ್ಪ ಬಂದಿದ್ದಾರೆ. ಬಳಿಕ ಉಪಾಹಾರಕ್ಕಾಗಿ ಖಾಸಗಿ ಹೋಟೆಲ್ಗೆ ಅವರು ತೆರಳಿದರು. ಇದೇ ವೇಳೆ ಆ ಹೋಟೆಲ್ನಲ್ಲಿದ್ದ ಶಿವರಾಜ್ಕುಮಾರ್ ಅವರನ್ನು ಈಶ್ವರಪ್ಪ ಭೇಟಿಯಾದರು.
ಈ ಭೇಟಿಯಲ್ಲಿ ಶಿವರಾಜ್ಕುಮಾರ್ ಮತ್ತು ಈಶ್ವರಪ್ಪ ಅವರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ಅವರ ಫಿಟ್ನೆಸ್ಗೆ ಈಶ್ವರಪ್ಪ ಮೆಚ್ಚುಗೆ ಸೂಚಿಸಿದ್ದಾರೆ. ಹೋಟೆಲ್ನಲ್ಲಿದ್ದ ಅಭಿಮಾನಿಗಳು ಇಬ್ಬರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಡಾ. ರಾಜ್ಕುಮಾರ್ ಅವರ ತಂಗಿ (ನಾಗತ್ತೆ) ಅವರನ್ನು ನೋಡಿಕೊಂಡು ಬರಲು ಶಿವರಾಜ್ಕುಮಾರ್ ಗಾಜನೂರಿನತ್ತ ಪ್ರಯಾಣ ಬೆಳೆಸಿದ್ದರು.
ಸದ್ಯ ಶಿವರಾಜ್ಕುಮಾರ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಎ. ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ‘ವೇದ’, ‘ಬೈರಾಗಿ’ ಮುಂತಾದ ಸಿನಿಮಾಗಳ ಕೆಲಸಗಳು ಪ್ರಗತಿಯಲ್ಲಿವೆ.
ಇದನ್ನೂ ಓದಿ:
ಶಿವರಾಜ್ಕುಮಾರ್ 124ನೇ ಚಿತ್ರಕ್ಕೆ ನಾಯಕಿಯಾದ್ರು ಮೆಹ್ರೀನ್ ಪೀರ್ಜಾದಾ
ಕಷ್ಟಕಾಲದಲ್ಲಿ ಸಿನಿಮಾ ಕಾರ್ಮಿಕರ ಕೈ ಹಿಡಿದ ಶಿವರಾಜ್ಕುಮಾರ್; 10 ಲಕ್ಷ ರೂ. ನೆರವು
Published On - 1:37 pm, Fri, 30 July 21