ಸೋನು ನಿಗಂ ಹಾಡು ತೆಗೆದು ಹಾಕಿದ ಸಿನಿಮಾ ತಂಡ

Sonu Nigam controversy: ಗಾಯಕ ಸೋನು ನಿಗಂ ವಿರುದ್ಧ ಅಸಹಕಾರ ಪ್ರದರ್ಶಿಸುವ ನಿರ್ಧಾರವನ್ನು ನಿನ್ನೆಯಷ್ಟೆ ಫಿಲಂ ಚೇಂಬರ್ ಪ್ರಕಟಿಸಿದೆ. ಇದರ ನಡುವೆ ‘ಕುಲದಲ್ಲಿ ಕೀಳ್ಯಾವುದೊ’ ಚಿತ್ರತಂಡ ತಮ್ಮ ಸಿನಿಮಾಕ್ಕೆ ಸೋನು ನಿಗಂ ಹಾಡಿದ್ದ ಹಾಡೊಂದನ್ನು ತೆಗೆದು ಹಾಕಿದೆ. ಬೇರೊಬ್ಬ ಗಾಯಕರಿಂದ ಅದೇ ಹಾಡು ಹಾಡಿಸಿದೆ.

ಸೋನು ನಿಗಂ ಹಾಡು ತೆಗೆದು ಹಾಕಿದ ಸಿನಿಮಾ ತಂಡ
Sonu Nigam

Updated on: May 06, 2025 | 5:45 PM

ಸೋನು ನಿಗಂ (Sonu Nigam), ಕನ್ನಡಿಗರ ಕನ್ನಡಾಭಿಮಾನದ ಬಗ್ಗೆ ಆಡಿರುವ ಮಾತುಗಳು ವಿವಾದ ಸೃಷ್ಟಿಸಿದ್ದು, ಈಗಾಗಲೇ ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ದೂರು ದಾಖಲಿಸಿವೆ. ಬೆಂಗಳೂರು ಪೊಲೀಸರು ಸಹ ಸೋನು ನಿಗಂ ಅವರಿಗೆ ನೊಟೀಸ್ ನೀಡಿ ಉತ್ತರಿಸುವಂತೆ ತಾಕೀತು ಮಾಡಿದ್ದಾರೆ. ಫಿಲಂ ಚೇಂಬರ್​ನಲ್ಲಿ ಈ ಬಗ್ಗೆ ಸಭೆ ನಡೆಸಿ ಸೋನು ನಿಗಂ ವಿರುದ್ಧ ಅಸಹಕಾರ ಪ್ರದರ್ಶಿಸುವುದಾಗಿ ಘೋಷಿಸಲಾಗಿದೆ. ಇದೆಲ್ಲದರ ನಡುವೆ ಕನ್ನಡ ಸಿನಿಮಾ ಒಂದು ಸೋನು ನಿಗಂ ಹಾಡಿದ್ದ ಹಾಡನ್ನೇ ಸಿನಿಮಾದಿಂದ ತೆಗೆದು ಹಾಕಿದೆ.

‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾಕ್ಕಾಗಿ ಸೋನು ನಿಗಂ ಅವರಿಂದ ಹಾಡೊಂದನ್ನು ಹಾಡಿಸಲಾಗಿತ್ತು. ಆದರೆ ವಿವಾದದ ಬಳಿಕ ಆ ಹಾಡನ್ನು ಚಿತ್ರತಂಡ ಕೈಬಿಟ್ಟಿದೆ. ‘ಮನಸ್ಸು ಹಾಡ್ತದೆ..ವಯಸ್ಸು ಕಾಡ್ತದೆ’ ಎಂಬ ಹಾಡೊಂದನ್ನು ಸೋನು ನಿಗಂ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾಕ್ಕಾಗಿ ಹಾಡಿದ್ದರು. ಆ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಸಹ ಆಗಿತ್ತು. ಅದರೆ ವಿವಾದದ ಬಳಿಕ ಆ ಹಾಡನ್ನು ಯೂಟ್ಯೂಬ್​ನಲ್ಲಿ ಪ್ರೈವೇಟ್ ಮಾಡಿದೆ. ಅಲ್ಲದೆ ಅದೇ ಹಾಡನ್ನು ಮತ್ತೊಬ್ಬ ಗಾಯಕರಿಂದ ಮತ್ತೆ ಹಾಡಿಸಿದ್ದು, ಅದೇ ಹಾಡನ್ನು ಯೂಟ್ಯೂಬ್​ಗೆ ಅಪ್​ಲೋಡ್ ಮಾಡುವುದಾಗಿ ಹೇಳಿದ್ದಾರೆ.

‘ಪ್ರಚಾರದ ಮನಸ್ಥಿತಿ ನಮ್ಮದಲ್ಲ. ಕನ್ನಡ ಪರವಾಗಿ ಇರಬೇಕೆಂಬುದಷ್ಟೆ ನಮ್ಮ ಯೋಚನೆ. ಸೋನು ನಿಗಂ ಮನಸ್ಸಿನಲ್ಲಿ ವಿಕೃತ ರೂಪ ಕಾಣಿಸಿತು, ಅವರ ಹಾಡನ್ನ ಬಳಸಿಕೊಳ್ಳಬೇಕಾ ಅನ್ನೋ ಯೋಚನೆ ಶುರುವಾಯ್ತು, ಆ ಸಾಂಗ್ ಕೇಳೋವಾಗ ಕಿವಿಗೆ ಹತ್ತಿ ಇಟ್ಕೊಳ್ಳಿ ಅಂತ ಹೇಳೋ ಪರಿಸ್ತಿತಿಲಿದ್ದೀವಿ. ಸೋನು ನಿಗಮ್ ಹಾಡನ್ನ ಧಿಕ್ಕರಿಸ್ತಿದ್ದಿವಿ. ಚೇತನ್ ಸೋಸ್ಕಾ ಅವರಿಂದ ಅದೇ ಹಾಡನ್ನು ಈಗಾಗಲೇ ಹಾಡಿಸಿ ಆಗಿದೆ. ಅದೇ ಹಾಡನ್ನು ಬಿಡುಗಡೆ ಮಾಡುತ್ತೀವಿ’ ಎಂದಿದ್ದಾರೆ ನಿರ್ಮಾಪಕ ಸಂತೋಷ್.

ಇದನ್ನೂ ಓದಿ:ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್

‘ನಮ್ಮ ಸಿನಿಮಾದ ಸಂಗೀತ ನಿರ್ದೇಶಕ ಮನೋಮೂರ್ತಿ ಅವರೊಟ್ಟಿಗೆ ಈ ಬಗ್ಗೆ ಮಾತನಾಡಿದೆ, ಹಾಡು ಬರೆದ ಯೋಗರಾಜ್ ಭಟ್ ಅವರೊಟ್ಟಿಗೂ ಈ ವಿಷಯವನ್ನು ನಮ್ಮ ನಿರ್ಣಯಕ್ಕೆ ಬಿಟ್ಟರು, ಹಾಗಾಗಿ ಸೋನು ನಿಗಂ ಹಾಡನ್ನು ತೆಗೆದು ಹಾಕಿದ್ದೀವಿ. ಸೋನು ನಿಗಂ ಕ್ಷಮೆ ಕೇಳಿದ್ದಾರೆ, ಆದರೆ ಅವರು ಕ್ಷಮೆ ಕೇಳಿರುವ ರೀತಿ ಸರಿಯಿಲ್ಲ. ಕನ್ನಡಿಗರಿಗೆ ಅವಮಾನ ಮಾಡಿದ ಸೋನು ನಿಗಂ ಧ್ವನಿ ನಮಗೆ ಬೇಕಿಲ್ಲ’ ಎಂದು ಅವರು ಹೇಳಿದ್ದಾರೆ.

ವಿವಾದ ದೊಡ್ಡದಾಗಿ ಫಿಲಂ ಚೇಂಬರ್ ಅಸಹಕಾರ ಘೋಷಿಸಿದ ಬಳಿಕ ಕ್ಷಮೆ ಕೇಳಿರುವ ಸೋನು ನಿಗಂ, ನನ್ನ ಈಗೋ (ಅಹಂ) ಗಿಂತಲೂ ಕನ್ನಡಿಗರ ಮೇಲೆ ನನಗಿರುವ ಪ್ರೀತಿಯೇ ದೊಡ್ಡದು’ ಎಂದಿದ್ದಾರೆ. ಸೋನು ನಿಗಂ ಕ್ಷಮೆ ಕೇಳಿದ ಬಳಿಕ ಫಿಲಂ ಚೇಂಬರ್​ನಲ್ಲಿ ಮತ್ತೊಂದು ಸಭೆ ಕರೆಯಲಾಗಿದ್ದು. ಅಸಹಕಾರ ನಿರ್ಣಯವನ್ನು ಹಿಂಪಡೆಯುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ