ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ; ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಒತ್ತಾಯ

| Updated By: ಮದನ್​ ಕುಮಾರ್​

Updated on: Jun 11, 2021 | 11:36 AM

ಜೂ.6ರಂದು ಚೇತನ್​ ಮಾಡಿರುವ ಒಂದು ಟ್ವೀಟ್​ ಮತ್ತು ಫೇಸ್​ಬುಕ್​ ಪೋಸ್ಟ್​ನಿಂದ ಇಷ್ಟೆಲ್ಲ ಕಿರಿಕ್​ ಶುರುವಾಗಿದೆ. ಅವರ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿದೆ.

ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ; ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಒತ್ತಾಯ
ಚೇತನ್​, ಶಿವರಾಮ್ ಹೆಬ್ಬಾರ್​
Follow us on

ತಮ್ಮ ಸಿದ್ಧಾಂತದ ಕಾರಣದಿಂದ ನಟ ‘ಆ ದಿನಗಳು’ ಚೇತನ್​ ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಾರೆ. ಈಗ ಅವರ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿದೆ. ಚೇತನ್​ ಮಾಡಿದ ಸೋಶಿಯಲ್​ ಮೀಡಿಯಾ ಪೋಸ್ಟ್​ನಿಂದಾಗಿ ವಿವಾದ ಶುರುವಾಗಿದೆ. ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಕೂಡ ಚೇತನ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇತನ್​ ಅವರನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಶಿವರಾಮ್​ ಹೆಬ್ಬಾರ್​ ಮನವಿ ಮಾಡಿಕೊಂಡಿದ್ದಾರೆ.

‘ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿದೆ. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಇನ್ನು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು’ ಎಂದು ಶಿವರಾಮ್​ ಹೆಬ್ಬಾರ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದಾರೆ.

‘ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಶಿವರಾಮ್​ ಹೆಬ್ಬಾರ್​ ಬರೆದುಕೊಂಡಿದ್ದಾರೆ.

ಜೂ.6ರಂದು ಚೇತನ್​ ಮಾಡಿರುವ ಒಂದು ಟ್ವೀಟ್​ ಮತ್ತು ಫೇಸ್​ಬುಕ್​ ಪೋಸ್ಟ್​ನಿಂದ ಇಷ್ಟೆಲ್ಲ ಕಿರಿಕ್​ ಶುರುವಾಗಿದೆ. ‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು’ ಎಂದು ಅಂಬೇಡ್ಕರ್​ ಹೇಳಿದ್ದಾರೆ. ‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪೃಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ಎಂಬುದಾಗಿ ಪೆರಿಯಾರ್ ಹೇಳಿದ್ದಾರೆ’ ಎಂದು ಚೇತನ್​ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದರು.

ಚೇತನ್​ ವಿರುದ್ಧ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕೂಡ ಕೆಲವೇ ದಿನಗಳ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ದೂರು ನೀಡಿದ್ದರು.

ಇದನ್ನೂ ಓದಿ:

ನಟ ಚೇತನ್ ಹೇಳಿಕೆ ಬ್ರಾಹ್ಮಣ ಸಮುದಾಯಕ್ಕೆ ನೋವು ತಂದಿದೆ, ಅವರು ಕ್ಷಮೆ ಕೇಳಬೇಕು; ಪೊಲೀಸ್ ಆಯುಕ್ತರಿಗೆ ದೂರು

ನಟ ಚೇತನ್​ ಬಹುಶಃ ಪ್ರಧಾನಿ ಮೋದಿ ಬಗ್ಗೆ ಮಾತ್ನಾಡಿರಬೇಕು: ಸುದೀಪ್​ ಹೀಗ್ಯಾಕಂದ್ರು?