ನಟ ಪುನೀತ್ ರಾಜ್ಕುಮಾರ್ (Puneeth Rajkumar) ಎಂದರೆ ಅಭಿಮಾನಿಗಳ ಪಾಲಿಗೆ ಒಂದು ಎಮೋಷನ್. ಕನ್ನಡ ಧ್ವಜದಲ್ಲಿ ಪುನೀತ್ ರಾಜ್ಕುಮಾರ್ ಅವರ ಫೋಟೋ ಹಾಕಿ ಫ್ಯಾನ್ಸ್ ಗೌರವ ಸಲ್ಲಿಸುತ್ತಿದ್ದಾರೆ. ಆದರೆ ಈ ರೀತಿ ಕನ್ನಡದ ಬಾವುಟದಲ್ಲಿ ಪುನೀತ್ ಅವರ ಫೋಟೋ ಹಾಕಿದ್ದನ್ನು ಮಹಿಳೆಯೊಬ್ಬರು ವಿರೋಧಿಸಿದ್ದಾರೆ. ಮಹಿಳೆಯ ವರ್ತನೆಗೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕದ ಬಾವುಟದಲ್ಲಿ (Kannada Flag) ಅಪ್ಪು ಫೋಟೋ ಇರುವುದನ್ನು ಮಹಿಳೆ ವಿರೋಧಿಸುತ್ತಿರುವ ವಿಡಿಯೋ ಲಭ್ಯವಾಗಿದೆ. ಈ ಮಹಿಳೆ ಕ್ಷಮೆ ಕೇಳಬೇಕು ಎಂದು ‘ಪವರ್ ಸ್ಟಾರ್’ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.
‘ನಾವು ಕೂಡ ಕನ್ನಡವರೇ. ನಮ್ಮ ಫೋಟೋ ಬಾವುಟದಲ್ಲಿ ಯಾಕೆ ಇಲ್ಲ? ಪುನೀತ್ ಅಂದ್ರೆ ಕನ್ನಡಾಂಬೆ ಅಲ್ಲ. ಪುನೀತನ ಚಿತ್ರ ಬಾವುಟದಲ್ಲಿ ಬರಬಾರದು’ ಎಂದು ಮಹಿಳೆಯು ಕೂಗಾಡಿದ್ದಾರೆ. ಈ ಘಟನೆಯನ್ನು ಅಪ್ಪು ಅಭಿಮಾನಿಗಳು ಖಂಡಿಸಿದ್ದಾರೆ. ಮಹಿಳೆ ಹೇಳಿದ ಮಾತುಗಳನ್ನು ಸ್ಥಳದಲ್ಲೇ ಇದ್ದ ಆಟೋ ಚಾಲಕರು ವಿರೋಧಿಸಿದ್ದಾರೆ.
ಈ ಘಟನೆ ಬಗ್ಗೆ ಪುನೀತ್ ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ‘ಆಟೋದವರು ಪುನೀತ್ ಫೋಟೋ ಇರುವ ಬಾವುಟ ಹಾಕಿಕೊಂಡಿದ್ದರು. ಅದನ್ನು ನೋಡಿ ಈ ಮಹಿಳೆ ವಿರೋಧ ವ್ಯಕ್ತಪಡಿಸಿದರು. ತಾವು ಯಾರಿಗೂ ಹೆದರುವುದಿಲ್ಲ ಅಂತ ಕೂಗಾಡಿದ್ದಾರೆ. ಆಕೆ ಕ್ಷಮೆ ಕೇಳಬೇಕು. ಪ್ರತಿ ಮನೆಯಲ್ಲೂ ಪುನೀತ್ ರಾಜ್ಕುಮಾರ್ ಅವರ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಅಂಥವರ ಬಗ್ಗೆ ಈ ರೀತಿ ಮಾತಾಡಿದ್ದು ಸರಿಯಲ್ಲ. ಬಾವುಟದಲ್ಲಿ ಅಪ್ಪು ಫೋಟೋ ಹಾಕಿದ್ದಕ್ಕೆ ಸರ್ಕಾರವೇ ಆಕ್ಷೇಪಿಸಿಲ್ಲ. ನಿಧನರಾದ ವ್ಯಕ್ತಿ ಬಗ್ಗೆ ಈ ಮಹಿಳೆ ಈ ರೀತಿ ಮಾತನಾಡಿದ್ದು ತಪ್ಪು. ಲೈವ್ನಲ್ಲಿ ಬಂದು ಅವರು ಕ್ಷಮೆ ಕೇಳಬೇಕು’ ಎಂದು ಅಪ್ಪು ಅಭಿಮಾನಿ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ, ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ, ಕನ್ನಡ ರಾಜ್ಯೋತ್ಸವ ಆಚರಣೆ, ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ… ಈ ವಿಶೇಷ ದಿನಗಳು ಒಂದರ ಹಿಂದೊಂದು ಬಂದಿರುವ ಕಾರಣ ಅಭಿಮಾನಿಗಳು ಎಲ್ಲವನ್ನೂ ಒಟ್ಟಾಗಿ ಆಚರಿಸಿದ್ದಾರೆ. ಅನೇಕ ರಸ್ತೆಗಳಲ್ಲಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಇರುವ ಕನ್ನಡದ ಬಾವುಟ ಹಾರಾಡುತ್ತಿದೆ. ಹಲವು ಬಗೆಯಲ್ಲಿ ಅಭಿಮಾನಿಗಳು ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:27 pm, Thu, 3 November 22