For Regn: ಮಿಲನಾ-ಪೃಥ್ವಿ ಅದೃಷ್ಟದ ತಿಂಗಳಲ್ಲೇ ‘ಫಾರ್ ರಿಜಿಸ್ಟ್ರೇಷನ್’ ಚಿತ್ರ ರಿಲೀಸ್; ಫೆ.10ಕ್ಕೆ ಡೇಟ್ ಫಿಕ್ಸ್
Pruthvi Ambaar | Milana Nagaraj: ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಮಿಲನಾ ನಾಗರಾಜ್ ಹಾಗೂ ಪೃಥ್ವಿ ಅಂಬರ್ ಜೋಡಿಯಾಗಿ ನಟಿಸಿದ್ದಾರೆ.
ನಟಿ ಮಿಲನಾ ನಾಗರಾಜ್ (Milana Nagaraj) ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿ ಬ್ಯುಸಿಯಾಗಿದ್ದಾರೆ. ಅವರಿಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ. ಮಿಲನಾ ನಟಿಸಿದ್ದ ‘ಲವ್ ಮಾಕ್ಟೇಲ್’ ಚಿತ್ರ 2020ರ ಫೆಬ್ರವರಿ ಸನಿಹದಲ್ಲಿ (ಜ.31) ತೆರೆಕಂಡಿತ್ತು. ‘ಲವ್ ಮಾಕ್ಟೇಲ್ 2’ ಚಿತ್ರ 2022ರ ಫೆ.11ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಅದೇ ರೀತಿ ಪೃಥ್ವಿ ಅಂಬರ್ (Pruthvi Ambaar) ನಟಿಸಿದ್ದ ‘ದಿಯಾ’ ಚಿತ್ರ 2020ರ ಫೆ.7ರಂದು ತೆರೆಕಂಡು ಗಮನ ಸೆಳೆದಿತ್ತು. ಈಗ ಮಿಲನಾ ಮತ್ತು ಪೃಥ್ವಿ ಅಂಬರ್ ಅವರು ಜೊತೆಯಾಗಿ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ (For Regn) ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲೇ ರಿಲೀಸ್ ಆಗುತ್ತಿರುವುದು ವಿಶೇಷ. 2023ರ ಫೆ.10ರಂದು ಈ ಸಿನಿಮಾ ತೆರೆಕಾಣಲಿದೆ.
ನಿರ್ಮಾಪಕ ನವೀನ್ ರಾವ್ ಹಾಗೂ ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣ ಮಾಡಿದರು. ಈ ಸಿನಿಮಾದಲ್ಲಿ ಪೃಥ್ವಿ ಅಂಬರ್, ಮಿಲನಾ ನಾಗರಾಜ್ ಜೊತೆಗೆ ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲ ನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದ ಕಲಾವಿದರು ನಟಿಸಿದ್ದಾರೆ.
‘ಒಳ್ಳೆಯ ತಂಡದ ಜೊತೆ ಒಂದು ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಫೆಬ್ರವರಿ ತಿಂಗಳು ನನಗೆ ಲಕ್ಕಿ. ಈ ಚಿತ್ರ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರುತ್ತಿರುವುದು ಮತ್ತಷ್ಟು ಸಂತಸ ತಂದಿದೆ’ ಎಂದು ಮಿಲನಾ ನಾಗರಾಜ್ ಹೇಳಿದ್ದಾರೆ. ‘ಎಲ್ಲದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗಿರುತ್ತದೆ ಎಂಬುದನ್ನು ನಾವು ತೋರಿಸಿದ್ದೇವೆ’ ಎಂದಿದ್ದಾರೆ ಪೃಥ್ವಿ ಅಂಬರ್.
ನಿರ್ದೇಶಕ ನವೀನ್ ದ್ವಾರಕನಾಥ್ ಹಾಗೂ ನಿರ್ಮಾಪಕ ನವೀನ್ ರಾವ್ ಅವರು ಬಹುಕಾಲದ ಸ್ನೇಹಿತರು. ‘ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದ್ದು ನನ್ನ ಸ್ನೇಹಿತ ನವೀನ್ ರಾವ್. ನಮ್ಮ ಸಿನಿಮಾ ಆರಂಭಿಸುವಾಗ ಪೃಥ್ವಿ ಅಂಬರ್ ಅವರ ‘ದಿಯಾ’ ಹಾಗೂ ಮಿಲನಾ ನಾಗರಾಜ್ ಅವರು ‘ಲವ್ ಮಾಕ್ಟೇಲ್’ ಚಿತ್ರ ಯಶಸ್ವಿ ಆಗಿದ್ದವು. ಅವರಿಬ್ಬರೇ ನಮ್ಮ ಚಿತ್ರದ ನಾಯಕ-ನಾಯಕಿ ಅಂತ ನಾವು ನಿರ್ಧರಿಸಿದೆವು. ಈಗ ನಮ್ಮ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ’ ಎಂದು ನವೀನ್ ದ್ವಾರಕನಾಥ್ ಹೇಳಿದ್ದಾರೆ. ಈ ಚಿತ್ರಕ್ಕೆ ಆರ್.ಕೆ. ಹರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.