ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿರೋ ಎ2 ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು (ಅಕ್ಟೋಬರ್ 9) 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆದಿದೆ. ಪೊಲೀಸರ ಪರ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದಾರೆ. ದರ್ಶನ್ ಪರ ಸುಳ್ಳು ಸಾಕ್ಷಿ ಸೃಷ್ಟಿಸಲಾಗಿದೆ ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ಆರೋಪಿಸಿದ್ದರು. ಇದೆಲ್ಲಕ್ಕೂ ಸ್ಪಷ್ಟನೆ ನೀಡುವ ಕೆಲಸವನ್ನು ಪ್ರಸನ್ನ ಕುಮಾರ್ ಮಾಡುತ್ತಿದ್ದಾರೆ.
‘ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಕ್ಷಿ ಸಂಖ್ಯೆ 76ರ ಹೇಳಿಕೆ ಇದೆ. ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ದರ್ಶನ್, ಪವಿತ್ರಾ ಗೌಡ ಬರುತ್ತಾರೆ ಮತ್ತು ದರ್ಶನ್ ಅವರು ರೇಣುಕಾಸ್ವಾಮಿ ಎದೆಗೆ ಹಾಗೂ ಮರ್ಮಾಂಗಕ್ಕೂ ಒದ್ದಿರುವುದಾಗಿ ಹೇಳಿಕೆ ನೀಡಿದ್ದಾನೆ. ಸಾಕ್ಷಿಗಳಾದ 76, 77, 78, 79 ಶೆಡ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇವರೆಲ್ಲರ ಮೊಬೈಲ್ ಟವರ್ ಲೊಕೇಷನ್ ಇದೇ ಶೆಡ್ ಬಳಿ ಸಿಕ್ಕಿದೆ. ಕಾಲ್ ವಿವರ, ರೆಕಾರ್ಡ್ಸ್ನಲ್ಲಿ ಇವರೆಲ್ಲಾ ಅಲ್ಲೇ ಇದ್ದಿದ್ದಕ್ಕೆ ಪುರಾವೆ ಒದಗಿಸಿವೆ. ದರ್ಶನ್ ಸೇರಿ ಆರೋಪಿಗಳು, ಸಾಕ್ಷಿಗಳು ಅಲ್ಲಿಯೇ ಇದ್ದರು’ ಎಂದು ಪ್ರಸನ್ನ ಕುಮಾರ್ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
‘ಜೂನ್ 8ರಂದೇ ಪಿಎಸ್ಐ ವಿನಯ್ಗೆ ಘಟನೆ ಬಗ್ಗೆ ಗೊತ್ತಿತ್ತು. ಜೂನ್ 9ರಂದು ಪಿಎಸ್ಐ ವಿನಯ್ಗೆ ಕೃತ್ಯದ ಸ್ಥಳದ ವಿಡಿಯೋ ಕಳಿಸಿದ್ದರೆಂದು’ ದರ್ಶನ್ ಪರ ವಕೀಲ ನಾಗೇಶ್ ವಾದಿಸಿದ್ದರು. ಇದಕ್ಕೆ ಪ್ರಸನ್ನ ಕುಮಾರ್ ಅವರು ವಿನಯ್ ಅವರ ಹೇಳಿಕೆಯನ್ನು ಓದಿದ್ದಾರೆ. ‘ನನಗೆ ಕರೆ ಮಾಡುವ ಪ್ರದೋಷ್ ಸಲಹೆ ಕೊಡಿ ಎಂದು ಹೇಳಿರುತ್ತಾನೆ. ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿ ಸಮಸ್ಯೆ ಆಗಿದೆ ಎಂದಿರುತ್ತಾನೆ. ಏರಿಯಾ, ಸ್ಥಳದ ಬಗ್ಗೆ ಗೊತ್ತಿಲ್ಲ ಎಂದು ಪ್ರದೋಷ್ ಹೇಳಿದ್ದ. ಸ್ಥಳೀಯ ಠಾಣೆಯಲ್ಲಿ ಸರೆಂಡರ್ ಆಗಲು ಸೂಚಿಸಿದ್ದೆ’ ಎಂದು ವಿನಯ್ ಹೇಳಿಕೆಯನ್ನು ಪ್ರಸನ್ನ ಕುಮಾರ್ ಓದಿದ್ದಾರೆ.
‘ಮರುದಿನ ಪ್ರದೋಶ್ ಪಿಎಸ್ಐಗೆ ಕರೆ ಮಾಡಿ ಘಟನೆಯ ಸ್ಥಳ ಹೇಳಿದ್ದರು. ಸುಮನಹಳ್ಳಿಯ ಸತ್ವಾ ಅಪಾರ್ಟ್‌ಮೆಂಟ್ ಬಳಿ ಘಟನೆಯಾಗಿದೆ ಎಂದಿದ್ದರು. ಪಿಎಸ್ಐ ವಿನಯ್ಗೆ ಕೃತ್ಯದ ಸ್ಥಳದ ಸಿಸಿಟಿವಿ ದೃಶ್ಯ ಕಳಿಸಿದ್ದಾಗಿ ಆರೋಪಿಸಲಾಗಿದೆ. ಆದರೆ ಪಿಎಸ್ಐ ವಿನಯ್ಗೆ ಕಳುಹಿಸಿರುವುದು ಶವ ಸಿಕ್ಕ ಸ್ಥಳದ ವಿಡಿಯೋ. ಅಪಾರ್ಟ್‌ಮೆಂಟ್ ಬಳಿ ಸ್ಕಾರ್ಪಿಯೋ ಬಂದಿದ್ದ ವಿಡಿಯೋ ಇದಾಗಿದೆ. ಪಟ್ಟಣಗೆರೆ ಶೆಡ್‌ನಲ್ಲೇ ಕೃತ್ಯವಾಗಿದೆ ಎಂದು ವಿನಯ್ಗೆ ತಿಳಿದಿರಲಿಲ್ಲ’ ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.
‘ಪ್ರದೋಶ್ ಮೊಬೈಲ್‌ನಲ್ಲಿ ಶವದ ಮತ್ತೊಂದು ಫೋಟೋ ಇದೆ. ಸ್ವತಃ ಪ್ರದೋಶ್ ಮೃತದೇಹದ ಫೋಟೋ ತೆಗೆದುಕೊಂಡಿದ್ದಾನೆ. ಈ ಫೋಟೋವನ್ನು ಪ್ರದೋಶ್‌ಗೆ ಬೇರೆಯವರು ಕಳುಹಿಸಿಲ್ಲ. ಎಫ್ಐಆರ್ ದಾಖಲಾದ ಮೇಲೆ ಎ15, 16, 17 ಸರೆಂಡರ್ ಆದರು. ಜೂನ್ 10ರಂದು ಇನ್ಸ್‌ಪೆಕ್ಟರ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ಆ ದಿನ ರಾತ್ರಿ 10 ಗಂಟೆಗೆ ಕೊಂದವರು ಇವರಲ್ಲ ಎಂಬುದು ತಿಳಿಯಿತು. ಮರುದಿನ ಬೆಳಗ್ಗೆ ಮೈಸೂರಿಗೆ ತೆರಳಿ 8 ಗಂಟೆಗೆ ದರ್ಶನ್ ಬಂಧಿಸಲಾಗಿದೆ’ ಎಂದಿದ್ದಾರೆ ಪ್ರಸನ್ನ ಕುಮಾರ್.
‘ಸಾಕ್ಷಿಗಳ ಹೇಳಿಕೆ ದಾಖಲಿಸಲು ವಿಳಂಬವೇಕೆಂದು ಪ್ರಶ್ನಿಸಲಾಗಿದೆ. ಸಾಕ್ಷಿಗಳಾದ ಕಿರಣ್, ಪುನೀತ್, ಮಲ್ಲಿಕಾರ್ಜುನ್ ಹಾಗೂ ನರೇಂದ್ರ ಸಿಂಗ್ ಟವರ್ ಲೊಕೇಷನ್ ಕೃತ್ಯದ ಸ್ಥಳದಲ್ಲಿದೆ. ಘಟನೆಯ ನಂತರ ಭಯವಾಗಿ ಮಹದೇಶ್ವರ ಬೆಟ್ಟಕ್ಕೆ ಸಾಕ್ಷಿಗಳು ತೆರಳಿರುತ್ತಾರೆ. ಜೂನ್ 10ರಂದು ಬೆಂಗಳೂರಿಗೆ ವಾಪಸ್ ಆಗುತ್ತಾರೆ. ಜೂನ್ 11ರಂದು ಕಬ್ಬಾಳಿಗೆ, ಜೂ.12ರಂದು ಹಾಸನ, ನಂತರ 16ರವರೆಗೆ ಗೋವಾ, ಜೂನ್ 16ಕ್ಕೆ ತಿರುಪತಿಗೆ ತೆರಳುತ್ತಾರೆ. ಜೂ.19ರಂದು ಹುಬ್ಬಳ್ಳಿಗೆ ತೆರಳಿ ಜೂ.20ರಂದು ಬೆಂಗಳೂರಿಗೆ ಮರಳುತ್ತಾರೆ. ಬೆಂಗಳೂರಿಗೆ ಬಂದ ತಕ್ಷಣ ಸಾಕ್ಷಿಯ ಹೇಳಿಕೆ ದಾಖಲಿಸಲಾಗಿದೆ. ಹೀಗಾಗಿ ಸಾಕ್ಷಿಯ ಹೇಳಿಕೆ ದಾಖಲಿಸಲು ಸಮಯ ತಗುಲಿದೆ’ ಎಂದಿದ್ದಾರೆ ಪ್ರಸನ್ನ ಕುಮಾರ್.
ಇದನ್ನೂ ಓದಿ: ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
‘ಆರೋಪಿಯ ಮೇಲಿನ ಅಪರಾಧ ಸಾಬೀತಾಗುತ್ತದೆಯೇ ಎಂಬುದನ್ನು ಈಗ ತೀರ್ಮಾನಿಸುತ್ತಿಲ್ಲ. ಕೇವಲ ಜಾಮೀನು ಅರ್ಜಿಯ ಬಗ್ಗೆಯಷ್ಟೇ ಕೋರ್ಟ್ ತೀರ್ಮಾನಿಸುತ್ತಿದೆ. ಹೀಗಾಗಿ ಕೂದಲು ಸೀಳಿದಂತೆ ಸಾಕ್ಷ್ಯಗಳ ವಿಶ್ಲೇಷಣೆ ಮಾಡಬೇಕಿಲ್ಲ’ ಎಂದು ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮರದ ಕೊಂಬೆಯಲ್ಲಿ ರಕ್ತದ ಕಲೆ ಇಲ್ಲವೆಂದು ಲ್ಯಾಬ್ ವರದಿ ಆಧರಿಸಿ ವಾದಿಸಲಾಗಿತ್ತು. ಇದಕ್ಕೆ ಪ್ರಸನ್ನ ಕುಮಾರ್ ಉತ್ತರಿಸಿದ್ದಾರೆ. ‘ಪಟ್ಟಣಗೆರೆ ಶೆಡ್ ಸುಮಾರು 6 ಎಕರೆ ವಿಸ್ತೀರ್ಣದಲ್ಲಿದೆ. ನೂರಾರು ವಾಹನಗಳನ್ನು ಅಲ್ಲಿ ಪಾರ್ಕ್ ಮಾಡಲಾಗಿದೆ. ಕೃತ್ಯದ ಸ್ಥಳದಿಂದ 96 ವಸ್ತುಗಳನ್ನು ಎಫ್ಎಸ್ಎಲ್‌ಗೆ ಕಳುಹಿಸಲಾಗಿತ್ತು. ಒಂದೆರಡು ವಸ್ತುಗಳಲ್ಲಿ ರಕ್ತದ ಕಲೆ ಇಲ್ಲವಾದರೆ ಮಹಜರು ಅನರ್ಹವಾಗುವುದಿಲ್ಲ’ ಎಂದು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಪ್ರಸನ್ನ ಕುಮಾರ್ ವಾದಮಂಡನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.